ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಸರ್ಕಾರದ ಕನ್ನಡ ಕಡ್ಡಾಯ ನೀತಿ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಮ್ಮಿಕೊಂಡಿದ್ದ ಪ್ರತಿಭಟನಾ ರ್‍ಯಾಲಿಗೆ ನಗರ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದರೂ, ಎಂಇಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮತ್ತೊಮ್ಮೆ ಭಾಷಾ ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ.

ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಲು ಎಂಇಎಸ್ ಕಾರ್ಯಕರ್ತರು ಸಿದ್ಧತೆ ನಡೆಸಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಅನುಮತಿ ಕೋರಲಾಗಿತ್ತು. ಆದರೆ, ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತರು ರ್‍ಯಾಲಿಗೆ ಅನುಮತಿ ನಿರಾಕರಿಸಿದ್ದರು. ಆದರೂ, ನೂರಾರು ಎಂಇಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ಕನ್ನಡ ಕಡ್ಡಾಯ ಆದೇಶವನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಪೊಲೀಸರ ಸಮ್ಮುಖದಲ್ಲೇ ಸರ್ಕಾರದ ಆದೇಶದ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರು ಕನ್ನಡ ಕಡ್ಡಾಯ ನೀತಿ ಹಿಂಪಡೆಯಬೇಕೆಂದು ಆಗ್ರಹಿಸಿ, ಮರಾಠಿ ಭಾಷೆಯಲ್ಲಿ ನಾಮಫಲಕಗಳು, ಅರ್ಜಿಗಳು, ಪ್ರಮಾಣಪತ್ರಗಳು ಹಾಗೂ ಇತರ ಸರ್ಕಾರಿ ದಾಖಲೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಬೆಳಗಾವಿ, ನಿಪ್ಪಾಣಿ, ಖಾನಾಪುರ, ಭಾಲ್ಕಿ, ಬೀದರ, ಕಾರವಾರ ಸೇರಿದಂತೆ ಗಡಿಭಾಗದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.ಎಂಇಎಸ್‌ ಮುಖಂಡರು ಮಾತನಾಡಿ, ನಾವು ಕೂಡ ಭಾರತೀಯರೇ ಹೊರತು ಬೇರೆ ದೇಶದವರಲ್ಲ. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತನ್ನ ಮಾತೃಭಾಷೆಯನ್ನು ಬಳಸುವ ಹಕ್ಕನ್ನು ನೀಡಿದೆ. ಗಡಿ ಭಾಗದ ಮರಾಠಿ ಭಾಷಿಕರ ಹಕ್ಕುಗಳನ್ನು ಗೌರವಿಸಬೇಕು ಎಂದು ಆಗ್ರಹಿಸಿದರು.ಬೆಳಗಾವಿ ಸೇರಿದಂತೆ ಗಡಿ ಭಾಗದ ಮರಾಠಿ ಭಾಷಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಮರಾಠಿ ಭಾಷೆಯಲ್ಲಿ ಅರ್ಜಿ, ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸಬೇಕು. ಸಾರ್ವಜನಿಕ ನಾಮಫಲಕಗಳು ಹಾಗೂ ಆಡಳಿತಾತ್ಮಕ ವ್ಯವಹಾರಗಳಲ್ಲಿ ಮರಾಠಿ ಭಾಷೆಗೆ ಸೂಕ್ತ ಸ್ಥಾನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.ರಾಜ್ಯ ಸರ್ಕಾರವು ಕನ್ನಡ ಕಡ್ಡಾಯ ಜಾರಿಗೊಳಿಸುವ ಸಂದರ್ಭದಲ್ಲಿ ಗಡಿ ಭಾಗದ ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳನ್ನೂ ಪರಿಗಣಿಸಬೇಕು. ಸಂವಿಧಾನ ಮತ್ತು ಕಾನೂನು ವ್ಯಾಪ್ತಿಯಲ್ಲಿ ನಮ್ಮ ಭಾಷಾ ಹಕ್ಕುಗಳನ್ನು ಸಂರಕ್ಷಿಸಬೇಕು ಎಂದು ಎಂಇಎಸ್ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅನುಮತಿ ನಿರಾಕರಿಸಿದ ಬಳಿಕವೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದಿರುವುದು ಹಾಗೂ ಸರ್ಕಾರದ ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಹರಿದು ಹಾಕಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮತ್ತು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮನೋಹರ ಕಿಣೇಕರ, ದಿಗಂಬರ ಪಾಟೀಲ, ನಾಗೇಶ ಸಾತೇರಿ, ಆರ್‌.ಎಂ. ಚೌಗಲೆ, ರೇಣು ಕಿಲ್ಲೇಕರ ಮೊದಲಾದವರು ಉಪಸ್ಥಿತರಿದ್ದರು.