21ರಿಂದ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನ

| Published : Feb 15 2025, 12:31 AM IST

ಸಾರಾಂಶ

ಶಿವಮೊಗ್ಗ: ಜೆಸಿಐ ಶಿವಮೊಗ್ಗ ವತಿಯಿಂದ ಫೆ.21ರಿಂದ 23ರವರೆಗೆ ರಾಷ್ಟ್ರೀಯ ಪ್ರೌಢಶಾಲೆ ಆವರಣದಲ್ಲಿ ಪ್ರಥಮ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನವನ್ನು ಆಯೋಜಿಸಲಾಗಿದೆ ಎಂದು ಜೆಸಿಐ ಸೆನೇಟರ್ ಡಾ.ಎಸ್.ವಿ.ಶಾಸ್ತ್ರಿ ತಿಳಿಸಿದರು.

ಶಿವಮೊಗ್ಗ: ಜೆಸಿಐ ಶಿವಮೊಗ್ಗ ವತಿಯಿಂದ ಫೆ.21ರಿಂದ 23ರವರೆಗೆ ರಾಷ್ಟ್ರೀಯ ಪ್ರೌಢಶಾಲೆ ಆವರಣದಲ್ಲಿ ಪ್ರಥಮ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನವನ್ನು ಆಯೋಜಿಸಲಾಗಿದೆ ಎಂದು ಜೆಸಿಐ ಸೆನೇಟರ್ ಡಾ.ಎಸ್.ವಿ.ಶಾಸ್ತ್ರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಪ್ರೌಢಶಾಲಾ ಆವರಣದಲ್ಲಿ ರಾಷ್ಟ್ರಪತಿ ಭವನ ಸಿದ್ಧಪಡಿಸಲಾಗಿದೆ. ಫೆ.21ರಂದು ಮಧ್ಯಾಹ್ನ 3ಕ್ಕೆ ಅಧಿವೇಶನ ಆರಂಭವಾಗಲಿದ್ದು, ಎಲ್ಲಾ ಸಂಸದರು, ಮಂತ್ರಿಗಳು, ಪ್ರತಿಪಕ್ಷದ ನಾಯಕರುಗಳು ಸಂಸತ್‌ನಲ್ಲಿ ಸಮಾವೇಶಗೊಳ್ಳಲಿದ್ದು, ರಾಷ್ಟ್ರಪತಿಗಳಿಂದ ಪ್ರತಿಜ್ಞಾವಿಧಿ ಇರುತ್ತದೆ. ಸಂಜೆ 4.30 ರಿಂದ 5.30 ರವರೆಗೆ ಪ್ರಧಾನ ಮಂತ್ರಿ ಸೇರಿದಂತೆ ಸಂಪುಟ ದರ್ಜೆಯ ಸಚಿವರುಗಳಿಗೆ ಪ್ರಮಾಣವಚನ ಬೋಧಿಸಲಾಗುವುದು ಎಂದರು.

ಫೆ.21ರಂದು ಸಂಜೆ 6ಕ್ಕೆ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನ ಉದ್ಘಾಟನೆಯಾಗಲಿದ್ದು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅಧಿವೇಶನ ಉದ್ಘಾಟಿಸುವರು. ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಸದೀಯ ನಡವಳಿಕೆಗಳ ಪುಸ್ತಕ ಬಿಡುಗಡೆ ಮಾಡುವರು. ಸಚಿವ ಎಸ್.ಮಧು ಬಂಗಾರಪ್ಪ ಮಾಹಿತಿ ಮುನ್ನೋಟ ಪುಸ್ತಕ ಬಿಡುಗಡೆ ಮಾಡುವರು. ಸಂಸತ್‌ನಲ್ಲಿ ಭಾಗವಹಿಸಿದ ಸದಸ್ಯರಿಗೆ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ.ಸಂಗಮೇಶ್ ಬ್ಯಾಗ್‌ಗಳನ್ನು ವಿತರಣೆ ಮಾಡುವರು ಎಂದು ಮಾಹಿತಿ ನೀಡಿದರು.ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ.ಧನಂಜಯ ಸರ್ಜಿ, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಕುಮಾರಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರಶ್ಮಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸುರೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಫೆ.22ರಂದು ಅಧಿವೇಶನದ ಕಾರ್ಯಕಲಾಪಗಳು ಬೆಳಗ್ಗೆ 10ರಿಂದಲೇ ಆರಂಭವಾಗಲಿವೆ. ಚಹಾ ವಿರಾಮದ ನಂತರ 11.30ಕ್ಕೆ ರಾಷ್ಟ್ರಪತಿಗಳ ಆಗಮನವಾಗುವುದು. ಕಲಾಪದ ಆರಂಭದಲ್ಲಿ ವಿತ್ತ ಸಚಿವರಿಂದ ಆಯವ್ಯಯ ಮಂಡನೆ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ, ಚರ್ಚೆ, ವಿತ್ತ ಸಚಿವರ ಬಿಲ್ ಮೇಲೆ ಚರ್ಚೆ, ಆಳುವ ಪಕ್ಷದಿಂದ ಬಿಲ್ ಮಂಡನೆ, ನಂತರ ಶೂನ್ಯ ವೇಳೆ ಇರುತ್ತದೆ ಎಂದರು.ಫೆ.23ರಂದು ಬೆಳಗ್ಗೆ 10 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಸರ್ಕಾರದ 2, 3, 4ನೇ ಬಿಲ್‌ಗಳ ಮಂಡನೆಯಾಗಲಿದೆ. ಶೂನ್ಯ ವೇಳೆಯಲ್ಲಿ ಹಲವು ವಿಷಯಗಳು ಚರ್ಚೆಯಾಗಲಿವೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.ಸಮಾರೋಪದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮತ್ತು ಜಿಲ್ಲೆಯ ಶಾಸಕರು ಭಾಗವಹಿಸಲಿದ್ದು, ಜೆಸಿಐ ಶಾಶ್ವತಿ ಘಟಕದ ಅಧ್ಯಕ್ಷ ನರಸಿಂಹ ಮೂರ್ತಿ.ಜಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ರಾಷ್ಟ್ರಪತಿಯಾಗಿ ಡಾ.ಅನುರಾಧ ಪಟೇಲ್, ಉಪ ರಾಷ್ಟ್ರಪತಿಯಾಗಿ ಪ್ರತಿಭಾ ಅರುಣ್, ಪ್ರಧಾನ ಮಂತ್ರಿಯಾಗಿ ಅನಿಷಾ ಕಾತರಕಿ, ಉಪ ಪ್ರಧಾನಿಯಾಗಿ ಶಾಂತಾ ಎಸ್.ಶೆಟ್ಟಿ, ಸಭಾಪತಿಯಾಗಿ ಎಸ್.ಎನ್.ಸ್ವಾತಿ , ಉಪ ಸಭಾಪತಿಯಾಗಿ ಅನಲಾ ಭರತ್, ಗೃಹ, ರಕ್ಷಣಾ, ವಿತ್ತ, ಆರೋಗ್ಯ, ರೈಲ್ಷೆ, ಜವಳಿ, ಬಂದರು ಸೇರಿದಂತೆ ಸುಮಾರು 24 ಸಚಿವರನ್ನು ಕೂಡ ಆಯ್ಕೆ ಮಾಡಲಾಗಿದೆ. ಪ್ರತಿಪಕ್ಷದ ನಾಯಕರಾಗಿ ಕಾಂಗ್ರೆಸ್‌ನಿಂದ ರೇಖಾ ರಂಗನಾಥ್, ರಾಷ್ಟ್ರಭಕ್ತರ ಬಳಗದಿಂದ ಶಶಿಕಲಾ ಪ್ರಶಾಂತ್, ಜೆಡಿಯುನಿಂದ ಮಂಜುಳಾ, ಆಮ್‌ಆದ್ಮಿಯಿಂದ ಮಾರ್ಗರೇಟ್, ಶಿವಸೇನೆಯಿಂದ ಸ್ಮಿತಾ ಸೇರಿದಂತೆ ಸುಮಾರು 14 ಪ್ರಮುಖ ಪಕ್ಷಗಳ ನಾಯಕಿಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಅಧ್ಯಕ್ಷ ಜಿ.ಕೆ.ನರಸಿಂಹ ಮೂರ್ತಿ, ಪೂಜಾ, ಗಾಯತ್ರಿ ಯಲ್ಲಪ್ಪ, ಪ್ರಶಾಂತಿ, ವಜೀರ್ ಅಹಮ್ಮದ್ ಇದ್ದರು.