ಕರಾವಳಿಯಲ್ಲಿ ಮೆಟ್ರೋ, ವಿಮಾನ ನಿಲ್ದಾಣ, ಸ್ಟೇಡಿಯಂ ಪ್ರಸ್ತಾಪ

| Published : Nov 18 2025, 02:00 AM IST

ಕರಾವಳಿಯಲ್ಲಿ ಮೆಟ್ರೋ, ವಿಮಾನ ನಿಲ್ದಾಣ, ಸ್ಟೇಡಿಯಂ ಪ್ರಸ್ತಾಪ
Share this Article
  • FB
  • TW
  • Linkdin
  • Email

ಸಾರಾಂಶ

ಸಭೆಯಲ್ಲಿ ಮಂಗಳೂರು- ಉಡುಪಿ - ಮಣಿಪಾಲ ಹಾಗೂ ಹೆಜಮಾಡಿ- ಕಾರ್ಕಳ ಓವರ್ ಹೆಡ್ ಮೆಟ್ರೋ ಯೋಜನೆಯ ಬಗ್ಗೆ ಚರ್ಚೆ ನಡೆಯಿತು. ಈಗಾಗಲೇ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಹೇಳಿದರು.

ಉಡುಪಿ: ಕರಾವಳಿ ಅಭಿವೃದ್ಧಿ ಮಂಡಳಿಯ ಪ್ರಥಮ ಸಾಮಾನ್ಯ ಸಭೆಕನ್ನಡಪ್ರಭ ವಾರ್ತೆ ಉಡುಪಿ

ಕರ್ನಾಟಕ ಕರಾವಳಿ ಅಭಿವೃದ್ಧಿ ಮಂಡಳಿಯ ಪ್ರಥಮ ಸಾಮಾನ್ಯ ಸಭೆ ಸೋಮವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ನಡೆಯಿತು.

ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಅಧ್ಯಕ್ಷತೆ ವಹಿಸಿದ್ದರು. ಮೂರು ಜಿಲ್ಲೆಯನ್ನೊಳಗೊಂಡ ಕರಾವಳಿಯ 19 ಶಾಸಕರ ಮತ್ತು 2 ವಿಧಾನ ಪರಿಷತ್ ಸದಸ್ಯರ ಪೈಕಿ 6 ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.ಸಭೆಯಲ್ಲಿ ಮಂಗಳೂರು- ಉಡುಪಿ - ಮಣಿಪಾಲ ಹಾಗೂ ಹೆಜಮಾಡಿ- ಕಾರ್ಕಳ ಓವರ್ ಹೆಡ್ ಮೆಟ್ರೋ ಯೋಜನೆಯ ಬಗ್ಗೆ ಚರ್ಚೆ ನಡೆಯಿತು. ಈಗಾಗಲೇ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಹೇಳಿದರು.

ಇದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಉಡುಪಿಯಿಂದ ಕೊಲ್ಲೂರು ಮೂಲಕ ಕಾರವಾರ ವರೆಗೆ ಈ ಮೆಟ್ರೋ ಮಾರ್ಗವನ್ನು ವಿಸ್ತರಿಸಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ಕಾಪು ತಾಲೂಕಿನ ನಂದಿಕೂರಿನಲ್ಲಿ ಯುಪಿಸಿಎಲ್‌ನಿಂದ ಹಿಂದಕ್ಕೆ ಪಡೆಯಲಾಗಿರುವ 900 ಎಕ್ರೆ ಸರ್ಕಾರಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮತ್ತು ಅಂತಾರಾಷ್ಟ್ರೀಯ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್, ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಸಿ, ಈ ಯೋಜನೆಯ ಸಾಧ್ಯಾಸಾಧ್ಯತೆಯ ಬಗ್ಗೆ ತಜ್ಞರ ವರದಿ ಪಡೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ನಿರ್ಣಯಿಸಲಾಯಿತು.ಕ್ರಿಕೆಟ್ ಸ್ಟೇಡಿಯಂ ಸ್ಥಾಪಿಸುವ ಬಗ್ಗೆ ಪರಿಶೀಲನೆಗೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್‌ಗೆ ಕೇಳಲಾಗಿದೆ, ಆದರೆ ಅಲ್ಲೀಗ ಚುನಾವಣೆ ನಡೆಯುತ್ತಿರುವುದರಿಂದ ಪರಿಶೀಲನೆ ತಡವಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.ಶಾಸಕರೊಂದಿಗೆ ಸಿಎಂ ಭೇಟಿ:

ಈ ಎಲ್ಲ ಯೋಜನೆಗಳ ಬಗ್ಗೆ ವರದಿ ಸಿದ್ಧಪಡಿಸಿಕೊಂಡು ಮುಂದಿನ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮೂರೂ ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸೋಣ ಎಂದು ಅಧ್ಯಕ್ಷ ಎ.ಎ. ಗಫೂರ್ ಹೇಳಿದರು. ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ, ಸುಳ್ಯ ಶಾಸಕಿ ಭಾಗರಥಿ ಮುರಳ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿಸೋಜ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.-----------250 ಕೋಟಿ ರು. ಅನುದಾನಕ್ಕೆ ಬೇಡಿಕೆ: ಗಫೂರ್

ಕಳೆದ ಬಾರಿ ಕ.ಅ. ಪ್ರಾಧಿಕಾರಕ್ಕೆ 10.50 ಕೋಟಿ ರು. ಅನುದಾನ ಬಂದಿದ್ದು, ಅದರಿಂದ ನಡೆದಿರುವ ಕಾಮಗಾರಿಗಳಿಗೆ ಘಟನೋತ್ತರ ಮಂಜೂರಾತಿ ನೀಡಲಾಗಿದೆ. ಈ ಬಾರಿ ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಅನುದಾನ ಸಿಗಲಿದೆ. ಸದ್ಯ 250 ಕೋಟಿ ರು. ಅನುದಾನಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗುವುದು ಎಂದು ಗಫೂರ್ ಹೇಳಿದರು.ಅಲ್ಲದೇ ಕರ್ನಾಟಕದ 320 ಕಿ.ಮೀ. ಕರಾವಳಿಯ ಸಮಗ್ರ ಅಭಿವೃದ್ಧಿಗೆ ಕೇರಳ, ಗೋವಾಗಳಲ್ಲಿರುವಂತೆ ಸಿ.ಆರ್.ಝಡ್ ನಿಯಮಗಳನ್ನು ಸಡಿಲಿಸುವಂತೆ ಮನವಿ ಸಲ್ಲಿಸಲಾಗುತ್ತದೆ ಎಂದರು.