ಕನ್ನಡಪ್ರಭ ವಾರ್ತೆ ಕೋಲಾರಸಂತ ಸರ್ವಜ್ಞ ಸರ್ವವನ್ನು ಅರಿತ ಜ್ಞಾನದ ಮೇರು ಪರ್ವತ. ಎಲ್ಲ ವಿಷಯಗಳ ಜ್ಞಾನ ಹೊಂದಿರುವಂತ ಮೇಧಾವಿಯಾಗಿದ್ದನು. ಯುಗ ಪುರುಷ ಬಸವಣ್ಣನ ನಂತರದಲ್ಲಿರುವ ಹಿರಿಯ ವಚನಗಾರ. ಸಮಾಜಕ್ಕೆ ನೀತಿ ರೀತಿಗಳ ಜೀವನ ಶೈಲಿ ಆಚಾರ ವಿಚಾರ ನಡೆನುಡಿಗಳ ಬಗ್ಗೆ ಮಾರ್ಗದರ್ಶನ ನೀಡಿದಂತ ಮಹಾದರ್ಶನಿಕ ಎಂದು ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ದಿಲೀಪ್ ತಿಳಿಸಿದರು.ನಗರದ ಸುವರ್ಣ ಭವನದಲ್ಲಿ ಸಂತ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವಜ್ಞ ಯವುದೇ ಜಾತಿ, ಮತ, ಧರ್ಮಗಳಿಗೆ ಸೀಮಿತವಾಗಿರಲಿಲ್ಲ. ಮಾನವನ ಬದುಕಿಗೆ ಪೂರಕವಾದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ವಚನಗಳ ಮೂಲಕ ಮಾರ್ಗದರ್ಶನ ನೀಡಿರುವುದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕತೆಯ ಬದುಕು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಸಮುದಾಯದವರ ನಿವೇದನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಜಿಪಂನಿಂದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಅವರು, ಸಮುದಾಯಗಳು ಮಹತ್ವರವಾದ ವಿಷಯಗಳಿಗೆ ಮಾತ್ರ ಹೋರಾಟ ಕೈಗೆತ್ತಿಕೊಳ್ಳಬೇಕು. ಸಮುದಾಯದ ಸಂಘಟನೆಗಳಲ್ಲಿ ಯಾವುದೇ ಭಿನ್ನಭಿಪ್ರಾಯಗಳಿಗೆ ಅವಕಾಶ ಇರಬಾರದು ಎಂದರು. ಗ್ರೀಕ್ ಹಾಗೂ ಯೊರೋಪ್ ರಾಷ್ಟ್ರಗಳ ಸಾಹಿತ್ಯದಲ್ಲೂ ಸರ್ವಜ್ಞರ ಉಲ್ಲೇಖಗಳಿವೆ. ಸರ್ವಜ್ಞರ ವಚನಗಳು ಸಮಾಜದಲ್ಲಿ ನ್ಯಾಯ ನೀತಿ, ಸಮಾನತೆಯಿಂದ ಬಾಳ್ವೆ ನಡೆಸಲು ನೀಡಿರುವಂತ ಆದರ್ಶಪ್ರಿಯವಾಗಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕೆಂದು ಕರೆ ನೀಡಿದರು.ಅಖಿಲ ಭಾರತ ಕುಂಬಾರ ಸಮುದಾಯದ ಯುವ ಅಧ್ಯಕ್ಷ ಡಾ.ನಾಗರಾಜ್ ಮಾತನಾಡಿ, ಸಂತ ಸರ್ವಜ್ಞ ಜಯಂತಿ ಕಳೆದ 2013 ರಿಂದ ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತಿದೆ. ಕುಂಬಾರ ಸಮುದಾಯವು ಅತಿಸೂಕ್ಷ್ಮ ವರ್ಗಕ್ಕೆ ಸೇರಿದ ಸರಳ ಸೌಮ್ಯವಾದ ಗುಂಪಿಗೆ ಸೇರಿದಂತ ಅತಿ ಕಡಿಮೆ ಸಂಖ್ಯೆ ಹೊಂದಿರುವ ಸಮಾಜ 2ಎ ವರ್ಗಕ್ಕೆ ಸೇರಿದೆ. ಆದರೆ ಇದರಲ್ಲಿ 118 ಉಪಜಾತಿಗಳು ಸೇರ್ಪಡೆಯಾಗಿರುವುದರಿಂದ ಕುಂಬಾರ ಸಮುದಾಯವು ಸಾಮಾಜಿಕ ನ್ಯಾಯದಿಂದ ವಂಚಿತಗೊಂಡಿದೆ. ಈ ಸಮುದಾಯ ವಿಶೇಷವಾಗಿ 2ಎ(1) ಎಂದು ನಮೂಧಿಸಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕುಂಬಾರ ಸಮುದಾಯದ ವಿದ್ಯಾರ್ಥಿ ನಿಲಯದ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿ, ನಗರದ ಸರ್ವಜ್ಞ ಉದ್ಯಾನವನದಲ್ಲಿನ ಸರ್ವಜ್ಞ ಪುತ್ಥಳಿಕೆಯ ಮೇಲ್ಛಾವಣಿ ಹಾಳದ ನಂತರ ಹೊಸದಾಗಿ ಆಳವಡಿಸಿಲ್ಲ. ನಗರಸಭೆಗೆ ಮನವಿ ಮಾಡಿದ್ದೇವೆ. ಟೆಂಡರ್ ಕರೆದು ಮಾಡಿಸುವುದಾಗಿ ಪೌರಾಯುಕ್ತರು ಅಶ್ವಾಸನೆ ನೀಡಿದ್ದಾರೆ, ಆದರೆ ಈವರೆಗೆ ಏನೊಂದು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪನ್ಯಾಸಕಿ ವರಲಕ್ಷ್ಮೀ ಉಪನ್ಯಾಸ ನೀಡಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮೀ ಸ್ವಾಗತಿಸಿ, ಡಾ.ನಾಗರಾಜ್ ವಂದಿಸಿದರು. ವೇದಿಕೆಯಲ್ಲಿ ಸಮುದಾಯದ ಮುಖಂಡ ರೆಡ್ಡಪ್ಪ, ಜಿಲ್ಲಾಧ್ಯಕ್ಷ ಕಲ್ಲಂಡೂರು ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ನಾಗೇಶ್, ಗೌಡನಹಳ್ಳಿ ಶ್ರೀನಿವಾಸ್, ಈರಣ್ಣ ಸರೋಜ ಶ್ರೀನಿವಾಸ್, ನಂದೀಶ್, ಶಿವಪ್ರಸಾದ್, ರಾಜಣ್ಣ ಇದ್ದರು.