ಕಸ್ತೂರಿ ರಂಗನ್‌ ವರದಿ ಜಾರಿಗೆ ವಿರೋಧ: ಪ್ರತಿಭಟನೆ

| Published : Aug 20 2024, 01:04 AM IST

ಸಾರಾಂಶ

ಚಿಕ್ಕಮಗಳೂರು, ಕಸ್ತೂರಿ ರಂಗನ್ ವರದಿಯಲ್ಲಿರುವ ನ್ಯೂನ್ಯತೆ ಪರಿಶೀಲಿಸಲು ರಚಿಸಿರುವ ಸಂಜಯ್ ಕುಮಾರ್ ನೇತೃತ್ವದ ಸಮಿತಿ ಭೇಟಿ ನೀಡಿ ನೈಜ ವರದಿ ಯನ್ನು ಕೇಂದ್ರ ಸರ್ಕಾರಕ್ಕೆ ನೀಡುವವರೆಗೆ ಕಸ್ತೂರಿ ರಂಗನ್‌ ವರದಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರೈತರ ಹೋರಾಟಕ್ಕೆ ಕೈ ಜೋಡಿಸಿದ ವಿವಿಧ ಸಂಘಟನೆಗಳ ಮುಖಂಡರು । ಚಿಕ್ಕಮಗಳೂರಿನ ತಾಲೂಕು ಕಚೇರಿ ಎದುರು ಧರಣಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಸ್ತೂರಿ ರಂಗನ್ ವರದಿಯಲ್ಲಿರುವ ನ್ಯೂನ್ಯತೆ ಪರಿಶೀಲಿಸಲು ರಚಿಸಿರುವ ಸಂಜಯ್ ಕುಮಾರ್ ನೇತೃತ್ವದ ಸಮಿತಿ ಭೇಟಿ ನೀಡಿ ನೈಜ ವರದಿ ಯನ್ನು ಕೇಂದ್ರ ಸರ್ಕಾರಕ್ಕೆ ನೀಡುವವರೆಗೆ ಕಸ್ತೂರಿ ರಂಗನ್‌ ವರದಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜೀತ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಿವಿಧ ರೀತಿ ಅರಣ್ಯ ಎಂದು ಘೋಷಿಸಿ ಲಕ್ಷಾಂತರ ಹೆಕ್ಟರ್ ಪ್ರದೇಶವನ್ನು ಅರಣ್ಯೀಕರಣ ಗೊಳಿಸಲಾಗಿದೆ. ಆದರೆ, ಅರಣ್ಯೀಕರಣ ಗೊಳಿಸುವ ಸಂದರ್ಭದಲ್ಲಿ ಈ ಭಾಗಗಳಲ್ಲಿ ವಾಸಿಸುವ ಜನರ ಸಮಸ್ಯೆ, ವಾಸ್ತವಿಕತೆಯನ್ನು ಸರ್ಕಾರಕ್ಕೆ ಮರೆಮಾಚಿ ಸಂಬಂಧಪಟ್ಟ ಅಧಿಕಾರಿಗಳು ಜನರಿಗೆ ಸಂಕಷ್ಟ ತಂದೊಡ್ಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಭದ್ರಾ ಅಭಯಾರಣ್ಯ, ಸ್ಟೇಟ್ ಫಾರೆಸ್ಟ್, ಮೀಸಲು ಅರಣ್ಯ, ಗ್ರಾಮೀಣ ಅರಣ್ಯ, ಡೀಮ್ಡ್ ಫಾರೆಸ್ಟ್, ಸೊಪ್ಪಿನಬೆಟ್ಟ, ರಕ್ಷಿತ ಅರಣ್ಯ ಎಂಬ ಹಲವು ಹೆಸರಿನಿಂದ ಶೇ. 50 ಕ್ಕೂ ಹೆಚ್ಚು ಭೂ ಪ್ರದೇಶಗಳ ಅರಣ್ಯ ಹೊಂದಿರುವ ಚಿಕ್ಕ ಮಗಳೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮುಳ್ಳಯ್ಯನಗಿರಿ ಮೀಸಲು ಸಂರಕ್ಷಣಾ ಸೂಕ್ಷ್ಮ ಪ್ರದೇಶ ಯೋಜನೆ ಹಾಗೂ ಸೆಕ್ಷನ್ 4(1) ಹೆಸರಿನಲ್ಲಿ ಲಕ್ಷಾಂತರ ಎಕರೆ ಗೋಮಾಳ, ಹುಲ್ಲು ಬನ್ನಿ, ಸೊಪ್ಪಿನ ಬೆಟ್ಟ ಕಂದಾಯ ಭೂಮಿಯನ್ನು ಹೊಸ ಯೋಜನೆಗಳಿಗೆ ಸೇರಿಸಿ ಸಂಪೂರ್ಣವಾಗಿ ಮಲೆನಾಡಿನ ಜನರ ಬದುಕು ಮತ್ತು ಸಂಸ್ಕೃತಿ ಕಡೆಗಣಿಸಲಾಗುತ್ತಿದೆ. ಸಾವಿರಾರು ರೈತರು ತಮ್ಮ ಜೀವನೋಪಾಯಕ್ಕೆ 1ರಿಂದ 3 ಎಕರೆ ಪ್ರದೇಶ ಸಾಗುವಳಿ ಮಾಡಿ ಸರ್ಕಾರದ ನಿರ್ದೇಶನದಂತೆ ಫಾರಂ ನಂಬರ್ 50, 53, 57 ಅರ್ಜಿ ಹಾಕಿ ಭೂ ಮಂಜೂರಾತಿ ನಿರೀಕ್ಷೆಯಲ್ಲಿರುವ ಬಡವರ ನಂಬಿಕೆ ವಿಫಲವಾಗಿದೆ.

ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೈತರು ನಿವೇಶನಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ಅರ್ಜಿ ಸಲ್ಲಿಸಿ, ಹತ್ತಾರು ವರ್ಷಗಳಿಂದ ವಾಸಕ್ಕೆ ಮನೆ ನಿರ್ಮಿಸಿಕೊಂಡು ಅರ್ಜಿ ಸಲ್ಲಿಸಿ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ, ತಾಲೂಕು ಕಚೇರಿ ಮತ್ತು ಗ್ರಾಮ ಪಂಚಾಯತಿಗಳಿಂದ ನಿವೇಶನ ಮಂಜೂರು ಮಾಡಲು ಬಹುತೇಕ ಸರ್ವೇ ನಂಬರ್ ಗಳ ಪ್ರದೇಶಗಳು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸ ಲ್ಪಟ್ಟಿರುವುದರಿಂದ ಹಾಗೂ ಅವರು ವ್ಯಾಪ್ತಿಯಲ್ಲಿ ಸೇರ್ಪಡೆಯಾಗಿರುವ ನೆಪ ಹೇಳಿ ಹತ್ತಾರು ವರ್ಷಗಳಿಂದ ನಿವೇಶನ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಸ್ತೂರಿ ರಂಗನ್ ವರದಿಯನ್ನು ಕನ್ನಡದಲ್ಲಿ ಮುದ್ರಿಸಿ, ಯೋಜನೆ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳ ಹೆಸರನ್ನು ಗಡಿಯನ್ನು ಜನರಿಗೆ ತಿಳುವಳಿಕೆ ನೀಡಲು ಸರ್ಕಾರ ಆಯಾ ಗ್ರಾಪಂಗಳ ಮೂಲಕ ಪ್ರಸಾರ ಮಾಡಬೇಕು. ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಯೋಜನೆ ಕರಡು ಪ್ರತಿ ಯನ್ನು ಗ್ರಾಪಂ ವ್ಯಾಪ್ತಿಯಲ್ಲಿ ಚರ್ಚಿಸಿ ಮೂಲ ನಿವಾಸಿಗಳ ಆಹವಾಲು ಸ್ವೀಕರಿಸಿ ಜನಾಭಿಪ್ರಾಯದಂತೆ ಮುಂದುವರಿಯಲು ಜಿಲ್ಲಾ ಕೆಡಿಪಿ ಸಭೆಯಲ್ಲಿ ನಿರ್ಣಯವಾಗಿರುವಂತೆ ಕ್ರಮ ವಹಿಸಬೇಕು. ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸಮಿತಿ ನಿಯೋಗಕ್ಕೆ ನೀಡಿದ ಭರವಸೆಯಂತೆ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸಭೆ ಕರೆದು ಸೂಕ್ತ ಕ್ರಮ ವಹಿಸಿ ಅಧಿಕಾರಿಗಳಿಗೆ ತಮ್ಮ ನಿಲುವು ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಡೀಮ್ಡ್‌ ಮತ್ತು ಕಂದಾಯ ಇಲಾಖೆ ಭೂಮಿಗಳ ಜಂಟಿ ಸರ್ವೆ ಮಾಡಲಾಗಿರುವ ಸರ್ವೆ ನಂಬರ್‌ಗಳಲ್ಲಿ ನಿವೇಶನ ರೈತರಿಗೆ ನಿವೇಶನ ನೀಡಲು ತೆಗೆದುಕೊಳ್ಳಬಹುದಾದ ಕ್ರಮವನ್ನು ಕೂಡಲೇ ಜಾರಿಗೊಳಿಸಬೇಕು. ಸರ್ಕಾರಕ್ಕೆ ಬೇಕಾದ ಆಶ್ರಯ ನಿವೇಶನ, ಇತರೆ ಅಭಿವೃದ್ಧಿಗೆ ಮೀಸಲಿಡ ಬೇಕು. ತಹಸೀಲ್ದಾರ್‌ಗಳು ಗೋಮಾಳ ಭೂಮಿ ನಿಗದಿಗೊಳಿಸಿ ಕಳೆದ ಸರ್ಕಾರದ ಅವಧಿಯಲ್ಲಿ ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾದ ರೈತರಿಗೆ ಹಾಗೂ ಈಗ ಮಂಜೂರಾಗಬೇಕಾದ ರೈತರಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸಬೇಕು. ತಾಲೂಕು ಕಚೇರಿಗಳಲ್ಲಿ ನಿಯಮದಂತೆ ಲಭ್ಯವಿರುವ ದಾಖಲಾತಿಗಳನ್ನು ಆಧರಿಸಿ ರೈತರ ಜಮೀನಿಗೆ ಪೋಡಿ ಮಾಡಿಕೊಳ್ಳಬೇಕು. ಇಲಾಖೆಯಿಂದ ರೈತರ ಮಂಜೂರಾತಿ ಕಡತ ಗಳನ್ನು ಲಭ್ಯವಿಲ್ಲದೆ ಇರುವುದರಿಂದ ಇದರ ಹೊಣೆ ಹೊತ್ತು ತಾಲೂಕು ಕಚೇರಿ ಸ್ವಯಂ ಪ್ರೇರಿತವಾಗಿ ಒಂದರಿಂದ ಐದು ನಮೂನೆ ತಯಾರಿಸಿ ಸರ್ಕಾರ ನಿಯಮಗಳಿದಂತೆ ಸಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್. ವಿಜಯ್ ಕುಮಾರ್, ಸಂಚಾಲಕ ಕೆ.ಕೆ. ರಘು, ವಾಸು ಪೂಜಾರಿ, ಚಂದ್ರೇಗೌಡ ಕಳವಾಸೆ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಗುರುಶಾಂತಪ್ಪ, ಮಾಜಿ ಅಧ್ಯಕ್ಷ ಬಸವರಾಜ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಎಚ್‌.ಎಂ. ರೇಣುಕಾರಾಧ್ಯ, ಆಮ್ ಆದ್ಮಿ ಪಕ್ಷದ ಮುಖಂಡ ಡಾ. ಸುಂದರೇಗೌಡ, ನವ ಕರ್ನಾಟಕ ಸಂಘಟನೆ ಮುಖಂಡ ರಘು, ಜೆಡಿಎಸ್‌ ಮಾಜಿ ಜಿಲ್ಲಾಧ್ಯಕ್ಷ ಮಂಜಪ್ಪ ಹಾಗೂ ವಿವಿಧ ಸಂಘಟನೆ ಮುಖಂಡರು, ಕಾರ್ಯಕರ್ತರು, ರೈತರು ಪಾಲ್ಗೊಂಡಿದ್ದರು. 19 ಕೆಸಿಕೆಎಂ 1ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಚಿಕ್ಕಮಗಳೂರಿನ ತಾಲೂಕು ಕಚೇರಿ ಎದುರು ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.