ಸಾರಾಂಶ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪಟ್ಟಣದ ಪುರಸಭೆಯ ಅಧ್ಯಕ್ಷ ಹನುಮಂತಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಬ್ಬರು ತಮ್ಮನ್ನು ತಾತ್ಸಾರ ಮಾಡುವುದನ್ನು ಖಂಡಿಸಿ ಅಧ್ಯಕ್ಷರ ವಿರುಧ್ದ ಸಭೆಯ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದ ನಂತರ ಸದಸ್ಯ ಭೋವಿ ಶಿವು ಮಾತನಾಡಿ, ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳ ನಡವಳಿಯಲ್ಲಿ ದಾಖಲಾಗಿಲ್ಲ ಎಂದು ವಿರೋಧಿಸಿ ಅಧ್ಯಕ್ಷರ ಮುಂದೆ ಬಾವಿಗಿಳಿದು ಧರಣಿ ನಡೆಸಿದರೆ, ನಮ್ಮನ್ನು ಕೇಳದೇ ಅಜೆಂಡಾದಲ್ಲಿ ಕೆಲವು ವಿಷಯಗಳ ಸೇರಿಸಲಾಗಿದೆ. ಅಧ್ಯಕ್ಷರು ಸದಸ್ಯರ ಹಕ್ಕನ್ನು ಮೊಟಕು ಮಾಡುತ್ತಾರೆಂದು ಖಂಡಿಸಿ ಮತ್ತೊಬ್ಬ ಸದಸ್ಯ ನಯಾಜ್ ಧರಣಿಯಲ್ಲಿ ಸೇರಿಕೊಂಡರು.
ಸದಸ್ಯ ಅರೀಫ್ ಮಾತನಾಡಿ, ಅಧ್ಯಕ್ಷರು ಸಭೆಯಲ್ಲಿ ನಗುತ್ತ ಮಾತಾಡುವುದು ನಗೆಪಾಟಲಾಗುತ್ತೆ, ಮೂರು ಸಭೆಯಲ್ಲಿ ಅಜೆಂಡಾ ವಿಷಯಗಳ ಸೆರಿಸಲು ಕೇಳದೇ ಹೇಳದೇ ತಾತ್ಸಾರ ಮಾಡುತ್ತಿದ್ದಾರೆ ಎಂದು ದೂರಿದರು. ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಮುಂದಿನ ಸಭೆಯಲ್ಲಿ ಎಲ್ಲಾ ಸದಸ್ಯರನ್ನು ಕೇಳಿ ವಿಷಯಗಳನ್ನು ಅಜೆಂಡಾದಲ್ಲಿ ಸೇರಿಸಲಾಗುವುದು ಎಂದು ತಿಳಿಸಿದ ನಂತರ ಸದಸ್ಯರು ಧರಣಿ ಕೈಬಿಟ್ಟರು.ಸಭೆಯಲ್ಲಿ ಬೆಸ್ಕಾಂ ಎಂಜಿನಿಯರ್ ಮೇಘರಾಜ್ ಮಾತನಾಡಿ, ಪ್ರಮುಖ ವಾರ್ಡ್‌ಗಳಲ್ಲಿ ದುರಸ್ತಿಗೊಳಿಸುವ ವಿದ್ಯುತ್ ಕಂಬ, ಕೇಬಲ್‌ಗಳ ಬಗ್ಗೆ ಪ್ರಸ್ತಾವನೆಯನ್ನು ಸಿದ್ದಪಡಿಸಲಾಗಿದೆ. ಕೆಲ ವ್ಯಕ್ತಿಗಳು ಕಾನೂನುಬಾಹಿರವಾಗಿ ಇಪ್ಪತ್ತು ನೇರ ವಿದ್ಯುತ್ ಸಂಪರ್ಕ ಪಡೆದಿದ್ದು ಆ ಬಾಬ್ತು ಎಂಟು ಲಕ್ಷ ರು. ಬಾಕಿ ಬೆಸ್ಕಾಂಗೆ ಪಾವತಿಯಾಗಬೇಕಿದೆ, ವಸತಿ ಎಂದು ಅನುಮತಿ ಪಡೆದು ವಾಣಿಜ್ಯ ಉದ್ದೇಶಕ್ಕೆ ನಿರ್ಮಿಸಿದ ಎರಡು ಅಂತಸ್ತಿನ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅವಕಾಶವಿಲ್ಲ ಎಂದು ತಿಳಿಸಿದರು.
ಸದಸ್ಯ ಬಿ ವೀರಯ್ಯ ಮಾತನಾಡಿ, ಮುಖ್ಯ ರಸ್ತೆಯಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುವುದು ದಂಡ ಹಾಕಿದಾಗ ಎಚ್ಚರವಾಗುವ ಬಗ್ಗೆ ಪಿಎಸ್‌ಐ ಚಿದಾನಂದಪ್ಪನವರಿಗೆ ತಿಳಿಸಿದರೆ, ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್ ಮಾತನಾಡಿ ಗುರುವಾರ ಸಂತೆ ರಸ್ತೆಯಲ್ಲಿ ಸುಮಾರು ೪೦ ಲಾರಿಗಳು ಸಂಚಾರಿಸುತ್ತವೆ, ಅವುಗಳನ್ನು ತಡೆದು ಬೇರೆ ಮಾರ್ಗದಲ್ಲಿ ಚಲಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು. ಸದಸ್ಯ ಷಾ ಅಬ್ರಾರ್ ಮಾತನಾಡಿ, ಸರ್ಕಾರಿ ಪಿಯು ಕಾಲೇಜಲ್ಲಿ ಎರಡು ವರ್ಷದಿಂದ ಹೈಮಾಸ್ಕ್ ದೀಪ ಕೆಟ್ಟಿದ್ದು ಆ ಆವರಣದಲ್ಲಿ ಅನೈತಿಕ ಚಟುವಟಿಕೆಗಳ ನಡೆಯುತ್ತಿವೆ, ಆ ದೀಪಗಳನ್ನು ದುರಸ್ತಿಪಡಿಸಿ ಎಂದು ಮುಖ್ಯಾಧಿಕಾರಿಗೆ ತಿಳಿಸಿದರು.ಸದಸ್ಯರಾದ ಖಲೀಲ್, ಮಂಜುನಾಥ್, ಸುಧಾ, ಸಿದ್ದೇಶ್, ದಾದಾಪೀರ್ ಕೆಲ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಮುಖ್ಯಾಧಿಕಾರಿ ನಿರಂಜಿನಿ, ಅಧಿಕಾರಿ ರವಿಪ್ರಕಾಶ್ ವಿವಿಧ ಇಲಾಖೆಗಳ ಚಿದಾನಂದಪ್ಪ, ಶ್ರೀನಿವಾಸ್, ಶೈಲಜಾ ಇದ್ದರು. ಮಧ್ಯಾಹ್ನದ ನಂತರವೂ ಸಭೆ ಮುಂದುವರಿಯಿತು.
;Resize=(128,128))
;Resize=(128,128))
;Resize=(128,128))
;Resize=(128,128))