ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ನಿರಂಜನ ಪೀಠದಲ್ಲಿ ಲಿಂಗೈಕ್ಯ ಹಿರಿಯ ಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ 19ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ 26ನೇ ಅರಿವಿನ ಜಾಗೃತಿ ಕಾರ್ಯಕ್ರಮವನ್ನು ಜ.10ರಂದು ಸಾಣೇಹಳ್ಳಿ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ನಿರಂಜನ ಪೀಠದಲ್ಲಿ ಲಿಂಗೈಕ್ಯ ಹಿರಿಯ ಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ 19ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ 26ನೇ ಅರಿವಿನ ಜಾಗೃತಿ ಕಾರ್ಯಕ್ರಮವನ್ನು ಜ.10ರಂದು ಸಾಣೇಹಳ್ಳಿ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು. ಮಂಗಳವಾರ ನಿರಂಜನ ಪೀಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ಸಂಪ್ರದಾಯದಂತೆ ಹಾಗೂ ಭಕ್ತರ ಆಶಯದಂತೆ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಈ ವರ್ಷವೂ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಒಳಗೊಂಡಂತೆ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ದಿನ ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲ್ಪಡಲಿದ್ದು, ಬೆಳಿಗ್ಗೆ 9.30ಕ್ಕೆ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಹಿರಿಯ ಗುರುಗಳ ಹಾಗೂ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಡೇವ ವಾದ್ಯದೊಂದಿಗೆ ನಡೆಯಲಿದೆ ಎಂದು ವಿವರಿಸಿದರು. ಬೆಳಿಗ್ಗೆ 11 ಗಂಟೆಗೆ ಸಾಣೇಹಳ್ಳಿ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಧಾರ್ಮಿಕ ಸಮಾರಂಭ ನಡೆಯಲಿದ್ದು, ನೂತನ ವಿದ್ಯಾರ್ಥಿ ನಿಲಯ ಕಟ್ಟಡದ ಉದ್ಘಾಟನೆಯನ್ನು ಕೆರಗೋಡಿ ರಂಗಾಪುರ ಕ್ಷೇತ್ರದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ನೆರವೇರಿಸಲಿದ್ದು, ಅನೇಕ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಎಂ.ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎಚ್.ಡಿ.ರೇವಣ್ಣ, ಎಚ್.ಡಿ. ತಮ್ಮಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು, ಮಾಜಿ ಶಾಸಕರು, ಸಾಹಿತಿಗಳು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ ಎಂದು ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.
