ಗೋವಾ ಭಾಗಾ ಬೀಚ್‌ನಲ್ಲಿ ಕೊಪ್ಪಳ ನಗರಸಭೆ ಸದಸ್ಯರು

| Published : Aug 20 2024, 01:04 AM IST

ಗೋವಾ ಭಾಗಾ ಬೀಚ್‌ನಲ್ಲಿ ಕೊಪ್ಪಳ ನಗರಸಭೆ ಸದಸ್ಯರು
Share this Article
  • FB
  • TW
  • Linkdin
  • Email

ಸಾರಾಂಶ

13 ತಿಂಗಳ ಅವಧಿಯ ಕೊಪ್ಪಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ. 21ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿ ಜಂಟಿಯಾಗಿ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಇದೇ ಮೊದಲ ಬಾರಿಗೆ ಸಮ್ಮಿಶ್ರ ಆಡಳಿತಕ್ಕೆ ನಾಂದಿ ಹಾಡಲಿದ್ದಾರೆ.

ಮೊದಲ ಬಾರಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಆಡಳಿತ । ಅಚ್ಚರಿಯಾದರೂ ಸತ್ಯ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಉಳಿದಿರುವ 13 ತಿಂಗಳ ಅವಧಿಯ ಕೊಪ್ಪಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ. 21ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿ ಜಂಟಿಯಾಗಿ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಇದೇ ಮೊದಲ ಬಾರಿಗೆ ಸಮ್ಮಿಶ್ರ ಆಡಳಿತಕ್ಕೆ ನಾಂದಿ ಹಾಡಲಿದ್ದಾರೆ.

ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅಮ್ಜಾದ್ ಪಟೇಲ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅಶ್ವಿನಿ ಗದುಗಿನಮಠ ಆಯ್ಕೆಯಾಗುವುದು ಪಕ್ಕಾ ಆಗಿದೆ.

ಇದಕ್ಕೆ ಕಾಂಗ್ರೆಸ್‌ನ 14 ಸದಸ್ಯರು, ಜೆಡಿಎಸ್‌ನ ಇಬ್ಬರು ಸದಸ್ಯರು ಹಾಗೂ ಬಿಜೆಪಿಯ ಮೂವರು ಬೆಂಬಲ ಸೂಚಿಸಿದ್ದಾರೆ.

ಹೀಗಾಗಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ಸದಸ್ಯೆಯ ಆಯ್ಕೆಗೆ ಕಾಂಗ್ರೆಸ್ ಸದಸ್ಯರು ಬೆಂಬಲ ಸೂಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಯಾಕೆ ಹೀಗೆ?:

ಇತ್ತೀಚಿನ ವರೆಗೂ ಬಿಜೆಪಿಯಲ್ಲಿದ್ದ ಮಾಜಿ ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್‌ ಸೇರಿದ ಮೇಲೆ ಅವರ ಬೆಂಬಲಿಗರೂ ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದಾರೆ. ಅವರ ಬೆಂಬಲಿಗರಿಗೂ ಸ್ಥಾನಮಾನ ನೀಡುವ ಉದ್ದೇಶದಿಂದ ಉಪಾಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಅದರ ಜೊತೆ ಜೆಡಿಎಸ್‌ ಸದಸ್ಯರು ಮೊದಲಿನಿಂದಲೂ ಕಾಂಗ್ರೆಸ್‌ ಬೆಂಬಲಿಸುತ್ತಲೇ ಇದ್ದಾರೆ.

ಕೊಪ್ಪಳ ನಗರಸಭೆ 31 ಸದಸ್ಯ ಬಲ ಹೊಂದಿದೆ. ಇದರಲ್ಲಿ ಕಾಂಗ್ರೆಸ್ ಓರ್ವ ಸದಸ್ಯೆ ಸರ್ಕಾರಿ ನೌಕರಿ ಬಂದಿದ್ದರಿಂದ ರಾಜೀನಾಮೆ ನೀಡಿದ್ದರೆ, ಬಿಜೆಪಿ ಸದಸ್ಯ ರಾಜಶೇಖರ ಆಡೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಸದಸ್ಯರ ಬಲ 29 ಸ್ಥಾನಕ್ಕೆ ಕುಸಿದಿದೆ.

ಈ ಪೈಕಿ ಕಾಂಗ್ರೆಸ್ 14 ಸದಸ್ಯರು, ಜೆಡಿಎಸ್ 2, ಪಕ್ಷೇತರ ನಾಲ್ಕು ಹಾಗೂ ಬಿಜೆಪಿಯ 9 ಸದಸ್ಯರು ಇದ್ದಾರೆ.

ಗೋವಾದಲ್ಲಿ:

ಕೊಪ್ಪಳ ನಗರಸಭೆಯ ಕಾಂಗ್ರೆಸ್, ಬಿಜೆಪಿಯ ಕೆಲ ಸದಸ್ಯರು ಹಾಗೂ ಜೆಡಿಎಸ್ ಸದಸ್ಯರು ಗೋವಾದ ಭಾಗಾ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಸುಮಾರು ಸದಸ್ಯರು ಹಾಗೂ ಅವರ ಕುಟಂಬದವರು ಸೇರಿ 22 ಜನರು ಪ್ರವಾಸದಲ್ಲಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷೆ, ಉಪಾಧ್ಯಕ್ಷೆಯ ಆಯ್ಕೆಯ ಕುರಿತು ಹೈಕಮಾಂಡ್ ತೀರ್ಮಾನವಾಗಿದೆ. ಶಾಸಕ ರಾಘವೇಂದ್ರ ಹಿಟ್ನಾಳ, ಸಚಿವ ಜಮೀರ್ ಅಹ್ಮದ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಕೃಪಾಶೀರ್ವಾದ ಸದಸ್ಯ ಅಮ್ಜಾದ್ ಪಟೇಲ್ ಮೇಲೆ ಇರುವುದರಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ, ಈ ಕುರಿತು ಸದಸ್ಯರಲ್ಲಿಯೇ ಒಂದು ಬಣ ಕೊತ ಕೊತ ಕುದಿಯುತ್ತಿದೆ. ಸದಸ್ಯರ ಆಯ್ಕೆ ಬೇರೇಯೇ ಆಗಿತ್ತು. ಆದರೆ, ಹೈಕಮಾಂಡ್ ಮಾತಿಗೆ ಬದ್ಧವಾಗಿ ಈಗ ಅಮ್ಜಾದ್ ಪಟೇಲ್ ಆಯ್ಕೆ ಮಾಡುವುದಕ್ಕೆ ಸಮ್ಮತಿ ಸೂಚಿಸಿ ಪ್ರವಾಸ ಕೈಗೊಂಡು ಎಂಜಾಯ್‌ ಮಾಡುತ್ತಿದ್ದಾರೆ. ಆದರೆ ಇದು ನಮ್ಮ ಆಯ್ಕೆಯಲ್ಲ, ಹೈಕಮಾಂಡ್‌ ಆಯ್ಕೆ ಎಂದು ಸದಸ್ಯರೊಬ್ಬರು ಗೋವಾದಿಂದಲೇ ಕನ್ನಡಪ್ರಭಕ್ಕೆ ಬೇಸರದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.ಬಿಜೆಪಿಯಿಂದ ವಿಪ್‌ ಜಾರಿ:

ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಮುಂದಾಗಿರುವ ಬಿಜೆಪಿ ಕೊಪ್ಪಳ ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ ಮತ್ತು ತನ್ನೆಲ್ಲ ಒಂಬತ್ತು ಸದಸ್ಯರಿಗೆ ವಿಪ್ ಜಾರಿ ಮಾಡಿದೆ.

ಅಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಹಳ್ಳಿ, ಉಪಾಧ್ಯಕ್ಷ ಸ್ಥಾನಕ್ಕೆ ದೇವಕ್ಕ ಕಂದಾರಿ ಅವರಿಂದ ನಾಮಪತ್ರ ಸಲ್ಲಿಸಲಾಗುವುದು. ಸದಸ್ಯರಿಗೆ ವಿಪ್ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ತಿಳಿಸಿದ್ದಾರೆ.