ಹಳೆ ಕೆಇಬಿ ಕಟ್ಟಡಕ್ಕೆ ಕಾಯಕಲ್ಪ ನೀಡಿದ ಮೆಸ್ಕಾಂ ಅಧಿಕಾರಿಗಳು

| Published : Oct 19 2025, 01:00 AM IST

ಹಳೆ ಕೆಇಬಿ ಕಟ್ಟಡಕ್ಕೆ ಕಾಯಕಲ್ಪ ನೀಡಿದ ಮೆಸ್ಕಾಂ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಓಲ್ಡ್ ಈಸ್ ಗೋಲ್ಡ್‌ ಎನ್ನುವ ಆಂಗ್ಲೋಕ್ತಿಯಂತೆ ಹಳೆಯದೆಂದು ಮೂಗು ಮುರಿಯದೆ ಅಳಿವಿನಂಚಿಗೆ ಸರಿಯಬೇಕಿದ್ದ ಕಟ್ಟಡಕ್ಕೆ ಕಾಯಕಲ್ಪ ನೀಡಿದ ಫಲವಾಗಿ ಪಟ್ಟಣದ ಕೆಇಬಿ ಹಳೆ ಕಟ್ಟಡ ಜೀವಕಳೆಯೊಂದಿಗೆ ಮತ್ತೆ ಕಾರ್ಯನಿರ್ವಹಿಸಲು ಸಜ್ಜಾಗಿದೆ.

- ತರೀಕೆರೆ ಹಳೇ ಕೆಇಬಿ ಕಚೇರಿ ಕಟ್ಟಡ ಈಗ ಫಳ ಫಳ ।ವಿಶಾಲವಾದ ಕಚೇರಿ ಹೊಸ ನೆಲ ಹಾಸಿಗೆ ಹೊಸ ಮೇಲ್ಛಾವಣಿ

ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ, ತರೀಕೆರೆ

ಓಲ್ಡ್ ಈಸ್ ಗೋಲ್ಡ್‌ ಎನ್ನುವ ಆಂಗ್ಲೋಕ್ತಿಯಂತೆ ಹಳೆಯದೆಂದು ಮೂಗು ಮುರಿಯದೆ ಅಳಿವಿನಂಚಿಗೆ ಸರಿಯಬೇಕಿದ್ದ ಕಟ್ಟಡಕ್ಕೆ ಕಾಯಕಲ್ಪ ನೀಡಿದ ಫಲವಾಗಿ ಪಟ್ಟಣದ ಕೆಇಬಿ ಹಳೆ ಕಟ್ಟಡ ಜೀವಕಳೆಯೊಂದಿಗೆ ಮತ್ತೆ ಕಾರ್ಯನಿರ್ವಹಿಸಲು ಸಜ್ಜಾಗಿದೆ.

ಸುಮಾರು 85 ವರ್ಷಗಳಷ್ಟು ಹಿಂದಿನ ಹಳೆಯ ತರೀಕೆರೆ ಪಟ್ಟಣದ ಕೆಇಬಿ ಕಟ್ಟಡವನ್ನು ಸಂರಕ್ಷಿಸುವ ಜತೆಗೆ ಮರುಬಳಕೆಗೆ ಯೋಗ್ಯವಾಗಿಸಲು ಜೀರ್ಣೋದ್ದಾರ ಮಾಡಿಸಿ ಸಿದ್ಧಗೊಳಿಸಿರುವ ಉಪ ವಿಭಾಗದ ಮೆಸ್ಕಾಂ ಅಧಿಕಾರಿಗಳ ಈ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ತರೀಕೆರೆ ಪಟ್ಟಣದಲ್ಲಿ ಸುಮಾರು 1940ರಲ್ಲಿ ಅಂದರೆ 85 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ (ಎಂಎಸ್.ಇಬಿ) ಈ ಹಿಂದಿನ ಕೆಇಬಿ ಕಟ್ಟಡ ಶಿಥಲವಾಗಿದ್ದ ಹಿನ್ನೆಲೆಯಲ್ಲಿ ವಿಶಾಲವಾದ ಕೆಇಬಿ ಆವರಣದಲ್ಲಿ ಆಧುನಿಕತೆಗೆ ಅಗತ್ಯಕ್ಕೆ ತಕ್ಕಂತೆ ನೂತನ ಕಚೇರಿ ಕಟ್ಟಡ ನಿರ್ಮಾಣಮಾಡಿ 2017ರಲ್ಲಿ ಅಲ್ಲಿಗೆ ಸ್ಥಳಾಂತರ ಗೊಳಿಸಲಾಗಿತ್ತು.

ಅಂದಿನಿಂದ ಹಳೇ ಕಟ್ಟಡದಲ್ಲಿ ಕೆಲಸ ಕಾರ್ಯ ಸ್ಥಗಿತಗೊಂಡಿತ್ತಾದರೂ ಹಾಗೆಯೇ ಅದನ್ನು ಉಳಿಸಿಕೊಳ್ಳಲಾಗಿತ್ತು. 2020ರಲ್ಲಿ ತರೀಕೆರೆಗೆ ಕೆಇಬಿಯ ಎರಡು ಗ್ರಾಮೀಣ ಶಾಖೆಗಳು ಮಂಜೂರಾದಾಗ ಅದರ ಕಚೇರಿಗಾಗಿ ಬೇರೆ ಕಟ್ಟಡದ ಮೊರೆಹೋಗದೆ ಸ್ಥಗಿತವಾಗಿದ್ದ ಹಳೆಯ ಕಟ್ಟಡದ ಮರುಬಳಕೆ ಚಿಂತನೆಯೊಂದಿಗೆ ಮೆಸ್ಕಾಂ ಅಧಿಕಾರಿಗಳು (ಸಿವಿಲ್ ವಿಭಾಗ) ಇಟ್ಟ ಹೆಜ್ಜೆ ಇದೀಗ ಸಂಪೂರ್ಣವಾಗಿ ದರಸ್ತಿಗೊಂಡು ನೂತನ ಕಚೇರಿಗೆ ಸೆಡ್ಡು ಹೊಡೆಯುವಂತೆ ಸಿದ್ದಗೊಂಡಿದೆ.

ದುರಸ್ತಿಗೊಂಡ ಈ ಕಟ್ಟಡದಲ್ಲಿ ಕಚೇರಿಯಲ್ಲಿ ಅಂದುಕೊಂಡಂತೆ ಕೆಲಸ ಕಾರ್ಯಗಳನ್ನು ಆರಂಭಿಸಿ ಪುನಃ ಆ ಕಟ್ಟಡದತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಹೊಸದು ಬಂದಾಗ ಹಳೆಯದನ್ನು ಮರೆಯುವುದು ಸಹಜ. ಆದರೆ ಇಲಾಖೆ ಹಳೆಯದಕ್ಕೂ ಪ್ರಾಧಾನ್ಯತೆ ನೀಡಿ ಕಟ್ಟಡವನ್ನು ದುರಸ್ತಿಪಡಿಸಿ ಈ ಹಿಂದಿನಂತೆ ಆ ಕಟ್ಟಡದ ಸಾಂಪ್ರದಾಯಿಕ ಹೊರ ನೋಟಕ್ಕೆ ಧಕ್ಕೆ ಬಾರದಂತೆ ಮೆಸ್ಕಾಂ ಕಚೇರಿಯನ್ನು ಸುಸಜ್ಜಿತಗೊಳಿಸಲಾಗಿದೆ.

ಮೆಸ್ಕಾಂ ಕಚೇರಿ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಇದೀಗ ನವೀಕರಣಗೊಂಡಿರುವ ಹಳೆಯ ಮೆಸ್ಕಾಂ ಕಚೇರಿ ಕಟ್ಟಡವೂ ಆಕರ್ಷಣೀಯವಾಗಿ ಕಾಣುತ್ತದೆ.

ಐದು ಲಕ್ಷದಲ್ಲಿ ನವೀಕರಣಃ

ಹಳೆ ಕೆಇಬಿ ಶುದ್ಧ ಗಾಳಿ, ಉತ್ತಮ ಬೆಳಕಿನ ವ್ಯವಸ್ಥೆ ಇರುವ ಸುಮಾರು 6 ವಿಶಾಲವಾದ ಕೊಠಡಿಗಳ ಕಟ್ಟಡ. ಸಹಾಯಕ ಎಂಜಿನಿಯರ್ , ಸೆಕ್ಷನ್ ಆಫೀಸರ್, ವಿದ್ಯುತ್ ಪರಿಕರಗಳ ಸಂಗ್ರಹಣಾ ಕೊಠಡಿ, ಗ್ರಾಹಕರ ನಿರೀಕ್ಷಣಾ ಪ್ರಾಂಗಣದ ಜೊತೆಗೆ ವಿದ್ಯುತ್ ಬಿಲ್ ಪಾವತಿಸುವ ಕಚೇರಿ ಎಲ್ಲವನ್ನು ಒಳಗೊಂಡಿದ್ದ ಕಟ್ಟಡಕ್ಕೆ ನೆಲದಿಂದ ಹಿಡಿದು ಮಂಗಳೂರು ಹಂಚಿನ ಮೆಲ್ಛಾವಣಿ ತನಕ ಎಲ್ಲವನ್ನು ಹೊಸದಾಗಿ ಅಳವಡಿಸಿ ಕಚೇರಿ ಎಲ್ಲ ವಿಶಾಲವಾದ ಎತ್ತರದ ಗೋಡೆಳು, ಬಾಗಿಲು, ಕಿಟಕಿಗಳಿಗೆ ಅದಕ್ಕೊಪ್ಪುವ ಸುಣ್ಣ ಬಣ್ಣವನ್ನು ಅಷ್ಟೆ ಮುತುವರ್ಜಿಯಿಂದ ಮಾಡಿಸಿರುವುದರಿಂದ ಇಡೀ ಕಟ್ಟಡ ಈ ಆವರಣದಲ್ಲಿ ಕಂಗೊಳಿಸುತ್ತಿದೆ. ಆಂದಾಜು ₹5 ಲಕ್ಷ ಗಳಲ್ಲಿ ಉತ್ತಮ ಗುಣಮಟ್ಟದಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲಾಗಿದೆ.

-- ಕೋಟ್--

ಸುತ್ತ ಗಿಡ ಗಂಟೆಗಳು ಬೆಳೆದು ಹಾಳಾಗುವ ಪರಿಸ್ಥಿತಿಯಲ್ಲಿದ್ದ ಕಟ್ಟಡ ಹಳೆಯದಾಗಿದ್ದರೂ ಅದರ ವಿನ್ಯಾಸ ಬಹಳ ಸುಂದರವಾಗಿದೆ. ಅದು ಹಾಳಾಗದಂತೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಈ ಕಟ್ಟಡ ಹಿಂದಿನ ಗತವೈಭವದಿಂದ ಮತ್ತೆ ವಿಜೃಂಭಿಸಬೇಕು. ಇಡೀ ಕಟ್ಟಡ ಸುಸ್ಥಿತಿಯಲ್ಲಿ ಮರು ಬಳಕೆಯಾಗಬೇಕು ಎಂಬ ಆಶಯದಿಂದ ಇಲಾಖೆ ಉನ್ನತಾಧಿ ಕಾರಿಗಳ ಪೂರ್ವಾನುಮತಿ ಪಡೆದು ಅಂದಾಜು ₹5 ಲಕ್ಷ ಗಳಲ್ಲಿ ಕಟ್ಟಡ ನವೀಕರಿಸಲಾಗಿದೆ. ಮತ್ತೆ ಇಲಾಖೆ ಕೆಲಸ ಕಾರ್ಯಗಳಿಗೆ ಉಪಯೋಗಿಸುವಂತಾಗಿದ್ದು ಎಲ್ಲರಿಗೂ ಸಂತೋಷ ತಂದಿದೆ.

- ಎಚ್.ಎಸ್.ಮಲ್ಲೇಶಪ್ಪ

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಸಿವಿಲ್ಉಪ ವಿಭಾಗದ , ಮೆಸ್ಕಾಂ, ಚಿಕ್ಕಮಗಳೂರು

ಕೋಟ್ಃ

ಹಳೇ ಕಟ್ಟಡದ ಉತ್ತಮ ವಿನ್ಯಾಸಕ್ಕೆ ಮತ್ತೆ ಜೀವ ತಂದಿರುವುದರಿಂದ ಅದರ ಸೌಂದರ್ಯ ಇಮ್ಮಡಿಸಿದೆ. ಕಟ್ಟಡ ಗಟ್ಟಿ ಮುಟ್ಟಾಗಿದ್ದು ಕಟ್ಟಡದ ಮರು ಬಳಕೆಗೆ ಸೂಕ್ತವಾದ ರೀತಿಯಲ್ಲಿ ಸಿದ್ಧವಾಗಿದೆ. ಇದೀಗ ಇಲಾಖೆ ಶಾಖಾ ಕಚೇರಿ ಇದರಲ್ಲಿ ಕಾರ್ಯನಿರ್ವಹಿಸಲಿದ್ದು ಅದಕ್ಕೆ ವಿಶಾಲ ವಾಗಿದೆ.

- ಮಂಜುನಾಥ್. ಎಲ್

ಕಾರ್ಯ-ಪಾಲನ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್

ಮೆಸ್ಕಾಂ, ತರೀಕೆರೆ 18ಕೆಟಿಆರ್.ಕೆ.1ಃ

ನವೀಕರಣಗೊಂಡಿರುವ ತರೀಕೆರೆ ಮೆಸ್ಕಾಂ ಕಚೇರಿ16ಕೆಟಿಆರ್.ಕೆ.2ಃ

ಮೆಸ್ಕಾಂ.ಚಿಕ್ಕಮಗಳೂರು ಸಿವಿಲ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಎಸ್.ಮಲ್ಲೇಶಪ್ಪ18ಕೆಟಿಆರ್.ಕೆ.3ಃ

ತರೀಕೆರೆ ಮೆಸ್ಕಾಂ ಕಾರ್ಯ ಮತ್ತು ಪಾಲನ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮಂಜುನಾಥ್ ಎಲ್