ಪುರಸಭೆಯ ಸಾಮಾನ್ಯ ಸಭೆಗೆ ಒತ್ತಾಯಿಸಿ ಹಾಗೂ ಕೈಗೊಂಡಿರುವ ಕಾಮಗಾರಿಗಳ ಮೊತ್ತವನ್ನು ಪಾವತಿಸದಂತೆ ಆಗ್ರಹ
ಹಗರಿಬೊಮ್ಮನಹಳ್ಳಿ: ಸಾಮಾನ್ಯ ಸಭೆಗಳನ್ನು ಕರೆಯದೆ, ಸದಸ್ಯರ ಗಮನಕ್ಕೂ ತಾರದೇ ಪುರಸಭೆಯ ವ್ಯಾಪ್ತಿಗಳಲ್ಲಿ ಕಾಮಗಾರಿ ಕೈಗೊಳ್ಳುವ ಮೂಲಕ ಸರ್ವ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಪುರಸಭೆಯ ಸದಸ್ಯ ಎಲ್.ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆಯ ಸಾಮಾನ್ಯ ಸಭೆಗೆ ಒತ್ತಾಯಿಸಿ ಹಾಗೂ ಕೈಗೊಂಡಿರುವ ಕಾಮಗಾರಿಗಳ ಮೊತ್ತವನ್ನು ಪಾವತಿಸದಂತೆ ಆಗ್ರಹಿಸಿ ಪುರಸಭೆಯ ೧೪ ಸದಸ್ಯರು ಬುಧವಾರ ದಿಢೀರ್ ಇಲ್ಲಿನ ಪುರಸಭೆಯ ಕಾರ್ಯಾಲಯದ ಬಳಿ ಪ್ರತಿಭಟಿಸಿ ಮನವಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಎರಡೂವರೆ ವರ್ಷದಿಂದ ಪುರಸಭೆಯ ಅಧ್ಯಕ್ಷರಾಗಿರುವ ಮರಿ ರಾಮಣ್ಣ ಅವರಿಗೆ ಕರ್ನಾಟಕ ಪೌರಸಭೆಗಳ ಅಧಿನಿಯಮದ ಕುರಿತು ಕನಿಷ್ಠ ಜ್ಞಾನವೂ ಇಲ್ಲ. ಸಾಮಾನ್ಯ ಸಭೆಗಳನ್ನು ನಡೆಸದೇ ನೀತಿ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲಭೂತ ಸೌಕರ್ಯಗಳ ಕೊರತೆ ನಡುವೆ ಪಟ್ಟಣದ ಸಾರ್ವಜನಿಕರು ಉಸಿರಾಡುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗಳ ಕುರಿತು ಅಧ್ಯಕ್ಷರಿಗೆ ಮಾಹಿತಿಯೇ ಇಲ್ಲ ಎಂದು ಸದಸ್ಯ ಜೋಗಿ ಹನಮಂತಪ್ಪ ಆರೋಪಿಸಿದರು.ಪುರಸಭೆಯ ಆಡಳಿತ, ಅಭಿವೃದ್ಧಿ ಕಾಮಗಾರಿಗಳ ಜಾರಿ, ಬಿಲ್ ಪಾವತಿ ಕುರಿತು ಸಾಮಾನ್ಯ ಸಭೆಗಳಲ್ಲಿ ಸದಸ್ಯರ ಜೊತೆ ಚರ್ಚಿಸದೇ ಮನಸೋ ಇಚ್ಛೆ ಪಾವತಿಸಲಾಗಿದೆ. ಅಧ್ಯಕ್ಷರು, ಪೌರಾಡಳಿತದ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಸದಸ್ಯ ದೀಪಕ್ ಕಠಾರೆ ಕಿಡಿ ಕಾರಿದರು.
ಸಾಮಾನ್ಯ ಸಭೆಗಳನ್ನು ಚಾಚೂತಪ್ಪದೇ ಕರೆಯಬೇಕು. ಎಲ್ಲ ಸದಸ್ಯರ ಹಕ್ಕುಗಳನ್ನು ಗೌರವಿಸಬೇಕು. ಆಡಳಿತದಲ್ಲಿ ಪಾರದರ್ಶಕತೆ ಪ್ರದರ್ಶಿಸಲು ಅಧ್ಯಕ್ಷರು ಮುಂದಾಗಬೇಕು ಎಂದು ಸದಸ್ಯರಾದ ಡಿ.ಎಂ. ಅಜೀಜುಲ್ಲಾ, ನಾಗರಾಜ್ ಜನ್ನು, ತೆಲಗಿ ಇಸ್ಮಾಯಿಲ್ ಆಗ್ರಹಿಸಿದರು.ಕೂಡಲೇ ಸಾಮಾನ್ಯ ಸಭೆ ನಿಗದಿಪಡಿಸಿ ಕಾಮಗಾರಿಗಳು, ಮಂಜೂರಾದ ಬಿಲ್ಲುಗಳು, ಪಾವತಿಸಿದ ಮೊತ್ತ ಜೊತೆಗೆ ಇತರ ಆಡಳಿತಾತ್ಮಕ ವಿಷಯಗಳನ್ನು ಸಭೆಯಲ್ಲಿ ಮಂಡಿಸಿ ಚರ್ಚಿಸಿದ ನಂತರವೇ ಕಾಮಗಾರಿಗಳ ಮೊತ್ತ ಪಾವತಿಸಬೇಕು ಎಂದು ಸದಸ್ಯರಾದ ಬುಕೆಟ್‌ಗಾರ್ ಗಂಗಣ್ಣ, ನವೀನಕುಮಾರ, ರಾಜೇಶ್ ಬ್ಯಾಡಗಿ ಒತ್ತಾಯಿಸಿದರು.
ಇದಕ್ಕೂ ಮುನ್ನ ಪುರಸಭೆ ಅಧ್ಯಕ್ಷ, ಮುಖ್ಯಾಧಿಕಾರಿ ಅನುಪಸ್ಥಿತಿ ಹಿನ್ನೆಲೆಯಲ್ಲಿ ಬೇಡಿಕೆಗಳ ಕುರಿತಂತೆ ವ್ಯವಸ್ಥಾಪಕ ಮಲ್ಲಿಕಾರ್ಜುನಗೆ ಮನವಿ ಸಲ್ಲಿಸಿದರು. ಸದಸ್ಯರಾದ ಖಾಜಾಬನ್ನಿ ಅಲ್ಲಾಭಕ್ಷಿ, ಎಸ್.ಕಮಲಾ ಶಿವಮೊಗ್ಗ, ಕೆ.ರೇಷ್ಮಾ, ಎಚ್.ಎಂ.ಚನ್ನಮ್ಮ, ಬಣಕಾರ್ ಸುರೇಶ್, ಎ.ಆರ್.ಮಂಗಳಾ ಇದ್ದರು.