ಜೆಎಸ್‌ಡಬ್ಲ್ಯೂ ಲಿಮಿಟೆಡ್ ಸೇರಿದಂತೆ ಇತರ ಗಣಿಗಾರಿಕೆ ಸಂಸ್ಥೆಗಳನ್ನು ಒಳಗೊಂಡ ಐದು ಗಣಿಗಳ ವಿಲೀನ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹಾಗೂ ನಾಲ್ಕು ಪ್ರಮುಖ ಆದೇಶಗಳನ್ನು ಉಲ್ಲಂಘಿಸಲಾಗಿದೆ.
ಹುಬ್ಬಳ್ಳಿ:
ಜೆಎಸ್‌ಡಬ್ಲ್ಯೂ ಲಿಮಿಟೆಡ್ ಸೇರಿದಂತೆ ಇತರ ಗಣಿಗಾರಿಕೆ ಸಂಸ್ಥೆಗಳನ್ನು ಒಳಗೊಂಡ ಐದು ಗಣಿಗಳ ವಿಲೀನ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹಾಗೂ ನಾಲ್ಕು ಪ್ರಮುಖ ಆದೇಶಗಳನ್ನು ಉಲ್ಲಂಘಿಸಲಾಗಿದೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಸಮಾಜ ಪರಿವರ್ತನ ಸಮುದಾಯವು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ ಎಂದು ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರಿಂದ 2024ರ ಅವಧಿಯಲ್ಲಿ 5 ಗಣಿಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಸುಪ್ರೀಂಕೋರ್ಟ್‌ನ ಪ್ರಮುಖ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ರಂಗಪ್ಪ ಎಸ್. ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆಯದೆ ಗಣಿಗಳ ವಿಲೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ದೂರಿದರು.ನ್ಯಾಯಾಲಯದ ಆದೇಶದ ಮೇರೆಗೆ ಸ್ಥಗಿತಗೊಂಡಿದ್ದ ‘ಸಿ’ ವರ್ಗದ ಗುತ್ತಿಗೆ ಪ್ರದೇಶಗಳ ಗಡಿಗಳನ್ನು 2018ರಿಂದ 2024ರ ನಡುವೆ ಮರುನಿಗದಿಪಡಿಸಲಾಗಿದೆ. ಅಲ್ಲದೆ, ಅವಧಿ ಮುಗಿದ ‘ಬಿ’ ವರ್ಗದ ಗುತ್ತಿಗೆಗಳು ಹಾಗೂ ರದ್ದುಗೊಂಡ ‘ಎ-1’ ವರ್ಗದ ಗುತ್ತಿಗೆಯನ್ನೂ ವಿಲೀನ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗಿದೆ ಎಂದು ಹಿರೇಮಠ ಆರೋಪಿಸಿದರು.
ಮೆಸರ್ಸ್ ರಾಮಘಡ್ ಮೈನಿಂಗ್ ಆ್ಯಂಡ್ ಮಿನರಲ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಗುತ್ತಿಗೆ ಹಾಗೂ ದಾಲ್ಮಿಯಾ ಗುತ್ತಿಗೆ ಸಂಖ್ಯೆ 2010 ಅನ್ನು ಸುಪ್ರೀಂಕೋರ್ಟ್ ತನ್ನ ಆದೇಶದ ಮೂಲಕ ರದ್ದುಗೊಳಿಸಿತ್ತು. ಆದಾಗ್ಯೂ, ಒಟ್ಟು 87.90 ಹೆಕ್ಟೇರ್ ಅರಣ್ಯ ಭೂಮಿ ಒಳಗೊಂಡ ಪ್ರದೇಶದಲ್ಲಿ ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ಗಣಿಗಳನ್ನು ವಿಲೀನಗೊಳಿಸಲಾಗಿದೆ ಎಂದು ಹೇಳಿದರು.ಈ ಕುರಿತು ನ್ಯಾಯಾಲಯದ ಮುಂದೆ ದಾಖಲೆ ಸಲ್ಲಿಸಲಾಗಿದ್ದು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಬಕ್ಕಾಯಿ, ಶಮೀಮ್ ಮುಲ್ಲಾ, ಎಂ.ಸಿ. ಹಾವೇರಿ ಸೇರಿ ಹಲವರಿದ್ದರು.