ಗುಣಮಟ್ಟದ ಆಹಾರ ಧಾನ್ಯ ಪೂರೈಸುವುದು, ಶಾಲಾ ಎಸ್‌ಡಿಎಂಸಿ ಖಾತೆಯನ್ನು ಮುಖ್ಯಶಿಕ್ಷಕರು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆಯನ್ನಾಗಿ ಮುಂದುವರಿಸುವುದು
ಗದಗ: ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಬಾಕಿ ವೇತನ ಬಿಡುಗಡೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ಮುಂಡರಗಿ ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷೆ ಶಾಂತಾ ನಾಯಕ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಕೂಡಲೇ ಬಾಕಿ ಗೌರವಧನ ಪಾವತಿಸಬೇಕು. ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ವೇತನ ಜಮೆಯಾಗಬೇಕು. ಸಿಬ್ಬಂದಿಯನ್ನು ಕನಿಷ್ಠ ಕೂಲಿ ಕಾರ್ಮಿಕರೆಂದು ಪರಿಗಣಿಸಿ ಮಾಸಿಕ 12 ಸಾವಿರ ವೇತನ, ನಿವೃತ್ತಿ ಸೌಲಭ್ಯವಾಗಿ 2 ಲಕ್ಷ ನೀಡಬೇಕು ಮತ್ತು ಮೊಟ್ಟೆ ಸುಲಿಯುವ ದರವನ್ನು ಪ್ರತಿ ಮೊಟ್ಟೆಗೆ 1 ರುಪಾಯಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಗುಣಮಟ್ಟದ ಆಹಾರ ಧಾನ್ಯ ಪೂರೈಸುವುದು, ಶಾಲಾ ಎಸ್‌ಡಿಎಂಸಿ ಖಾತೆಯನ್ನು ಮುಖ್ಯಶಿಕ್ಷಕರು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆಯನ್ನಾಗಿ ಮುಂದುವರಿಸುವುದು ಮತ್ತು ಬಿಸಿಯೂಟ ತಯಾರಿಕೆಯನ್ನು ಯಾವುದೇ ಕಾರಣಕ್ಕೂ ಎನ್‌ಜಿಒ ಅಥವಾ ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಉಪಾಧ್ಯಕ್ಷೆ ಮುದಕವ್ವ ತಳವಾರ, ಕಾರ್ಯದರ್ಶಿ ಅಕ್ಕಮ್ಮ ಹಡಪದ, ಪ್ರಮುಖರಾದ ಶೋಭಾ ಹುಲವತ್ತಿ, ಇಮಾಂಬಿ ಹಾರೂಗೇರಿ, ಮಂಜಕ್ಕ ಬಿದರಳ್ಳಿ, ಶಕುಂತಲಾ ಹಿರೇಮಠ, ಶಾಂತಾ ಮೇವುಂಡಿ, ಗಾಯತ್ರಿ ಜಂಟ್ಲಿಶಿರೂರ, ಸಾವಿತ್ರಿ, ಸೀತಾ ದೋಣಿ, ಮಾಲಾ ಮೇಟಿ, ಪವಿತ್ರಾ ಕುರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.