ಸುಳ್ಯ: ಮೆಸ್ಕಾಂ ಸಲಹಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡದೇ ಹಾಗೂ ಜನಸಂಪರ್ಕ ಸಭೆಯ ಪ್ರಚಾರ ನಡೆಸದೇ ಸಭೆ ನಡೆಸಿರುವುದಕ್ಕೆ ಗ್ಯಾರಂಟಿ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ನೇತೃತ್ವದಲ್ಲಿ ಧರಣಿ ನಡೆಸಿ, ಸಭೆ ಮುಂದೂಡಲು ಆಗ್ರಹಿಸಿದ ಪರಿಣಾಮ ಅಧಿಕಾರಿಗಳು ಸಭೆಯನ್ನು ಮುಂದೂಡಿದ ಘಟನೆ ಮಂಗಳವಾರ ನಡೆದಿದೆ.ಸುಳ್ಯ ಹಾಗೂ ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದ ಸಭೆಯನ್ನು ಸುಳ್ಯ ತಾಲೂಕು ಪಂಚಾಯಿತಿನಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ಪುತ್ತೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಸಫಲ್ಯ, ಸುಳ್ಯ ಸಹಾಯಕ ಇಂಜಿನಿಯರ್ ಸುಪ್ರೀತ್ ವೇದಿಕೆಯಲ್ಲಿದ್ದರು. ಸಭೆ ಆರಂಭದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕಾರಕ್ಕೆ ಅಧಿಕಾರಿಗಳು ತಯಾರಾಗುತ್ತಿದ್ದಂತೆ ಸಭೆಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ನೇತೃತ್ವದಲ್ಲಿ, ದಿನೇಶ್ ಸರಸ್ವತಿ ಮಹಲ್, ಧರ್ಮಪಾಲ ಕೊಯಿಂಗಾಜೆ, ರಾಧಾಕೃಷ್ಣ ಪರಿವಾರಕಾನ, ಸತ್ಯಕುಮಾರ್ ಆಡಿಂಜ, ಆರ್.ಬಿ. ಬಶೀರ್, ಜುನೈದ್ ಅಡ್ಕಾರ್ ಮೊದಲಾದವರು ಬಂದು ಸಭೆಯ ಮಾಹಿತಿ ನೀಡದೇ ಸಭೆ ನಡೆಸುತ್ತಿರುವ ಕುರಿತು ಪ್ರಸ್ತಾಪಿಸಿದರು. ಸಭೆಯ ಮಾಹಿತಿ ನೀಡಿಲ್ಲ. ಪ್ರಚಾರವೂ ನಡೆಸಿಲ್ಲ. ಜನರಿಲ್ಲದೇ ಜನ ಸಂಪರ್ಕ ಸಭೆ ಮಾಡುವ ಉದ್ದೇಶ ಏನು ಎಂದು ಶಾಹುಲ್ ಹಮೀದ್ ಪ್ರಶ್ನಿಸಿದರೆ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಿಗೆ ಯಾಕೆ ತಿಳಿಸಿಲ್ಲ. ವರ್ಷದಲ್ಲಿ ಒಂದೂ ಸಭೆಯಲ್ಲಿ ನಡೆಸಿಲ್ಲ ಯಾಕೆ ? ಎಂದು ದಿನೇಶ್, ಸತ್ಯಕುಮಾರ್, ರಾಧಾಕೃಷ್ಣ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದರು.
ಆಗ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಸುಳ್ಯ ಮೆಸ್ಕಾಂ ಇಂಜಿನಿಯರ್ ರನ್ನು ಮಾಹಿತಿ ನೀಡದೇ ಇರುವ ಕುರಿತು ಪ್ರಶ್ನಿಸಿದಾಗ, ಸುಪ್ರೀತ್ ಉತ್ತರಿಸಲಿಲ್ಲ. ಈ ವೇಳೆ ಸಭೆಯ ಎದುರು ನೆಲದಲ್ಲಿ ಧರಣಿ ಕುಳಿತವರು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಸತ್ಯಕುಮಾರ್ ಆಡಿಂಜರು, "ಜನರು ನಮಗೆ ವಿದ್ಯುತ್ ಸಮಸ್ಯೆ ಹೇಳಿದಾಗ ನಾವು ಇಂಜಿನಿಯರ್ ರಿಗೆ ಫೋನ್ ಮಾಡಿದರೆ ಅವರು ಸ್ವೀಕರಿಸುವುದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೀಗೆ ಒಬ್ಬೊಬ್ಬರು ಅಸಮಾಧಾನ ವ್ಯಕ್ತಪಡಿಸಿದಾಗ, ಶಾಹುಲ್ ಹಮೀದ್ ರವರು ಸಭೆ ಮುಂದೂಡುವಂತೆ ಸಲಹೆ ನೀಡಿದರು.ರಾಧಾಕೃಷ್ಣ ಬೊಳ್ಳೂರು ಮಾತನಾಡಿ, " ಸುಳ್ಯದ ಸಮಸ್ಯೆ ಬಹಳಷ್ಟಿದೆ.ಅದನ್ನು ಸರಿಪಡಿಸಬೇಕು. ಜನರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು " ಎಂದು ಹೇಳಿದರು.
ಜಿ.ಕೆ. ಹಮೀದ್ ಮಾತನಾಡಿ, ಸಲಹಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡದೇ ಇದ್ದುದು ಅಧಿಕಾರಿಗಳದ್ದು ತಪ್ಪು. ಹಾಗಂತ ಇಂದು ಒಂದಷ್ಟು ಸಾರ್ವಜನಿಕರು ಬಂದಿದ್ದಾರೆ. ಅವರ ಮನವಿ ಸ್ವೀಕರಿಸಿ. ಮುಂದೆ ಯಾವ ದಿನ ಸಭೆ ನಡೆಸುವುದೆಂದು ಇಂದೇ ನಿರ್ಧಾರ ಮಾಡಿ " ಎಂದು ಹೇಳಿದರು. ಕೆಲ ಹೊತ್ತು ಸಮಾಲೋಚನೆ ನಡೆಸಿ, ಮೇ.12 ರೊಳಗೆ ಮೆಸ್ಕಾಂ ಸಲಹಾ ಸಮಿತಿ ಸದಸ್ಯರ ಸಭೆ ನಡೆಸಲಾಗುವುದು. ಮೇ 3 ನೇ ವಾರದಲ್ಲಿ ಸುಳ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಜನ ಸಂಪರ್ಕ ಸಭೆ ನಡೆಸುತ್ತೇವೆ ಎಂದು ಇಂಜಿನಿಯರ್ ಕೃಷ್ಣರಾಜ್ ಹೇಳಿದರು. ಅದಕ್ಕೆ ಎಲ್ಲರೂ ಒಪ್ಪಿದರು. ಬಳಿಕ ಸಭೆ ಮುಂದೂಡಲಾಯಿತು.ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಿದರು.
