ಸಾರಾಂಶ
ಗದಗ ನಗರದ ಗಂಗಾಪೂರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ೧೭೮ರಲ್ಲಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಭೇಟಿ ನೀಡಿ ಪರಿಶೀಲಿಸಿದರು.
ಗದಗ: ನಗರದ ಗಂಗಾಪೂರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ೧೭೮ರಲ್ಲಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಭೇಟಿ ನೀಡಿ ಪರಿಶೀಲಿಸಿದರು.
ಸಕ್ಕರೆಯಲ್ಲಿ ಹುಳು, ಶೇಂಗಾ ಚಿಕ್ಕಿಗಳು ಬುಳುಸು ಬಂದಿರುವುದು, ಕೊಳೆತು ಹೋದ ತರಕಾರಿಗಳು, ಕೆಟ್ಟು ಹೋದ ಮೊಟ್ಟೆ ನೀಡಿರುವುದರಿಂದ ಹಾಗೂ ಇಲಿಗಳು ತಿಂದ ತರಕಾರಿ ಇನ್ನಿತರ ದವಸ ಧಾನ್ಯಬಳಸಿದ್ದರಿಂದ ಈ ರೀತಿ ಕಳಪೆ ಆಹಾರ ಸೇವಿಸಿ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಅಲ್ಲಿ ಸೇರಿದ್ದ ಮಕ್ಕಳ ಪಾಲಕರಾದ ನವೀನ ತಾತೂಸ್ಕರ, ಸರ್ದಾರ ಅಹ್ಮದ ಧಾರವಾಡ, ರೇಣುಕಾ.ಎನ್. ಕಬಾಡಿ ತಮ್ಮ ಅಳಲನ್ನು ತೋಡಿಕೊಂಡರು.ಈ ಸಮಯದಲ್ಲಿ ೧೬ ಮಕ್ಕಳ ಪೈಕಿ ೧೦ ಮಕ್ಕಳು ಮಾತ್ರ ಇದ್ದರು, ಇಂತಹ ಕಳಪೆ ಆಹಾರ ನೀಡುತ್ತಿರುವುದರಿಂದ ಬಹಳಷ್ಟು ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿರುವುದಿಲ್ಲ ಎಂದು ಅಲ್ಲಿ ನೆರೆದ ಪಾಲಕರು ತಿಳಿಸಿದರು.
ಈ ವೇಳೆ ನ್ಯಾಯಾಧೀಶ ಕೆ.ಗುರುಪ್ರಸಾದ ಅವರು, ಅವಧಿ ಮೀರಿದ ತೊಗರಿ ಬೇಳೆಗಳ ಪ್ಯಾಕೆಟ್‌ಗಳು ಕಂಡುಬಂದಿದ್ದು ಅವುಗಳನ್ನು ನಾಶ ಪಡಿಸಲು, ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ರಾಧಾ ಮಣ್ಣೂರ ಅವರಿಗೆ ನಿರ್ದೇಶಿಸಿ, ಅವಧಿ ಮೀರುವ ಮೊದಲೇ ಆಹಾರ ಸಾಮಗ್ರಿಗಳನ್ನು ಉಪಯೋಗಿಸಲು ಸೂಚಿಸಿದರು. ಅಂಗನವಾಡಿ ಕೇಂದ್ರ ಬಾಡಿಗೆ ಮನೆಯ ಕಟ್ಟಡದಲ್ಲಿ ಇದ್ದು, ಬೆಳಕಿನ ವ್ಯವಸ್ಥೆ ಇರಲಿಲ್ಲ, ಸಂಬಂಧಪಟ್ಟವರಿಗೆ ತಿಳಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಯಿತು. ಅಂಗನವಾಡಿ ಕೇಂದ್ರದ ಸ್ವಚ್ಛತೆ ಬಗ್ಗೆ ಗಮನ ಹರಿಸಲು, ಪೌಷ್ಟಿಕವಾದ ಸ್ವಚ್ಛತೆಯಿಂದ ಕೂಡಿದ ಆಹಾರವನ್ನು ಮಕ್ಕಳಿಗೆ ನೀಡಲು ಸೂಚಿಸಿದರು.ಅಂಗನವಾಡಿ ಶಿಕ್ಷಕಿ ಅಕ್ಕಮ್ಮ ಎಸ್. ಅಮರಗಟ್ಟಿ ಅವರನ್ನು ಅಮಾನತುಗೊಳಿಸಿ ಅವರ ಜಾಗಕ್ಕೆ ಪ್ರಭಾರಿಯಾಗಿ ಮಂಜುಳಾ ಬೆಟಗೇರಿ ಶಿಕ್ಷಕಿ ಅವರನ್ನು ವಾರಕ್ಕೆ ಮೂರು ದಿನಗಳ ಕಾಲ ಇಲ್ಲಿಗೆ ನಿಯೋಜಿಸಲಾಗಿದೆ ಎಂದು ನಿರೂಪಣಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಏನಾದರೂ ದೂರುಗಳು ಇದ್ದಲ್ಲಿ ಅದನ್ನು ತಿಳಿಸಲು ಅನುಕೂಲವಾಗಲು ಅಂಗನವಾಡಿ ಶಿಕ್ಷಕಿಯರ, ಮೇಲ್ವಿಚಾರಕಿಯರ, ಸಿಡಿಪಿಒ ಕಚೇರಿಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಒಳಗೊಂಡಿರುವ ಫಲಕವನ್ನು ಎಲ್ಲಾ ಅಂಗನವಾಡಿಗಳ ಕಟ್ಟಡದ ಮುಂಭಾಗದಲ್ಲಿ ಅಳವಡಿಸುವಂತೆ ನ್ಯಾಯಾಧೀಶರು ನಿರ್ದೇಶಿಸಿದರು.