ಹೆರಿಗೆ ನಂತರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿ, ತನ್ನ ನಾಲ್ಕು ತಿಂಗಳ ಅವಳಿ ಹೆಣ್ಣು ಶಿಶುಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೆರಿಗೆ ನಂತರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿ, ತನ್ನ ನಾಲ್ಕು ತಿಂಗಳ ಅವಳಿ ಹೆಣ್ಣು ಶಿಶುಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.ವಾಜರಹಳ್ಳಿಯ ಬಿಸಿಸಿಎಚ್‌ಎಸ್ ಲೇಔಟ್ ನಿವಾಸಿ ರಾಮಲಿಂಗಪ್ಪ ದಂಪತಿ ಮಕ್ಕಳು ಹತ್ಯೆಗೀಡಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಅವರ ಪತ್ನಿ ಉಮಾದೇವಿಯನ್ನು ರಕ್ಷಿಸಿ ಕುಟುಂಬಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಉಮಾದೇವಿ ನೇಣು ಬಿಗಿದುಕೊಂಡು ಪ್ರಾಣ ತ್ಯಾಗಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾನಸಿಕ ಖಿನ್ನತೆಯೇ ಕಾರಣರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ರಾಮಲಿಂಗಪ್ಪ ಅವರಿಗೆ ಹತ್ತು ವರ್ಷಗಳ ಹಿಂದೆ ಉಮಾದೇವಿ ಜತೆ ವಿವಾಹವಾಗಿತ್ತು. ಆದರೆ ಮದುವೆಯಾಗಿ ದಶಕ ಕಳೆದರೂ ದಂಪತಿಗೆ ಸಂತಾನವಾಗಿರಲಿಲ್ಲ. ನಾಲ್ಕು ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಐವಿಎಫ್ ಮೂಲಕ ಇಬ್ಬರು ಹೆಣ್ಣು ಕಂದಮ್ಮಗಳಿಗೆ ಉಮಾದೇವಿ ಜನ್ಮ ನೀಡಿದ್ದರು. ಆದರೆ ಹೆರಿಗೆ ನಂತರ ಅವರಿಗೆ ಮಾನಸಿಕ ಖಿನ್ನತೆ ಕಾಡಿತು. ಕೊನೆಗೆ ಇದೇ ಯಾತನೆಯೂ ಆ ಕಂದ್ಮಮಗಳನ್ನು ಬಲಿ ಪಡೆದಿದೆ.
ಹೆರಿಗೆಯ ನಂತರ ಸುಮಾರು ಒಂದೂವರೆ ತಿಂಗಳಿನಿಂದ ನನ್ನ ಪತ್ನಿ ಉಮಾದೇವಿಯವರು ಮಕ್ಕಳ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದಳು. ತನ್ನನ್ನು ಆಶ್ರಮಕ್ಕೆ ಸೇರಿಸುವಂತೆ ಹೇಳುತ್ತಿದ್ದಳು. ಅಲ್ಲದೆ ಮನೆಯಲ್ಲಿ ಅಸಹಜವಾಗಿ ಆಕೆ ವರ್ತಿಸುತ್ತಿದ್ದಳು. ಈ ಮಾನಸಿಕ ಕಾಯಿಲೆ ಹಿನ್ನೆಲೆಯಲ್ಲಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮನೋವೈದ್ಯಕೀಯ ಚಿಕಿತ್ಸೆಯನ್ನು ಉಮಾದೇವಿಗೆ ಕೊಡಿಸಲಾಗಿತ್ತು. ಆಗ ಹೆರಿಗೆಯ ನಂತರದ ಪೋಸ್ಟ್ ಪಾರ್ಟಮ್ ಡಿಪ್ರೆಷನ್ ಹಾಗೂ ಹಾರ್ಮೋನ್ ಅಸಮತೋಲನದಿಂದ ಈ ರೀತಿಯ ವರ್ತನೆ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾಗಿ ರಾಮಲಿಂಗಪ್ಪ ತಿಳಿಸಿದ್ದಾರೆ.ಕೆಲಸದ ನಿಮಿತ್ತ ಹೊರ ಹೋಗಿದ್ದ ನಾನು ಮಧ್ಯಾಹ್ನ ಮನೆಗೆ ಮರಳಿದೆ. ಆಗ ಪತ್ನಿ ಕೊಠಡಿಯ ಬಾಗಿಲು ಹಾಕಿಕೊಂಡಿದ್ದಳು. ಆಗ ಬಲವಂತದಿಂದ ಕೋಣೆ ಬಾಗಿಲು ತೆರೆದಾಗ ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದ ಆಕೆಯನ್ನು ರಕ್ಷಿಸಲಾಯಿತು. ಅದೇ ಕೊಠಡಿಯಲ್ಲಿ 4 ತಿಂಗಳ ಅವಳಿ ಹೆಣ್ಣು ಮಕ್ಕಳು ಪ್ರಜ್ಞಾಹೀನಾರಾಗಿದ್ದರು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಶಿಶುಗಳನ್ನು ಕರೆದುಕೊಂಡು ಹೋಗಲಾಯಿತು. ಆಗ ತಪಾಸಣೆ ನಡೆಸಿದ ವೈದ್ಯರು, ಹಸುಗೂಸುಗಳು ನೀರಿನಲ್ಲಿ ಮುಳುಗಿದ ಪರಿಣಾಮ ಮೃತಪಟ್ಟಿವೆ ಎಂದು ಹೇಳಿದರು. ಹೀಗಾಗಿ ತನ್ನ ಪತ್ನಿಯೇ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ನಂತರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ರಾಮಲಿಂಗಪ್ಪ ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಮೇರೆಗೆ ಮೃತ ಮಕ್ಕಳ ತಾಯಿ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
