ಮಂಗಳೂರು: ಮೆಸ್ಕಾಂನ ಎನ್‌ಸಾಫ್ಟ್‌ ತಂತ್ರಾಂಶ ಲೋಪದಿಂದ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಸಂಕಷ್ಟದಲ್ಲಿದ್ದು, ಸಮಸ್ಯೆ ಇತ್ಯರ್ಥಗೊಳ್ಳದಿದ್ದಲ್ಲಿ ಮೆಸ್ಕಾಂ ಕಚೇರಿ ಚಲೋ ನಡೆಸಲಾಗುವುದು ಎಂದು ಗುತ್ತಿಗೆದಾರರು ಎಚ್ಚರಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಕುಶಾಲ್ ಪೂಜಾರಿ, ಮೆಸ್ಕಾಂನ ಸರ್ವರ್ ಹಾಗೂ ಎನ್‌ ಸಾಫ್ಟ್‌ ತಂತ್ರಾಂಶ ಹದಗೆಟ್ಟಿದ್ದರೂ ಸರಿಪಡಿಸಿಲ್ಲ, ಪರಿಣಾಮ ಹೊಸದಾಗಿ ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿರುವ ಗ್ರಾಹಕರು, ಜನಸಾಮಾನ್ಯರು ಹಾಗು ವಿದ್ಯುತ್ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಮಸ್ಯೆ ಕೂಡಲೇ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.

ದ.ಕ. ಜಿಲ್ಲೆಯ ಜನತೆ ಕಷ್ಟಪಟ್ಟು ಹೊಸ ಮನೆಯನ್ನು ನಿರ್ಮಿಸಿದ್ದು, ಇನ್ನೇನು ಆ ಮನೆಯಲ್ಲಿ ವಾಸಿಸಲು ಗೃಹಪ್ರವೇಶಕ್ಕೆ ದಿನಾಂಕ ನಿಗದಿಪಡಿಸಬೇಕಾದರೆ, ಆ ಹೊಸ ಮನೆಗೆ ವಿದ್ಯುತ್ ಸಂಪರ್ಕ ಇನ್ನೂ ಸಿಗುತ್ತಿಲ್ಲ. ಹೀಗೆ ಸಾವಿರಾರು ಹೊಸ ಮನೆಗಳು ವಿದ್ಯುತ್ ಸಂಪರ್ಕವಿಲ್ಲದೆ ಕಷ್ಟಪಡುತ್ತಿದೆ. ಜೊತೆಗೆ ಗ್ರಾಹಕರು ಮಾನಸಿಕವಾಗಿ ನೊಂದಿದ್ದಾರೆ. ಈ ಹೊಸ ಮನೆಗಳ ವಿದ್ಯುತ್ ಜೋಡಣೆಗೆ ಸಂಬಂಧಿಸಿ ಸಂಪೂರ್ಣ ಕೆಲಸಗಳನ್ನು ವಿದ್ಯುತ್ ಗುತ್ತಿಗೆದಾರರು ತಮ್ಮ ಕೈಯಿಂದಲೇ ಹಣ ಹಾಕಿ ಕೆಲಸಗಳನ್ನು ಪೂರ್ಣಗೊಳಿಸಿರುತ್ತಾರೆ. ಆದರೆ ವಿದ್ಯುತ್ ಸಂಪರ್ಕ ಅಗದೆ ಗ್ರಾಹಕರು ವಿದ್ಯುತ್ ಗುತ್ತಿಗೆದಾರರಿಗೆ ನೀಡಬೇಕಾದ ಹಣವನ್ನು ತಡೆಹಿಡಿದಿರುತ್ತಾರೆ ಎಂದರು.ಇದರಿಂದಾಗಿ ನೂರಾರು ಸಂಖ್ಯೆಯಲ್ಲಿರುವ ಗುತ್ತಿಗೆದಾರರಿಗೆ ಲಕ್ಷಾಂತರ ರು. ಬಾಕಿಯಿಂದಾಗಿ ಬದುಕು ತೀವ್ರ ಸಂಕಷ್ಟದಲ್ಲಿದೆ. ವಾರದೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ದ.ಕ. ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರು, ರೈತ ಕಾರ್ಮಿಕರು, ವಿದ್ಯಾರ್ಥಿ ಯುವ ಜನರು, ಮಹಿಳೆಯರು, ದಲಿತ, ಅದಿವಾಸಿ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಶಕ್ತಿಗಳ ಜೊತೆಗೂಡಿ ಮೆಸ್ಕಾಂ ಕಚೇರಿ ಚಲೋದಂತಹ ಬೃಹತ್ ಹೋರಾಟ ಸಂಘಟಿಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.ಪತ್ರಿಕಾಗೋಷ್ಠಿಯಯಲ್ಲಿ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಪ್ರಮುಖರಾದ ಉರ್ಬನ್ ಪಿಂಟೋ, ಕೆ.ಯಾದವ ಶೆಟ್ಟಿ, ಪುರುಷೋತ್ತಮ್, ಯೂಸುಫ್ ಇದ್ದರು.