ಮುಟ್ಟಿನ ರಜೆಯನ್ನು ಈಗಾಗಲೇ ಬಿಹಾರ, ಒಡಿಶಾ ರಾಜ್ಯಗಳಲ್ಲಿ ನೀಡಲಾಗುತ್ತಿದೆ. ಅದರಂತೆ ಕರ್ನಾಟಕ ಸರ್ಕಾರವೂ ವೇತನ ಸಹಿತ ಮುಟ್ಟಿನ ರಜೆ ನೀಡುವಂತೆ ಆದೇಶ ಹೊರಡಿಸಿದೆ. ಆದರೆ, ಮಹಿಳೆಯರಿಗೆ ರಜೆ ನೀಡುವುದಕ್ಕೆ ಕಾರ್ಖಾನೆಗಳು, ಉದ್ಯಮಿಗಳು, ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಅತ್ಯವಶ್ಯವಾಗಿದೆ. ಮುಟ್ಟಿನ ರಜೆ ನೀಡುವುದಕ್ಕೆ ಕೆಲವು ಉದ್ಯಮಿಗಳು, ಮಾಲೀಕರು ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದು ಗಾರ್ಮೆಂಟ್ಸ್ ಅಂಡ್ ಟೆಕ್ಸ್‌ಟೈಲ್ಸ್ ವರ್ಕರ್ಸ್‌ ಯೂನಿಯನ್ ಅಧ್ಯಕ್ಷೆ ಡಾ.ಆರ್.ಪ್ರತಿಭಾ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಲೇಖಕಿಯರ ಸಮ್ಮೇಳನದಲ್ಲಿ ಸಮಕಾಲೀನ ತಲ್ಲಣಗಳು ಗೋಷ್ಠಿಯಲ್ಲಿ ಗಾರ್ಮೆಂಟ್ಸ್ ಉದ್ಯಮದಲ್ಲಿ ಮಹಿಳೆಯರು ವಿಷಯದ ಕುರಿತ ಮಾತನಾಡಿ, ಮುಟ್ಟಿನ ರಜೆಯನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಸರಿಯಲ್ಲ. ಮುಟ್ಟಿನ ವೇಳೆ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಮನೋಭಾವವನ್ನು ಉದ್ಯಮಿಗಳು, ಮಾಲೀಕರು ಬೆಳೆಸಿಕೊಳ್ಳಬೇಕು ಎಂದರು.

ಮುಟ್ಟಿನ ರಜೆಯನ್ನು ಈಗಾಗಲೇ ಬಿಹಾರ, ಒಡಿಶಾ ರಾಜ್ಯಗಳಲ್ಲಿ ನೀಡಲಾಗುತ್ತಿದೆ. ಅದರಂತೆ ಕರ್ನಾಟಕ ಸರ್ಕಾರವೂ ವೇತನ ಸಹಿತ ಮುಟ್ಟಿನ ರಜೆ ನೀಡುವಂತೆ ಆದೇಶ ಹೊರಡಿಸಿದೆ. ಆದರೆ, ಮಹಿಳೆಯರಿಗೆ ರಜೆ ನೀಡುವುದಕ್ಕೆ ಕಾರ್ಖಾನೆಗಳು, ಉದ್ಯಮಿಗಳು, ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಮಹಿಳೆಯರಿಗೆ ನೀಡಬೇಕಾದ ಮುಟ್ಟಿನ ರಜೆ ವೇತನವನ್ನು ವಾರ್ಷಿಕವಾಗಿ ಲೆಕ್ಕ ಹಾಕುತ್ತಿದ್ದಾರೆ. ಅದಕ್ಕಾಗಿ ರಜೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಆಗ ಮಧ್ಯಪ್ರವೇಶಿಸಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ ಮಾತನಾಡಿ, ಮುಟ್ಟು ಮಹಿಳೆಯರ ವೈಯಕ್ತಿಕ ಸಮಸ್ಯೆಯಲ್ಲ, ಅದು ಸಮಾಜದ ಸಮಸ್ಯೆ. ಉತ್ಪಾದಕರನ್ನು ಉತ್ಪಾದಿಸುವವಳು ಮಹಿಳೆ. ಅದಕ್ಕಾಗಿ ಸಮಾಜ ಮಹಿಳೆಯರಿಗೆ ಸ್ಪಂದಿಸಲೇಬೇಕು ಎಂದು ಪ್ರತಿಪಾದಿಸಿದರು.

ಕಣ್ಣಿಗೆ ಹೆಚ್ಚು ಶ್ರಮ ಕೊಡುವ ಸೂಕ್ಷ್ಮ ಕೆಲಸಗಳನ್ನು ಮಹಿಳೆಯರೇ ಮಾಡುತ್ತಿದ್ದಾರೆ. ಆ ಸಹನೆ ಮತ್ತು ತಾಳ್ಮೆ ಗಂಡಸರಿಗೆ ಇರುವುದಿಲ್ಲ. ಕರ್ತವ್ಯನಿಷ್ಠೆ, ಬದ್ಧತೆಯಲ್ಲಿ ಮಹಿಳೆ ಪುರುಷನನ್ನು ಮೀರಿಸುವಷ್ಟು ಶಕ್ತಿಯನ್ನು ಹೊಂದಿದ್ದಾಳೆ. ಅದಕ್ಕಾಗಿ ಮಹಿಳೆಯರಿಗೆ ಉದ್ಯೋಗವಕಾಶಗಳು ಸಿಕ್ಕೇ ಸಿಗುತ್ತಿವೆ. ಮುಟ್ಟಿನ ರಜೆಗೆ ಯಾರೂ ಕಡಿವಾಣ ಹಾಕದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದರು.

ಗೋಷ್ಠಿಯಲ್ಲಿ ಮಾತು ಮುಂದುವರೆಸಿದ ಡಾ.ಆರ್.ಪ್ರತಿಭಾ ಅವರು, ಹೆರಿಗೆ ರಜೆ ನೀಡುವ ಸಮಯದಲ್ಲೂ ಇದೇ ವಾದಗಳು ಮುಂಚೂಣಿಗೆ ಬಂದಿದ್ದವು. ಈಗ ಮುಟ್ಟಿನ ರಜೆಗೂ ದುರುಪಯೋಗದ ಆರೋಪಗಳು ಕೇಳಿಬರುತ್ತಿವೆ. ಮಹಿಳೆಯರು ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕನಿಷ್ಠ ವೇತನ ನಿಗದಿಪಡಿಸುವಲ್ಲೂ ರಾಜ್ಯಸರ್ಕಾರಗಳು ಕೈಗಾರಿಕೋದ್ಯಮಿಗಳ ಪರವಾಗಿಯೇ ನಿಲ್ಲುತ್ತಿರುವುದು ದುರಂತ. ಮಹಾನಗರಗಳಲ್ಲಿರುವ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವವರಿಗೇ ಒಂದು ಮಾದರಿ ಕನಿಷ್ಠ ವೇತನ, ವಲಯವಾರು ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೇ ಒಂದು ರೀತಿಯ ಕನಿಷ್ಠ ವೇತನವನ್ನು ನಿಗದಿಪಡಿಸುತ್ತಿವೆ. ಇದು ಸರಿಯಲ್ಲ. ಈ ತಾರತಮ್ಯ ಹೋಗಿ ಎಲ್ಲರಿಗೂ ಏಕರೂಪದ ಕನಿಷ್ಠವೇತನ, ಶ್ರಮಕ್ಕೆ ತಕ್ಕ ವೇತನವನ್ನು ನೀಡಬೇಕು ಎಂದರು.

ಜಿಲ್ಲಾ ಲೇಖಕಿಯರ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಟಿ.ಸಿ.ಪೂರ್ಣಿಮಾ ಹಾಗೂ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇದ್ದರು.