ಸ್ಮಶಾನಕ್ಕಾಗಿ ಅಧ್ಯಕ್ಷರು-ಅಧಿಕಾರಿಗಳಿಗೆ ಸದಸ್ಯರಿಂದ ತರಾಟೆ

| Published : Mar 16 2025, 01:48 AM IST

ಸ್ಮಶಾನಕ್ಕಾಗಿ ಅಧ್ಯಕ್ಷರು-ಅಧಿಕಾರಿಗಳಿಗೆ ಸದಸ್ಯರಿಂದ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು: ಬದುಕಿರುವವರಿಗೆ ಮನೆ ಕಟ್ಟಿಸಿಕೊಡುವ ಬಗ್ಗೆ ಇರುವ ಆಸಕ್ತಿ ಸತ್ತವರಿಗೆ ನೆಮ್ಮದಿಯ ಸಂಸ್ಕಾರ ಸಿಗಲು ಸ್ಮಶಾನದಲ್ಲಿ ಒಂದಿಷ್ಟು ಜಾಗ ಮಾಡಿಕೊಡಬೇಕೆಂದು ಏಕೆ ಅನಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯೆ ಲತಾಗಂಗಯ್ಯ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಕುದೂರು: ಬದುಕಿರುವವರಿಗೆ ಮನೆ ಕಟ್ಟಿಸಿಕೊಡುವ ಬಗ್ಗೆ ಇರುವ ಆಸಕ್ತಿ ಸತ್ತವರಿಗೆ ನೆಮ್ಮದಿಯ ಸಂಸ್ಕಾರ ಸಿಗಲು ಸ್ಮಶಾನದಲ್ಲಿ ಒಂದಿಷ್ಟು ಜಾಗ ಮಾಡಿಕೊಡಬೇಕೆಂದು ಏಕೆ ಅನಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯೆ ಲತಾಗಂಗಯ್ಯ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಕುದೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಒಂದು ಹೆಣ ಹೂಳುವಾಗ ಅದರ ಕೆಳಗೆ ಮತ್ತೊಂದು ಹೆಣ ಸಿಗುತ್ತದೆ. ಅದಕ್ಕಾಗಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಿಸಿಕೊಡಬೇಕು. ಈಗಾಗಲೇ 37 ಕುಂಟೆ ಸ್ಮಶಾನಕ್ಕೆಂದು ಜಾಗ ಮಂಜೂರಾಗಿದೆ. ಅದನ್ನು ಅದ್ದುಬಸ್ತು ಮಾಡಿಸುತ್ತೇವೆ ಎಂಬ ವಿಷಯವನ್ನು ಅಧಿಕಾರಿಗಳು ಪ್ರಕಟಿಸಿದರು. ಸಂಸ್ಕಾರದ ಸಮಸ್ಯೆಯನ್ನು ಚರ್ಚೆ ಮಾಡುವ ತನಕ ಅಧಿಕಾರಿಗಳು ಏಕೆ ಮಂಜೂರಾದ ಸ್ಮಶಾನದ ವಿಷಯವನ್ನು ಪ್ರಕಟಿಸಲಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು.

ಕನ್ನಡ ನಾಮಫಲಕಗಳು ಮುರಿದು ಬಿದ್ದಿವೆ, ಅದನ್ನು ಸರಿಯಾಗಿ ಬರೆಸಿ ಹಾಕಿಸಿ ಎಂದು ಕಳೆದೊಂದು ವರ್ಷದಿಂದ ಹೇಳುತ್ತಿದ್ದರೂ ಸರಿಮಾಡಿಸುತ್ತಿಲ್ಲ. ಒಣಕಸ ಮತ್ತು ಹಸಿಕಸ ಎಂದು ವಿಂಗಡಿಸಿ ಅದರಿಂದ ಗೊಬ್ಬರ ತಯಾರಿಸಿ ಅದನ್ನು ಮಾರಾಟ ಮಾಡಿ ಪಂಚಾಯ್ತಿಗೆ ಆದಾಯದ ದಾರಿ ಮಾಡಿಕೊಳ್ಳಬೇಕು ಎಂದು ಸದಸ್ಯೆ ಲತಾಗಂಗಯ್ಯ ಕೇಳಿದರು.

ಪಂಚಾಯ್ತಿ ಅಂಗಡಿ ಮಳಿಗೆಯ ಬಾಡಿಗೆ ಅವಧಿ ಮೀರಿದ್ದರು ಅಂಗಡಿ ಖಾಲಿ ಮಾಡದೆ ಕೋರ್ಟ್ ಮೆಟ್ಟಿಲೇರಿದ್ದ ಬಾಡಿಗೆದಾರನ ವಿರುದ್ಧ ಹೈಕೋರ್ಟ್‌ನಲ್ಲಿ ಅಂಗಡಿ ತೆರವು ಮಾಡಲು ತೀರ್ಪು ನೀಡಿದೆ. ಸೋಮವಾರದೊಳಗೆ ಅಂಗಡಿ ಖಾಲಿ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಪೊಲೀಸ್ ಸಮ್ಮುಖದಲ್ಲಿ ಅಂಗಡಿ ಬೀಗ ಒಡೆದು ಅಂಗಡಿ ತೆರವು ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮದ ಶ್ರೀರಾಮಲೀಲಾ ಮೈದಾನವನ್ನು ಹೈಟೆಕ್ ಮೈದಾನವನ್ನಾಗಿ ನಿರ್ಮಿಸಲು ಮೈದಾನಕ್ಕೆ ಹೊಂದಿಕೊಂಡಿರುವ ಮರಗಳನ್ನು ಕಡಿಯುವುದಕ್ಕೆ ಸದಸ್ಯೆ ಕುಸುಮಾಹೊನ್ನರಾಜ್, ಬಾಲಕೃಷ್ಣ ವಿರೋಧ ವ್ಯಕ್ತಪಡಿಸಿದರು. ಆದರೆ ಮೈದಾನಕ್ಕೆ ಆಧುನಿಕ ಸ್ಪರ್ಶ ಸಿಗಬೇಕಾದರೆ ಮರಗಳ ಬೇರುಗಳು ತೊಂದರೆ ಕೊಡುತ್ತವೆ. ಹೀಗಾಗಿ ಮರಗಳನ್ನು ಕಡಿದು ಮೈದಾನದ ಇತರೆ ಕಡೆಗಳಲ್ಲಿ ಗಿಡ ನೆಟ್ಟು ಬೆಳೆಸಲಾಗುತ್ತದೆ ಎಂದು ತೀರ್ಮಾನಿಸಲಾಯಿತು.

ಈ ಹಿಂದಿನ ಪಿಡಿಒ ಅವಧಿಯಲ್ಲಿ 16 ಲಕ್ಷ ರು. ವಿದ್ಯುತ್ ಉಪಕರಣಗಳು ಮತ್ತು ಪೈಪುಗಳ ಬಾಕಿ ವಸೂಲಿಗೆ ಅಂಗಡಿ ಮಾಲೀಕರು ಸಭೆಯಲ್ಲಿ ಹಣ ನೀಡುವಂತೆ ಮನವಿ ಮಾಡಿದರು. ಆದರೆ ಅಷ್ಟು ವಸ್ತುಗಳು ಪಂಚಾಯ್ತಿಗೆ ಪೂರೈಕೆ ಆಗಿಲ್ಲ. ಇದರಲ್ಲೇನೋ ಗೋಲ್ಮಾಲ್ ಆಗಿದೆ ಹಳೆಯ ಪಿಡಿಒ ಬಳಿ ವಿಚಾರಿಸಿ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಪಂಚಾಯ್ತಿ ನೌಕರರಿಗೆ ಇನ್ಷ್ಯೂರನ್ಸ್ ಮಾಡಿಸುವ ವ್ಯವಸ್ಥೆ ಆಗಬೇಕು. ಅರ್ಧ ಹಣವನ್ನು ನೌಕರರು ನೀಡಿದರೆ ಉಳಿದರ್ಧ ಹಣವನ್ನು ಪಂಚಾಯ್ತಿ ಭರಿಸಬೇಕು ಎಂದು ಸದಸ್ಯ ಕೆ.ಬಿ.ಬಾಲರಾಜ್ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯ್ತಿ ಅಧ್ಯಕ್ಷೆ ರೇಖಾಸೋಮೇಶ್, ಉಪಾಧ್ಯಕ್ಷೆ ರಮ್ಯಾ, ಪಿಡಿಒ ಪುರುಷೋತ್ತಮ್, ಕಾರ್ಯದರ್ಶಿ ವೆಂಕಟೇಶ್ ಉಪಸ್ಥಿತರಿದ್ದರು.

15ಕೆಆರ್ ಎಂಎನ್ 6.ಜೆಪಿಜಿ

ಕುದೂರು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮೈದಾನದಲ್ಲಿ ಮರ ಕಡಿಯುವ ವಿಷಯವಾಗಿ ಬಿರುಸಿನ ಮಾತುಕತೆಯಾಯಿತು.