ಸಾರಾಂಶ
ಮಾನಸಿಕ ಆರೋಗ್ಯ ಕುರಿತು ಅರಿವು ಮೂಡಿಸುವ ಹಾಗೂ ಮಾನಸಿಕ ರೋಗಕ್ಕೆ ತುತ್ತಾಗಿರುವ ವ್ಯಕ್ತಿಗಳ ಸಮಸ್ಯೆಗಳನ್ನು ಆಲಿಸುವ, ಪರಿಹರಿಸುವ ಸಲುವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಮಿತಿಯನ್ನು ರಚನೆ ಮಾಡಿಲಾಗಿದೆ. ಇದು ಜನ ಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಾನಸಿಕ ರೋಗಿಗಳಿಗೆ ಉಚಿತ ಕಾನೂನು ನೆರವನ್ನು ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡುವ ಸೌಲಭ್ಯವಿದೆ. ಅಲ್ಲದೇ ಯಾವುದೇ ನ್ಯಾಯಾಲಯದಲ್ಲಿ ಶುಲ್ಕವಿಲ್ಲದೆ ಉಚಿತವಾಗಿ ಅವರ ಪರವಾಗಿ ಪ್ರಕರಣವನ್ನು ನಡೆಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವಿ.ಕಾಂತರಾಜು ತಿಳಿಸಿದರು. ಅವರು ತಾಲೂಕಿನ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾನಸಿಕ ಆರೋಗ್ಯ ಅರಿವು ಅಗತ್ಯಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮಾನಸಿಕ ರೋಗಿಗಳಿಗೆ ಆರೋಗ್ಯ ಸುಧಾರಿಸಲು ಉಚಿತ ಸಲಹೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ತಮ್ಮ ಮನಸ್ಸಿನ ಮೇಲೆ ಆಗುವ ಒತ್ತಡ, ಗೊಂದಲ, ನಿರಂತರ ಭಯ, ಆತಂಕವನ್ನು ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಇಂತಹ ನಿರ್ಲಕ್ಷ್ಯವನ್ನು ಮಾಡುವುದರಿಂದ ಹೆಚ್ಚಿನ ತೊಂದರೆಗೆ ಗುರಿಯಾಗುತ್ತಾರೆ ಎಂದರು.
ಜೊತೆಗೆ ಮಾನಸಿಕ ಆರೋಗ್ಯ ಕುರಿತು ಅರಿವು ಮೂಡಿಸುವ ಹಾಗೂ ಮಾನಸಿಕ ರೋಗಕ್ಕೆ ತುತ್ತಾಗಿರುವ ವ್ಯಕ್ತಿಗಳ ಸಮಸ್ಯೆಗಳನ್ನು ಆಲಿಸುವ, ಪರಿಹರಿಸುವ ಸಲುವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಮಿತಿಯನ್ನು ರಚನೆ ಮಾಡಿಲಾಗಿದೆ. ಇದು ಜನ ಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.ವಿವಿಧ ಮಾನಸಿಕ ರೋಗ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಮಾತನಾಡಿ, ಮಾನಸಿಕ ಕಾಯಿಲೆಗಳಲ್ಲೂ ನಾನಾ ಬಗೆಗಳಿವೆ. ಮಕ್ಕಳಲ್ಲಿ ಕಂಡು ಬರುವ ನಡವಳಿಕೆ ದೋಷಗಳು ಮತ್ತಿತರ ಮನಸ್ಸಿನ ಕಾಯಿಲೆಗಳು, ಮನೋ ದೈಹಿಕ ಬೇನೆಗಳು ಸೇರಿದಂತೆ ಹಲವು ರೀತಿಯ ಮಾನಸಿಕ ರೋಗಗಳು ಇರುತ್ತವೆ. ಇಂತಹ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸಾ ಕ್ರಮಗಳನ್ನು ಹತ್ತಿರ ಸರ್ಕಾರಿ ಆಸ್ಪತ್ರೆಗಳ ತಜ್ಞವೈದ್ಯರ ಸಲಹೆ ಪಡೆದು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ.ಬಿ, ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ಡೈರೆಕ್ಟರ್ ಡಾ. ಎಂ.ಎಲ್. ಮಂಜುನಾಥ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಜಿ. ಹೇಮಂತ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಶಿವಕುಮಾರ್, ಮನೋವೈದ್ಯರಾದ ಡಾ. ಜಿ.ಹೇಮಂತ್ ಕುಮಾರ್, ಡಾ. ಎ. ಲಾವಣ್ಯ ಉಪಸ್ಥಿತರಿದ್ದರು.