ಮಂಡ್ಯ ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಕೆಲವು ಸದಸ್ಯರು ಮತ್ತು ಸದಸ್ಯರಲ್ಲದವರು ಗೊಂದಲ ಸೃಷ್ಟಿಸಿ ಸಭೆಗೆ ಅಡಚಣೆ ಮಾಡಿದ್ದಲ್ಲದೇ, ಅವಾಚ್ಯಶಬ್ದಗಳಿಂದ ನಿಂದಿಸಿ ಇಲ್ಲಸಲ್ಲದ ಆರೋಪ ಮಾಡಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಕೆಲವು ಸದಸ್ಯರು ಮತ್ತು ಸದಸ್ಯರಲ್ಲದವರು ಗೊಂದಲ ಸೃಷ್ಟಿಸಿ ಸಭೆಗೆ ಅಡಚಣೆ ಮಾಡಿದ್ದಲ್ಲದೇ, ಅವಾಚ್ಯಶಬ್ದಗಳಿಂದ ನಿಂದಿಸಿ ಇಲ್ಲಸಲ್ಲದ ಆರೋಪ ಮಾಡಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ತಿಳಿಸಿದರು.ಸಂಘದ ಸದಸ್ಯರಲ್ಲದವರು ಸಭೆಗೆ ಆಗಮಿಸಿ ಗೊಂದಲ ಸೃಷ್ಟಿಸಿ ಪ್ರತಿಭಟನೆ ಮಾಡಿದ್ದಾರೆ. ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ಭ್ರಷ್ಟ ಅಧ್ಯಕ್ಷ ಎಂದು ದೂಷಿಸಿದ್ದಾರೆ. ಮೊದಲು ನಾನು ಭ್ರಷ್ಟ ಎಂಬುದನ್ನು ಸಾಬೀತುಪಡಿಸಲಿ. ಭ್ರಷ್ಟ ಎಂಬುದು ಸಾಬೀತಾದರೆ ಆ ಕ್ಷಣದಲ್ಲೇ ರಾಜೀನಾಮೆ ಕೊಡುತ್ತೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
೨೦೨೬ರ ಮಾ.೬ರ ವರೆಗೂ ಹಾಲಿ ಕಾರ್ಯನಿರ್ವಾಹಕ ಮಂಡಳಿಯ ಅಧಿಕಾರಾವಧಿ ಇದ್ದು, ಇದರ ವಿಚಾರವಾಗಿ ವರಿಷ್ಠರ ಮುಂದೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೋಣ ಎಂದು ಹೇಳಿದ್ದಕ್ಕೆ ನಿರ್ದೇಶಕರಾದ ಎ.ಕೃಷ್ಣ, ಸಾತನೂರು ಮಹೇಶ್, ಅಣಸಾಲೆ ಶಿವಣ್ಣ ಅವರು ಭ್ರಷ್ಟ ಅಧ್ಯಕ್ಷರೆಂದು ಕೂಗಾಡಿದ್ದಾರೆ. ಇನ್ನೂ ಕೆಲವರು ಅಧ್ಯಕ್ಷರು ಪಲಾಯನ ಮಾಡಿದ್ದಾರೆ ಎಂದು ತಪ್ಪು ಹೇಳಿಕೆ ನೀಡಿದ್ದಾರೆ. ಇದು ಶುದ್ಧ ಸುಳ್ಳು. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಆಪಾದನೆ. ಸಂಘದ ಸದಸ್ಯರಾದ ದೊಡ್ಡಯ್ಯ, ಕೃಷ್ಣ, ಶಿವಣ್ಣ ಅಣಸಾಲೆ, ಸದಸ್ಯರಲ್ಲದ ಚಂದಳ್ಳಿ ಶ್ರೀಧರ್ ಅವರು ಏಕವಚನದಲ್ಲಿ ಮಾತನಾಡಿ ಸಂಘಕ್ಕೆ ಧಕ್ಕೆ ತಂದಿದ್ದಾರೆ ಎಂದು ಆಪಾದಿಸಿದರು.ಮಂಡ್ಯ ಜಿಲ್ಲಾ ಕೇಂದ್ರ ಮತ್ತು ಮಳವಳ್ಳಿಯಲ್ಲಿ ಕುರುಬರ ಸಂಘದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ೭ ಕೋಟಿ ರು. ಅನುದಾನ ತಂದಿದ್ದು, ಈ ಎರಡೂ ಕಟ್ಟಡಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಚುನಾವಣೆ ನಡೆಸುವುದಾಗಿ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ೨೧ ನಿರ್ದೇಶಕರ ಪೈಕಿ ಮೂವರು ನಿರ್ದೇಶಕರು ಮತ್ತು ಸದಸ್ಯರಲ್ಲದ ಕೆಲವರು ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಭೈರತಿ ಸುರೇಶ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ನಾನು ಅವ್ಯವಹಾರ ಮಾಡಿದ್ದರೆ ಸಂಬಂಧಿಸಿದ ಇಲಾಖೆಗೆ ದೂರು ಕೊಡಲಿ. ಅದನ್ನು ಬಿಟ್ಟು ಸಮುದಾಯದ ಮುಗ್ದ ಜನರನ್ನು ಎತ್ತಿ ಕಟ್ಟುವ ನಡೆ ಸರಿಯಲ್ಲ. ಸಂಘದ ಸದಸ್ಯರಲ್ಲ ಚಂದಳ್ಳಿ ಶ್ರೀಧರ್‌ರಂತಹ ನೂರು ವ್ಯಕ್ತಿಗಳು ಬಂದರೂ ಹೆದರಿಸುವ ಶಕ್ತಿ ಇದೆ ಎಂದರು.ರಾಜ್ಯ ಸಮಿತಿ ನಿರ್ದೇಶಕಿ ಸಾವಿತ್ರಮ್ಮ ಮಾತನಾಡಿ, ಸಮಾಜವನ್ನು ಒಗ್ಗೂಡಿಸಿ ಅಭಿವೃದ್ಧಿಪಥದತ್ತ ಕೊಂಡೊಯ್ಯುವುದು ನಮ್ಮ ಗುರಿ. ೩೫ ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸಮಿತಿಯ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ಮಂಡ್ಯ, ಮಳವಳ್ಳಿಯಲ್ಲಿ ಕಟ್ಟಡ ನಿರ್ಮಾಣ, ನಾಗಮಂಗಲದಲ್ಲಿ ನನೆಗುದಿಗೆ ಬಿದ್ದಿರುವ ಕನಕ ಭವನದ ನಿರ್ಮಾಣಕ್ಕೆ ಆಸಕ್ತಿ ತೋರಿದ್ದೇವೆ. ನಿಸ್ತೇಜವಾಗಿದ್ದ ತಾಲೂಕು ಸಂಘಗಳನ್ನು ಪುನರುಜ್ಜೀವನಗೊಳಿಸಿದ್ದೇವೆ. ವಿದ್ಯಾರ್ಥಿ ನಿಲಯವನ್ನು ಪೂರ್ಣಗೊಳಿಸಿದ ನಂತರ ಜಿಲ್ಲಾ ಸಂಘಕ್ಕೆ ಚುನಾವಣೆ ನಡೆಸುವುದಾಗಿ ನಿರ್ಧಾರ ಕೈಗೊಂಡಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ಇಂತಹ ಕ್ಷುಲ್ಲಕವಾಗಿ ಗದ್ದಲ ಎಬ್ಬಿಸಿ ಜನಾಂಗದ ಒಗ್ಗಟ್ಟನ್ನು ಹಾಳು ಮಾಡುವುದು ಸರಿಯಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಮುಖಂಡ ನಂಜಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜೆ. ಶಶಿಧರ, ಉಪಾಧ್ಯಕ್ಷರಾದ ಶ್ರೀನಿವಾಸ, ಬಿ.ಕೆ.ರೇವಣ್ಣ, ಖಜಾಂಚಿ ಎಸ್.ಎನ್.ರಾಜು, ಪದಾಧಿಕಾರಿಗಳಾದ ಮಂಜುನಾಥ, ಶಿವಮಲ್ಲು, ಎಂ.ಮಹೇಶ್, ಸಿದ್ದರಾಮು, ಶಿವಕುಮಾರ್, ಚನ್ನಪ್ಪ ಇತರರಿದ್ದರು.