ಸಾಂಸ್ಕೃತಿಕ ಕಾರ್ಯಕ್ರಮದಿಂದ ಮಾನಸಿಕ ನೆಮ್ಮದಿ: ಶಾಸಕ ಆರ್.ವಿ. ದೇಶಪಾಂಡೆ

| Published : Nov 18 2024, 12:03 AM IST

ಸಾರಾಂಶ

ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು. ಇಂದಿನ ದ್ವೇಷಮಯ ವಾತಾವರಣದಲ್ಲಿ ಪ್ರೀತಿ, ಸಹಬಾಳ್ವೆ, ಸಾಮರಸ್ಯತೆಯು ಅವಶ್ಯಕವಾಗಿದೆ.

ಹಳಿಯಾಳ: ಸಂಗೀತ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಭಿರುಚಿಯನ್ನು ಹೊಂದಿದವರಿಗೆ ಮಾನಸಿಕ ನೆಮ್ಮದಿ, ಶಾಂತಿಯು ಲಭಿಸುತ್ತದೆ. ಅದಕ್ಕಾಗಿ ನಿತ್ಯದ ಬದುಕಿನಲ್ಲಿ ಸ್ವಲ್ಪ ಸಮಯವನ್ನು ಸಂಗೀತ ಮತ್ತು ಮನರಂಜನಾ ಚಟುವಟಿಕೆಗಳಿಗೆ ಮೀಸಲಾಗಿಡಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಶನಿವಾರ ಸಂಜೆ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಪೆಂಡಾಲ್ ಅಸೋಸಿಯೇಶನ್‌ನವರು ಆಯೋಜಿಸಿದ್ದ ಪೆಂಡಾಲ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಜಿಲ್ಲೆಯ ನಮ್ಮ ಕಲೆ, ಸಂಸ್ಕೃತಿ, ಪರಂಪರೆಯನ್ನು ಅನಾವರಣಗೊಳಿಸಲು ಮತ್ತು ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಸಾಂಸ್ಕೃತಿಕ ಉತ್ಸವ ಆಚರಣೆಯನ್ನು ಆರಂಭಿಸಿದೆ ಎಂದು ನೆನಪಿಸಿಕೊಂಡ ಅವರು, ಕರಾವಳಿ ಉತ್ಸವ, ಕದಂಬ ಉತ್ಸವ, ಕಾಳಿ ಉತ್ಸವದಂತಹ ಸಾಂಸ್ಕೃತಿಕ ಉತ್ಸವಗಳು ಜಿಲ್ಲೆಯಲ್ಲಿ ಆರಂಭವಾದವು. ಹಳಿಯಾಳದಲ್ಲೂ ವಿಆರ್‌ಡಿ ಟ್ರಸ್ಟ್‌ನಿಂದ ಹಳಿಯಾಳ ಹಬ್ಬವನ್ನು ಆಯೋಜಿಸಲಾಗುತ್ತಿತ್ತು ಎಂದರು.

ಪೆಂಡಾಲ್ ಉತ್ಸವವನ್ನು ಜಾತ್ರೆಯ ಸ್ವರೂಪದಲ್ಲಿ ಅತ್ಯುತ್ತಮವಾಗಿ ಸಂಘಟಿಸಿದ ತಾಲೂಕಿನ ಎಲ್ಲ ಶಾಮಿಯಾನ ಮಾಲೀಕರು ಮತ್ತು ಕಾರ್ಮಿಕರ ಬಳಗದ ಪ್ರಯತ್ನ ಅಭಿನಂದನೆಗೆ ಅರ್ಹವಾಗಿದೆ ಎಂದರು.

ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು. ಇಂದಿನ ದ್ವೇಷಮಯ ವಾತಾವರಣದಲ್ಲಿ ಪ್ರೀತಿ, ಸಹಬಾಳ್ವೆ, ಸಾಮರಸ್ಯತೆಯು ಅವಶ್ಯಕವಾಗಿದೆ. ದ್ವೇಷದಿಂದ ಮಾನವ, ಸಮಾಜ, ರಾಜ್ಯ ಮತ್ತು ದೇಶದ ಅಭಿವೃದ್ಧಿ ಅಸಾಧ್ಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತರ ಕರ್ನಾಟಕ ಶಾಮಿಯಾನ ಸಪ್ಲೈಯರ್ಸ್ ಸಂಘದ ಅಧ್ಯಕ್ಷ ಅಮರೇಶ ಹಿರೇಮಠ ಮಾತನಾಡಿ, ಶಾಮಿಯಾನ ಮತ್ತು ಪೆಂಡಾಲ್ ಇದರ ಕಾರ್ಮಿಕ ಮತ್ತು ಮಾಲೀಕರು ಅಸಂಘಟಿತ ಕಾರ್ಮಿಕ ವಲಯದಲ್ಲಿ ಬರುತ್ತಾರೆ. ಇಂದು ಶಾಮಿಯಾನ ಹಾಕುವಾಗ ಕಾರ್ಮಿಕರಾಗಲಿ ಅಥವಾ ಮಾಲೀಕರು ಮೃತಪಟ್ಟರೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಇದರಿಂದ ನಮ್ಮ ಉದ್ಯಮಕ್ಕೆ ಅನ್ಯಾಯವಾಗುತ್ತಿದೆ ಎಂದರು.

ಸರ್ಕಾರ ನಮ್ಮನ್ನು ಸಣ್ಣ ಕೈಗಾರಿಕಾ ವರ್ಗದಲ್ಲಿ ಸೇರ್ಪಡೆ ಮಾಡುವ ಮೂಲಕ ಸಣ್ಣ ಕೈಗಾರಿಕೆಗಳಿಗೆ ದೊರೆಯುವ ಆರ್ಥಿಕ ಸಾಲ ಸೌಲಭ್ಯ ಇತರೆ ಯೋಜನೆಗಳನ್ನು ದೊರಕಿಸಲು ಮುಂದಾಗಬೇಕು. ನಮ್ಮ ಕಾರ್ಮಿಕರನ್ನು ಕಾರ್ಮಿಕ ವಲಯದಲ್ಲಿ ಸೇರ್ಪಡೆ ಮಾಡಲು ಸರ್ಕಾರ ಮುಂದಾಗಬೇಕು. ಮುಂಬರುವ ಚಳಿಗಾಲದ ಅದಿವೇಶನದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಶಾಸಕ ದೇಶಪಾಂಡೆಯವರು ನಮ್ಮ ಪರವಾಗಿ ಸದನದಲ್ಲಿ ಧ್ವನಿಯೆತ್ತಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಮುಖಂಡ ಕೆ.ಆರ್. ರಮೇಶ, ಉಮೇಶ ಬೊಳಶೆಟ್ಟಿ ಮಾತನಾಡಿದರು. ಮಂಜುನಾಥ ಭಾರತಿ ಸ್ವಾಮೀಜಿ, ಗರಡೊಳ್ಳಿ ಚರ್ಚ್‌ನ ಗುರು ರೋನಾಲ್ಡೋ, ಮುಸ್ಲಿಂ ಧರ್ಮಗುರು ಮೌಲ್ವಿ ಫಯಾಜ್ ಮುಪ್ತಿ ಇಟ್ಟಂಗಿವಾಲೆ ಸಾನ್ನಿಧ್ಯ ವಹಿಸಿದ್ದರು. ಪೆಂಡಾಲ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ದೇಮಣ್ಣ ವಾಡಕರ, ಪ್ರಧಾನ ಕಾರ್ಯದರ್ಶಿ ಸಿರಾಜ ಮುನವಳ್ಳಿ, ತಾಲೂಕು ಅಧ್ಯಕ್ಷ ಬಾಳು ಜಾಧವ, ಸಂಜು ದೇವಕಾರಿ, ನಿಯಾಜಹ್ಮದ ಲತೀಪಣ್ಣನವರ ಹಾಗೂ ಹಳಿಯಾಳದ ಜನಪ್ರತಿನಿಧಿಗಳು ಇದ್ದರು.