ಸಾರಾಂಶ
ರೋಣ: ಪಟ್ಟಣದಲ್ಲಿನ ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಅಂಗಡಿಕಾರರು, ಬಾಡಿಗೆದಾರರು 3 ತಿಂಗಳಾದರೂ ಬಾಡಿಗೆ ಹಣ ಪಾವತಿಸದಿದ್ದಲ್ಲಿ, ಯಾವುದೇ ನೋಟಿಸ್ ನೀಡದೇ ಅಂತಹ ಅಂಗಡಿಗಳನ್ನು ಸೀಜ್ ಮಾಡುವಲ್ಲಿ ಪುರಸಭೆ ನಿಯಮ ಜಾರಿಗೆ ತರಬೇಕು ಎಂದು ಸದಸ್ಯ ಗದಿಗೆಪ್ಪ ಕಿರೇಸೂರ ಸೋಮವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು. ಆಗ ಸಭೆಯಲ್ಲಿ ಬಹುತೇಕ ಸದಸ್ಯರು, ಇದೇ ರೀತಿಯಾಗಿ ಕ್ರಮ. ಕೈಗೊಳ್ಳುವಂತೆ ಹಕ್ಕೊತ್ತಾಯ ಮಂಡಿಸಿದರು.
ಬಹುತೇಕ ಅಂಗಡಿಗಳು ಅನೇಕ ವರ್ಷಗಳಿಂದ ಬಾಡಿಗೆ ತುಂಬಿಲ್ಲ. ಇದರಿಂದ ₹ 24 ಲಕ್ಷಕ್ಕೂ ಹೆಚ್ಚು ಬಾಡಿಗೆ ವಸೂಲಿ ಪೆಂಡಿಂಗ್ ಇದೆ. ಇದರಲ್ಲಿ ಒಬ್ಬರದ್ದು ₹ 1.25 ಲಕ್ಷ ಬಾಡಿಗೆ ಬರಬೇಕಿತ್ತು. ಈಗ ಅವರು ನಿಧನರಾಗಿದ್ದಾರೆ. ಅವರ ವಾರಸುದಾರರಿಂದ ವಸೂಲಿ ಮಾಡಬೇಕೆಂದಾದರೇ ಅವರು ಬಡವರಿದ್ದಾರೆ. ಅವರಿಗೆ ಯಾವುದೇ ಸ್ಥಿರಾಸ್ತಿಯಿಲ್ಲ. ಹಾಗಾಗಿ 3 ತಿಂಗಳ ಬಾಡಿಗೆ ತುಂಬಲು ಅಂಗಡಿಕಾರರು ವಿಳಂಬ ಮಾಡಿದಲ್ಲಿ ಯಾವುದೇ ನೋಟಿಸ್ ನೀಡದೇ ಯಥಾಸ್ಥಿತಿಯಲ್ಲೆ ಅಂಗಡಿ ಸೀಜ್ ಮಾಡಬೇಕು. ಅಂದಾಗ ಸಕಾಲಕ್ಕೆ ಬಾಡಿಗೆ ತುಂಬುತ್ತಾರೆ. ಇದರಿಂದ ಪುರಸಭೆಗೆ ಆದಾಯ ಬರುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುತ್ತದೆ ಎಂದು ಸದಸ್ಯರು ಒತ್ತಾಯಿಸಿದರು.ಆಗ ಮುಖ್ಯಾಧಿಕಾರಿ ರಮೇಶ ಹೊಸಮನಿ ಮಾತನಾಡಿ, ಸಭೆಯು ಯಾವ ರೀತಿಯಾಗಿ ಠರಾವು ಮಾಡುತ್ತದೆಯೋ ಅದರಂತೆ ಕ್ರಮ ಜರುಗಿಸಲಾಗುವದು. ಪುರಸಭೆ ವ್ಯಾಪ್ತಿಗೆ ಬರುವ ವಾಣಿಜ್ಯ ಮಳಿಗೆಗಳ ಅಂಗಡಿಕಾರರಿಗೆ ಪುರಸಭೆ ನಿಯಮ ಪಾಲಿಸುವಂತೆ ಈ ಬಗ್ಗೆ ತಿಳಿವಳಿಕೆ ನೋಟಿಸ್ ನೀಡಲಾಗುವದು ಎಂದರು.
ಸದಸ್ಯ ವಿಜಯೇಂದ್ರ ಗಡಗಿ ಮಾತನಾಡಿ, ನೀರು ಪೂರೈಕೆ ಕೊಳವೆಬಾವಿಗಳ 10ಕ್ಕೂ ಹೆಚ್ಚು ಮೋಟಾರ್ ಸುಟ್ಟಿದ್ದನ್ನು ರಿಪೇರಿ ಮಾಡಲಾಗಿದೆ ಎಂದು ತಲಾ ₹ 9500 ಖರ್ಚು ಹಾಕಲಾಗಿದೆ. ಆದರೆ ರಿಪೇರಿ ಮಾಡಿದ್ದು ಸುಂಕದವರ ತೋಟ, ಶಿರಗೋಜಿಯವರ ತೋಟ ಹತ್ತಿರುವ 2 ಮೋಟಾರ್ ಮಾತ್ರ. ಉಳಿದಂತೆ ಸೋಮಯ್ಯಜ್ಜನವರ ಹೊಲದ ಹತ್ತಿರ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ಥಗಿತವಾಗಿದ್ದ ಮೋಟಾರ ರಿಪೇರಿ ಹೆಸರಲ್ಲಿ ಅನಗತ್ಯ ಹಣ ಖರ್ಚು ಹಾಕಲಾಗಿದೆ. ಈ ಬಗ್ಗೆ ಪರಿಶೀಲಿಸಬೇಕು. ಬೇಕಿದ್ದರೇ ಈಗಲೇ ಸ್ಥಳಕ್ಕೆ ಹೋಗಿ ಪರಿಶೀಲಿಸೋಣ ಬನ್ನಿ. 10 ರಲ್ಲಿ 2 ಮಾತ್ರ ಚಾಲು ಇವೆ. ಉಳಿದವು ರಿಪೇರಿ ಮಾಡಿಸಿದಲ್ಲಿ ಚಾಲು ಯಾಕೆ ಇಲ್ಲ? ಅನಗತ್ಯ ಹಣ ಖರ್ಚು ಹಾಕಲಾಗಿದೆ ಎಂದು ಸದಸ್ಯ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಚೆಕ್ ಮಾಡಲಾಗುವುದು. ಈ ಬಗ್ಗೆ ಕೇಳಲು ನೀರು ಸರಬರಾಜು ಸಿಬ್ಬಂದಿ ರಜೆ ಮೇಲೆ ಇದ್ದಾರೆ. ಈ ಕುರಿತು ಮಾಹಿತಿ ನೀಡುವಂತೆ ಕೇಳಲಾಗುವುದು ಎಂದು ಮುಖ್ಯಾಧಿಕಾರಿ ರಮೇಶ ಹೊಸಮನಿ ಹೇಳಿದರು.
ಸಭೆಯಲ್ಲಿ ಡಿಸೆಂಬರ್‌ದಿಂದ ಫೆಬ್ರವರಿವರೆಗಿನ ಜಮಾ, ಖರ್ಚು ಕುರಿತು, ಹೊಸ ಸಂತೆ ಮಾರುಕಟ್ಟೆಯಲ್ಲಿನ ದಕ್ಷಿಣ ದಿಕ್ಕಿಗೆ ಮುಖವಾಗಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಮರು ಟೆಂಡರ್ ಕರೆಯುವ ಕುರಿತು, ವಿವಿಧ ಯೋಜನೆಯಡಿ ಬರುವ ಕಾಮಗಾರಿ, ಯಂತ್ರೋಪಕರಣ, ವಾಹನಗಳ ಪೂರೈಕೆ ಟೆಂಡರ್‌ನಲ್ಲಿನ ದರ ಮಂಜೂರಾತಿ ಕುರಿತು, ಪೊಲೀಸ್ ಇಲಾಖೆಯಿಂದ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕುರಿತು ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಮಾದರ, ಮುಖ್ಯಾಧಿಕಾರಿ ರಮೇಶ ಹೊಸಮನಿ , ಸದಸ್ಯರಾಸ ಮಿಥುನ ಪಾಟೀಲ, ಮಲ್ಲಯ್ಯ ಮಹಾಪುರುಷಮಠ, ಹನಮಂತಪ್ಪ ತಳ್ಳಿಕೇರಿ, ಬಸಮ್ಮ ಕೊಪ್ಪದ, ಅಂತೋಷ ಕಡಿವಾಲ, ದಾವಲಸಾಬ ಬಾಡಿನ, ವಿಜಯಲಕ್ಷ್ಮಿ ಕಿಟಗಿ, ರಂಗವ್ವ ಭಜಂತ್ರಿ, ಈಶ್ವರ ಕಡಬಿನಕಟ್ಟಿ ಸೇರಿದಂತೆ ಮುಂತದವರು ಉಪಸ್ಥಿತರಿದ್ದರು.