ಸಾರಾಂಶ
ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ ೨೭ನೇ ವರ್ಷದ ಭಜನಾ ತರಬೇತಿ ಕಮ್ಮಟದ ೩ನೇ ದಿನದ ಕಾರ್ಯಾಗಾರದಲ್ಲಿ ‘ಯುವಕರಲ್ಲಿ ಸಂಸ್ಕಾರ ಸಂಸ್ಕೃತಿ ಅರಿವು’ ಕುರಿತು ಉಪನ್ಯಾಸ ನೆರವೇರಿತು.
ಬೆಳ್ತಂಗಡಿ: ಸಂಸ್ಕಾರ ಶಿಶುವಿಗೆ ಗರ್ಭಾಂಕುರದಿಂದ ಆರಂಭವಾಗುತ್ತದೆ ಎಂದು ವಿದ್ವಾಂಸ, ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ ೨೭ನೇ ವರ್ಷದ ಭಜನಾ ತರಬೇತಿ ಕಮ್ಮಟದ ೩ನೇ ದಿನದ ಕಾರ್ಯಾಗಾರದಲ್ಲಿ ‘ಯುವಕರಲ್ಲಿ ಸಂಸ್ಕಾರ ಸಂಸ್ಕೃತಿ ಅರಿವು’ ಕುರಿತು ಅವರು ಉಪನ್ಯಾಸ ನೀಡಿದರು.ಸಂಸ್ಕಾರ ನಾವು ಭೂಸ್ಪರ್ಶವಾಗುವ ಮುನ್ನವೇ ಆರಂಭವಾಗುತ್ತದೆ. ಗರ್ಭದಲ್ಲಿನ ಕಲಿಕೆ ಅಕ್ಷರಾಭ್ಯಾಸದ ಜೊತೆ ಮುಂದುವರಿದು ಕುಟುಂಬ ಸಂಸ್ಕಾರದ ಜೊತೆ ಬೆರೆತು ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗುತ್ತದೆ. ಯೋಗ್ಯತೆ ಬರುವುದೇ ಸಂಸ್ಕಾರದಿಂದ ಎಂದರು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಭಜನಾ ಕಮ್ಮಟಕ್ಕೆ ಭೇಟಿ ನೀಡಿದರು.ಮಾಣಿಲದ ಮೋಹನದಾಸ ಸ್ವಾಮೀಜಿ, ಕಣಿಯೂರಿನ ಮಾರುತಿಪುರದ ರೈತಬಂಧು ಮಾಲಕ ಶಿವಶಂಕರ್ ನಾಯಕ್, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಇದ್ದರು.
ಪೂರ್ಣಿಮಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಖ್ಯಾತ ಗಾಯಕಿ ಬೆಂಗಳೂರಿನ ಅರ್ಚನಾ ಉಡುಪ ಶಿಬಿರಾರ್ಥಿಗಳಿಗೆ ಭಜನೆ ಹಾಡುವ ತರಬೇತಿ ನೀಡಿದರು.