ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬ ದೇವಿ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತಾದಿಗಳು ಆಗಮಿಸುತ್ತಿದ್ದು, ಧರ್ಮದರ್ಶನದ ಕ್ಯೂನಲ್ಲಿ ಸರಾಸರಿ 2 ಗಂಟೆಯಲ್ಲಿ ಆಗುತ್ತಿದ್ದ ದರ್ಶನ ಸಮಯವು 4 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಹಾಗಾಗಿ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗಲು ಮಾನಸಿಕವಾಗಿ ಸಿದ್ಧರಾಗಿ ಬರುವಂತೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.ಉಸ್ತುವಾರಿ ಸಚಿವರು ಧರ್ಮದರ್ಶನ ಸಾಲಿನಲ್ಲಿ ಸಾಗುತ್ತಿದ್ದ ಜನರನ್ನು ಮಂಗಳವಾರ ಮಾತನಾಡಿಸಿ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, "ಇಂದು ಐದನೇ ದಿನ. ಶುಕ್ರವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆ ೫ ಗಂಟೆಯವರೆಗೆ ೬,೪೦,೭೦೦ ಭಕ್ತಾದಿಗಳು ದೇವಿ ದರ್ಶನ ಪಡೆದಿದ್ದಾರೆ. ಇಂದು ಬೆಳಿಗ್ಗೆಯಿಂದ ಇಲ್ಲಿಯವರೆಗೆ ೧,೨೨,೬೦೦ ಭಕ್ತರು ದರ್ಶನ ಪಡೆದಿದ್ದಾರೆ. ಐದೂವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಿಲಾಗಿತ್ತು. ಮಾರನೇ ದಿನ ಒಂದು ಕಿಲೋ ಮೀಟರ್, ಮೂರನೇ ದಿನ ಮತ್ತೊಂದು ಕಿಲೋಮೀಟರ್ ಜಾಸ್ತಿ ಮಾಡಲಾಗಿದೆ. ಒಟ್ಟು ಏಳೂವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ " ಎಂದರು.
ಸೋಮವಾರ ಒಂದು ಲಕ್ಷದಿಂದ ಒಂದು ಲಕ್ಷದ ಹತ್ತು ಸಾವಿರ ಜನರನ್ನು ನಿರೀಕ್ಷೆ ಮಾಡಲಾಗಿತ್ತು, ಆದರೆ ೨,೨೯,೦೦೦ ಜನ ಬಂದು ದರ್ಶನ ಮಾಡಿದ್ದಾರೆ. ನಾಳೆ ಬೆಳಿಗ್ಗೆ ೫ ಗಂಟೆಯವರೆಗೆ ಒಂದೂವರೆ ಲಕ್ಷ ಜನ ದರ್ಶನ ಮಾಡುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ವಾಡಿಕೆಗಿಂತ ಹೆಚ್ಚು ಜನ ಬಂದಿದ್ದಾರೆ ಎಂದರು.ಸ್ವಚ್ಛತೆ, ಕುಡಿಯುವ ನೀರು, ಪ್ರಸಾದ, ಮಜ್ಜಿಗೆ ವ್ಯವಸ್ಥೆ ಜಿಲ್ಲಾಡಳಿತದಿಂದ ಮಾಡಲಾಗಿದೆ ಎಂದು ತಿಳಿಸಿದರಲ್ಲದೆ, ಜಿಲ್ಲಾಡಳಿತ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದು, ಅರ್ಚಕರನ್ನು ಮನವಿ ಮಾಡಿ ನಿನ್ನೆ ರಾತ್ರಿ ೩ರಿಂದ ಮುಂಜಾನೆ ೫ ಗಂಟೆಯವರೆಗೆ ಗರ್ಭಗುಡಿ ಬಾಗಿಲು ಮುಚ್ಚದೆ ಸಾರ್ವಜನಿಕರಿಗೆ ದರ್ಶನ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.ಜನ ತುಂಬಾ ಸಂತೋಷದಿಂದ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಸ್ಥಳೀಯರು ನಮ್ಮ ದೇವಿ ನಮಗೆ ವಾಪಸ್ ನೀಡಿದ್ದೀರಿ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ರೈತರು, ದುಡಿಯವ ವರ್ಗದವರು ದೇವಿ ದರ್ಶನಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು. "ನಿನ್ನೆ ಮತ್ತು ಇವತ್ತು ಬಂದಿರುವ ಜನರನ್ನು ನೋಡಿದರೆ ಇನ್ನು ಮುಂದೆ ಶೇ.೫೦ಕ್ಕಿಂತ ಅಧಿಕ ಜನ ಬರುವ ಸಾಧ್ಯತೆ ಇದೆ. ಇನ್ನೂ ಎಂಟು ದಿನ ದರ್ಶನಕ್ಕೆ ಬಾಕಿ ಇದೆ ನಾವು ದರ್ಶನ ಕಲ್ಪಿಸಲು ಸಜ್ಜಾಗಿದ್ದೇವೆ " ಎಂದರು.
ಒಂದು ಕೋಟಿ ಹೆಚ್ಚು ಆದಾಯ:ಮಂಗಳವಾರ ಬೆಳಿಗ್ಗೆ ೫ ಗಂಟೆಯವರೆಗೆ ೧೦೦೦ ರು. ಹಾಗೂ ೩೦೦ ರು. ವಿಶೇಷ ದರ್ಶನದ ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ ೪,೨೧,೭೩,೭೬೦ ರುಪಾಯಿ ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ ಒಂದು ಕೋಟಿ ಹೆಚ್ಚು ಆದಾಯ ಬಂದಿದೆ ಎಂದು ತಿಳಿಸಿದರು. ಮಧ್ಯಾಹ್ನಕ್ಕೆ ೧೦೦೦ ರುಪಾಯಿಯ ೩,೬೦೦ ಟಿಕೆಟ್‌ಗಳು ಮಾರಾಟ ಆಗಿದೆ, ೩೦೦ ರುಪಾಯಿಯ ೬೦೦೦ ಟಿಕೆಟ್‌ಗಳು ಮಾರಾಟ ಆಗಿದೆ. ಆದಾಯಕ್ಕಿಂತ ಜನರಿಗೆ ಶೀಘ್ರ ದರ್ಶನ ಮಾಡಿಸುವುದು ನಮಗೆ ಮುಖ್ಯವಾಗಿದೆ ಎಂದರು.
ಈ ವೇಳೆಯಲ್ಲಿ ಸಂಸದರಾದ ಶ್ರೇಯಸ್ ಎಂ.ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಆರ್. ಪೂರ್ಣಿಮಾ, ಉಪವಿಭಾಗಾಧಿಕಾರಿ ಹಾಗೂ ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಮಾರುತಿ ಉಪಸ್ಥಿತರಿದ್ದರು.