ಕನ್ನಡಪ್ರಭ ವಾರ್ತೆ ಸಕಲೇಶಪುರ
ವಿದ್ಯಾರ್ಥಿಗಳು ಸಾಹಿತ್ಯ, ಶಿಕ್ಷಣ ಹಾಗೂ ಸೃಜನಶೀಲ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಪ್ರೀತಿ ಮತ್ತು ಶಾಂತಿಯ ಸಂದೇಶ ಸಾರುವ ಜವಾಬ್ದಾರಿಯುತ ಯುವಕರಾಗಿ ಬೆಳೆಯಬೇಕು ಎಂದು ನ್ಯಾಯವಾದಿ ಅನ್ಷಾದ್ ಪಾಳ್ಯ ಹೇಳಿದರು.ಹಾಸನ ಜಿಲ್ಲಾ ಎಸ್‌ಎಸ್‌ಎಫ್ ಘಟಕದ ಆಶ್ರಯದಲ್ಲಿ ಹಲಸುಲಿಗೆ ಗ್ರಾಮದ ಹಜ್ರತ್ ಸೈಯದ್ ಜಲಾಲುದ್ದೀನ್ ದರ್ಗಾದ ಆವರಣದಲ್ಲಿ ಆಯೋಜಿಸಿದ್ದ 14ನೇ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಳಿನ ಸಮಾಜದ ನಿರ್ಮಾತೃಗಳಾಗಿದ್ದು, ರಾಷ್ಟ್ರ, ರಾಜ್ಯ, ಗ್ರಾಮ ಹಾಗೂ ನಗರಗಳ ಅಭಿವೃದ್ಧಿಗೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಮೂಡಿಸುವ ಬದಲು ಪ್ರೀತಿ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಬೆಳೆಸುವ ಕೆಲಸವನ್ನು ಯುವಕರು ಮಾಡಬೇಕು. ಎಸ್‌ಎಸ್‌ಎಫ್ ಕಳೆದ ಮೂರೂವರೆ ದಶಕಗಳಿಂದ ಯುವಜನರಲ್ಲಿ ಸೌಹಾರ್ದತೆ ಮತ್ತು ಶಾಂತಿಯ ಸಂದೇಶವನ್ನು ಬಿತ್ತುವ ಕಾರ್ಯ ಮಾಡುತ್ತಿದೆ. ಮಾದಕ ವ್ಯಸನ ಹಾಗೂ ವರದಕ್ಷಿಣೆ ಪದ್ಧತಿಯ ವಿರುದ್ಧವೂ ಹಲವು ಜಾಗೃತಿ ಕಾರ್ಯಕ್ರಮಗಳು ಮತ್ತು ಆಂದೋಲನಗಳನ್ನು ನಡೆಸಿದೆ ಎಂದು ಹೇಳಿದರು.ಧರ್ಮಪಂಡಿತ ಷರೀಫ್ ಮಿಸ್ಬಾಹಿ ಮಾತನಾಡಿ, ಮಾಧ್ಯಮಗಳಲ್ಲಿ ಧರ್ಮಗಳ ಕುರಿತು ಚರ್ಚಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಧರ್ಮದ ನೈಜ ಸಂದೇಶ ಹಾಗೂ ಮೂಲ ಗ್ರಂಥಗಳ ಅರಿವು ಹೊಂದಿರುವವರ ಅಭಿಪ್ರಾಯಗಳಿಗೆ ಆದ್ಯತೆ ನೀಡಬೇಕು. ಇಸ್ಲಾಂ ಧರ್ಮದ ಕುರಿತು ತಿಳಿದುಕೊಳ್ಳಲು ಕುರಾನ್ ಮತ್ತು ಹದೀಸ್‌ಗಳ ಆಳವಾದ ಜ್ಞಾನ ಹೊಂದಿರುವ ವಿದ್ವಾಂಸರ ಮಾರ್ಗದರ್ಶನ ಅಗತ್ಯ ಎಂದರು.
ಎಸ್‌ಎಸ್‌ಎಫ್ ಆಯೋಜಿಸುವ ಸಾಹಿತ್ಯೋತ್ಸವಗಳಲ್ಲಿ ಭಾಷಣ, ಹಾಡು, ಕವನ, ಲೇಖನ ಹಾಗೂ ಪ್ರಬಂಧಗಳ ಮೂಲಕ ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ಅಥವಾ ಯಾವುದೇ ವರ್ಗವನ್ನು ಹೀಯಾಳಿಸುವ ಸಂದೇಶಗಳಿಗೆ ಅವಕಾಶ ನೀಡುವುದಿಲ್ಲ. ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸಾಹಿತ್ಯೋತ್ಸವಗಳ ಪ್ರಮುಖ ಆಶಯ ಶಾಂತಿ, ಸೌಹಾರ್ದತೆ, ಸಹಿಷ್ಣುತೆ ಮತ್ತು ಮಾನವೀಯತೆಯನ್ನು ಬೆಳೆಸುವುದಾಗಿದೆ ಎಂದು ಹೇಳಿದರು.
ಯುವಜನರು ಶೈಕ್ಷಣಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು. ಸಂಘಟನೆಯ ಕಾರ್ಯಕ್ರಮಗಳಲ್ಲಿ ಶಾಂತಿ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸ್ಪರ್ಧೆಯಲ್ಲಿ ಸಕಲೇಶಪುರ ಘಟಕವು ಮೊದಲ ಸ್ಥಾನ ಗಳಿಸಿದರೆ, ದ್ವಿತೀಯ ಸ್ಥಾನವನ್ನು ಹಾಸನ ಘಟಕ ಗಳಿಸಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಘಟಕದ ವಿದ್ಯಾರ್ಥಿಗಳು ಭಾಷಣ, ಕವನ, ಹಾಡು, ಲೇಖನ ಹಾಗೂ ಪ್ರಬಂಧ ಸೇರಿದಂತೆ ವಿವಿಧ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಮರ್ಶಾದ್ ತಂಙಳ್, ಎಸ್ ಕೆ ಯು ಅಧ್ಯಕ್ಷರಾದ ಸೈದಲವಿ ಸಖಾಫಿ, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ರಫೀಕ್ ಮದನಿ, ಆನೆಮಹಲ್ ಹಸೈನಾರ್, ಹಲಸುಲಿಗೆ ಮಸೀದಿಯ ಅಧ್ಯಕ್ಷ ಶೇಕ್ ಅಹಮದ್, ಕುಡಗರಹಳ್ಳಿ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಕುಡಗರಹಳ್ಳಿ, ಎಸ್‌ಎಸ್‌ಎಫ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.