ಸಾಧನೆಗೆ ಮನೋಸ್ಥೈರ್ಯ ಮುಖ್ಯ: ಅನನ್ಯ ಪ್ರಸಾದ್

| Published : Mar 25 2025, 12:45 AM IST

ಸಾರಾಂಶ

ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕನಸಿನ ಅಲೆ ಮಾತನಾಡಿದಾಗ-ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಟ್ಲಾಂಟಿಕ್ ಸಾಗರ ದಾಟಿದ ಮೊದಲ ಭಾರತೀಯ ಮಹಿಳೆ ಅನನ್ಯ ಪ್ರಸಾದ್‌ರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾವು ಯಾವುದೇ ಸಾಧನೆ ಮಾಡಬೇಕಾದರೆ ಶಕ್ತಿ ಹಾಗೂ ಬುದ್ಧಿವಂತಿಕೆಗಿಂತ ಮನೋಸ್ಥೈರ್ಯ ಅತಿಮುಖ್ಯ ಎಂದು ಅಟ್ಲಾಂಟಿಕ್ ಸಾಗರ ದಾಟಿದ ಮೊದಲ ಭಾರತೀಯ ಮಹಿಳೆ ಜಿ.ಎಸ್.ಶಿವರುದ್ರಪ್ಪ ಮೊಮ್ಮಗಳು ಅನನ್ಯ ಪ್ರಸಾದ್ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿನಿಯರ ಸಂಘದಿಂದ ಹಮ್ಮಿಕೊಂಡಿದ್ದ ಕನಸಿನ ಅಲೆ ಮಾತನಾಡಿದಾಗ-ಸಾಧಕರೊಂದಿಗೆ ಸಂವಾದದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮೊದಲು ನಾನು ಈ ಸಾಧನೆ ಮಾಡಬೇಕೆಂದು ಅಂದುಕೊಂಡಿರಲಿಲ್ಲ. ೬ ಜನರ ತಂಡದಲ್ಲಿ ಇಬ್ಬರೇ ನಾವು ಮಹಿಳೆಯರಿದ್ದೆವು, 4 ಮಂದಿ ಪುರುಷರ ಸಮುದ್ರಯಾನ ನೋಡಿ ನಾನು ಮನೋಸ್ಥೈರ್ಯ ತಂದುಕೊಂಡು ಸಾಧನೆಗೆ ಇಳಿದೆ ಎಂದರು.

ಸಾಹಸ ಕ್ರೀಡೆಗಳಲ್ಲಿ ಯಾವುದೇ ಅನುಭವವಿರಲಿಲ್ಲ. ಇದರ ಹೊರತಾಗಿಯೂ, ಹೊಸ ಮತ್ತು ಸವಾಲಿನ ಚಟುವಟಿಕೆಗಳನ್ನು ಪ್ರಯತ್ನಿಸಿದೆ, ಇದರ ಬಗ್ಗೆ ಕುತೂಹಲವನ್ನು ಹೊಂದಿ ಸಾಹಸಮಯ ಪ್ರವೃತ್ತಿಯು ಬೈಕಿಂಗ್ ಮತ್ತು ಕಯಾಕಿಂಗ್ ಅನ್ನು ಅನುಸರಿಸಲು ಪ್ರೇರೇಪಿತು ಎಂದರು. ತಾಂತ್ರಿಕ ಕೌಶಲ್ಯ ಮತ್ತು ಅಚಲ ಮಾನಸಿಕ ದೃಢಸಂಕಲ್ಪ ಹೊಂದಿದಾಗ ನಾವು ಯಾವ ಸಾಧನೆ ಮಾಡಲು ಸಾಧ್ಯ ಎಂದರು.

ಅನನ್ಯಳಿಂದ ಅನನ್ಯ ಸಾಧನೆ:

ದೀನಬಂಧು ಸಂಸ್ಥೆಯ ಪ್ರೊ.ಜಿ.ಎಸ್‌.ಜಯದೇವ್ ಮಾತನಾಡಿ, ಹೆಸರಿಗೆ ತಕ್ಕ ಹಾಗೆ ಅನನ್ಯ ಅಟ್ಲಾಂಟಿಕ್ ಸಾಗರ ದಾಟಿ ಅನನ್ಯ ಸಾಧನೆ ಮಾಡಿದ್ದಾಳೆ. ನಾವು ಎಷ್ಟೇ ದೊಡ್ಡವರಾದರೂ ಚಿಕ್ಕವರಿಂದಲೂ ಪಾಠ ಕಲಿಯಬಹುದು ಎಂಬುದಕ್ಕೆ ಅನನ್ಯ ಸಾಕ್ಷಿಯಾಗಿದ್ದಾಳೆ .ಅನನ್ಯ ಛಲ ಬಿಡದೆ, ಅಟ್ಲಾಂಟಿಕ್ ಸಾಗರದ ಅಲೆಗಳ ನಡುವೆ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬುದ್ದಿ, ಶಕ್ತಿಗಿಂತ ಸಾಧಿಸುತ್ತೇನೆ ಎಂಬ ಮನೋಭಾವದಿಂದ ಮುನ್ನುಗ್ಗಿ ಅನನ್ಯ ಸಾಧಿಸಿದ್ದಾಳೆ. ತನ್ನ ಒಳಿತನ ಜೊತೆಗೆ ಇತರರ ಒಳಿತನ್ನು ಬಯಸಿ ದೀನಬಂಧು ಸಂಸ್ಥೆಗೆ ತನ್ನದೇ ಆದ ಸಹಾಯ ಚಾಚಿದ್ದಾಳೆ. ಅನನ್ಯಳ ಸಾಧನೆ ಒಂದು ಜರ್ನಿ, ಇದು ಇತರರಿಗೆ ಪಾಠ ಎಂದರು. ೫೨ ದಿನಗಳು, ೫ಸಾವಿರ ಕಿಮೀ ಜೀವನವನ್ನೇ ಮುಡುಪಾಗಿಟ್ಟು ಕಠಿಣ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿದ್ದಾಳೆ.

ಸುಮಾರು 2 ತಿಂಗಳ ಕಾಲ, ಅಟ್ಲಾಂಟಿಕ್‌ನಾದ್ಯಂತ ಸಾವಿರಾರು ಕಿ.ಮೀ ದೋಣಿ ಸವಾರಿ ಮಾಡಿದರು, ಅವರ ಶಕ್ತಿ, ಸಹಿಷ್ಣುತೆ ಮತ್ತು ಸ್ಥಿತಿಸ್ಥಾಪಕತ್ವ ಪರೀಕ್ಷಿಸುವ ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಎದುರಿಸಿದರು. ಇನ್ನೊಬ್ಬರ ಒಳಿತನ್ನು ಬಯಸಿ ಸಾಧನೆ ಮಾಡಿದ್ದಾಳೆ ಇದು ಇತರರಿಗೆ ಮಾದರಿಯಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಕೆ ಎಸ್ ಅರುಣಶ್ರೀ ಪ್ರಾಸ್ತಾವಿಕ ಮಾತನಾಡಿ, ಅನನ್ಯ ಸಾಧನೆ ನಮಗೆಲ್ಲಾ ಸ್ಫೂರ್ತಿ ಎಂದರು. ಜೆಎಸ್‌ಎಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ.ಸ್ವಾಮಿ. ಜೆಎಸ್‌ಎಸ್ ಮಹಿಳಾ ಕಾಲೇಜು ಹಿರಿಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಕೆ.ಎಸ್.ಸುಮಾ, ಉಪನ್ಯಾಸಕರಾದ ಕೆ.ಎಸ್.ಅರುಣ, ಸೌಮ್ಯ,ಜಮುನಾ, ಅನನ್ಯ ಪೋಷಕರು, ವಿದ್ಯಾರ್ಥಿಗಳು ಇದ್ದರು.