ಉಜಿರೆಯ ಸಮೀಪದ ನಿನ್ನಿ ಕಲ್ಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ 110 ಕೆವಿ ವಿದ್ಯುತ್ ಸಬ್‌ ಸ್ಟೇಷನ್ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಬುಧವಾರ ನಡೆದ ಉಜಿರೆ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಚರ್ಚೆ ನಡೆಯಿತು.

ಬೆಳ್ತಂಗಡಿ: ಉಜಿರೆಯ ಸಮೀಪದ ನಿನ್ನಿ ಕಲ್ಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ 110 ಕೆವಿ ವಿದ್ಯುತ್ ಸಬ್‌ ಸ್ಟೇಷನ್ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಬುಧವಾರ ನಡೆದ ಉಜಿರೆ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಚರ್ಚೆ ನಡೆಯಿತು.ಬಂಟ್ವಾಳ ಸಂತೋಷ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಬ್‌ ಸ್ಟೇಷನ್ ಕಾಮಗಾರಿಯ ಪ್ರಗತಿ ಹಾಗೂ ವಿಳಂಬಕ್ಕೆ ಕಾರಣಗಳ ಕುರಿತು ಗ್ರಾಹಕರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈಗಾಗಲೇ ಸಬ್‌ ಸ್ಟೇಷನ್‌ ಗೆ ಸಂಬಂಧಿಸಿದಂತೆ ಟವರ್‌ಗಳು ಹಾಗೂ ವಿದ್ಯುತ್ ಕಂಬಗಳನ್ನು ಸ್ಥಾಪಿಸುವ ಬಹುತೇಕ ಕೆಲಸ ಪೂರ್ಣಗೊಂಡಿದೆ. ಆದರೆ ವಿದ್ಯುತ್ ತಂತಿ ಎಳೆಯುವ ಹಾಗೂ ಸಬ್‌ಸ್ಟೇಷನ್‌ನ ಉಳಿದ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ದೊರೆಯದಿರುವುದರಿಂದ ಕಾಮಗಾರಿ ಮುಂದುವರಿಸಲು ತೊಡಕು ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.ಸಬ್‌ ಸ್ಟೇಷನ್ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದ ವಿದ್ಯುತ್ ಪೂರೈಕೆಯ ಗುಣಮಟ್ಟ ಹಾಗೂ ಸ್ಥಿರತೆ ಸುಧಾರಿಸುವ ನಿರೀಕ್ಷೆಯಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಅರಣ್ಯ ಇಲಾಖೆಯ ಅನುಮತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಕಿ ಇರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಬೆಳಾಲಿನ ಮಾಯಾ ಕ್ರಾಸ್ ಸಮೀಪ 110 ಕೆವಿ ವಿದ್ಯುತ್ ಸಬ್‌ ಸ್ಟೇಷನ್ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸರ್ವೆ ಕಾರ್ಯ ಆರಂಭಿಸಲಾಗುವುದು ಎಂದು ಸಭೆಯ ಗಮನಕ್ಕೆ ತರಲಾಯಿತು. ಸರ್ವೆ ಪೂರ್ಣಗೊಂಡ ಬಳಿಕ ಯೋಜನೆಯ ಮುಂದಿನ ಹಂತದ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರುಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಂಪಿಂಗ್ ಯಾರ್ಡ್ ಸಮೀಪ 33 ಕೆವಿ ಸಬ್‌ ಸ್ಟೇಷನ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದ ಜಾಗ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದರಿಂದ ಆ ಜಾಗದಲ್ಲಿ ಯೋಜನೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಪರ್ಯಾಯ ಜಾಗವನ್ನು ಗುರುತಿಸಲಾಗಿದೆ. ಆದರೆ ಪರ್ಯಾಯ ಜಾಗ ಇನ್ನೂ ಮೆಸ್ಕಾಂ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರವಾಗಿಲ್ಲ. ಜಾಗ ಹಸ್ತಾಂತರ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ವಿದ್ಯುತ್ ತಂತಿ ಬದಲಾವಣೆ, ವಿದ್ಯುತ್ ಕಡಿತ, ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ ಸೇರಿದಂತೆ ಸ್ಥಳೀಯ ಗ್ರಾಹಕರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಗ್ರಾಹಕರ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು, ಸಾಧ್ಯವಾದಷ್ಟು ಶೀಘ್ರವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.ಉಜಿರೆ ಮೆಸ್ಕಾಂ ಉಪವಿಭಾಗದ ಎಇಇ ಮೋಹನ್ ಸ್ವಾಗತಿಸಿದರು. ಬೆಳ್ತಂಗಡಿ ಮೆಸ್ಕಾಂ ಉಪವಿಭಾಗದ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ವಂದಿಸಿದರು.