ಸಾರಾಂಶ
ರಾಮನಗರ ಜಿಲ್ಲೆಗೆ ಬೆಂಗಳೂರು ಬ್ರ್ಯಾಂಡ್ ವ್ಯಾಲ್ಯು ತರಲು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವುದು ಮತ್ತು ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದ ಪ್ರಯತ್ನ ಸಾಗಿರುವಾಗಲೇ ನಮ್ಮ ಮೆಟ್ರೋ ವಿಸ್ತರಣೆ ಸುದ್ದಿ ಜಿಲ್ಲೆಯಲ್ಲಿ ಹೊಸ ಭರವಸೆ ಚಿಗುರೊಡೆಯುವಂತೆ ಮಾಡಿದೆ.
ರಾಮನಗರ: ರಾಮನಗರ ಜಿಲ್ಲೆಗೆ ಬೆಂಗಳೂರು ಬ್ರ್ಯಾಂಡ್ ವ್ಯಾಲ್ಯು ತರಲು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವುದು ಮತ್ತು ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದ ಪ್ರಯತ್ನ ಸಾಗಿರುವಾಗಲೇ ನಮ್ಮ ಮೆಟ್ರೋ ವಿಸ್ತರಣೆ ಸುದ್ದಿ ಜಿಲ್ಲೆಯಲ್ಲಿ ಹೊಸ ಭರವಸೆ ಚಿಗುರೊಡೆಯುವಂತೆ ಮಾಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ದ ಕಾರ್ಯ ಸಾಧ್ಯತಾ ಅಧ್ಯಯನ ವರದಿಯಂತೆ ರಾಜ್ಯ ಸರ್ಕಾರ ನಮ್ಮ ಮೆಟ್ರೋ ಮಾರ್ಗವನ್ನು ಬಿಡದಿ ಮತ್ತು ಹಾರೋಹಳ್ಳಿವರೆಗೆ ವಿಸ್ತರಣೆ ಮಾಡಿದರೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ. ಅದರಲ್ಲೂ ನಿತ್ಯ ಬೆಂಗಳೂರಿಗೆ ಹೋಗಿಬರುವ ಉದ್ಯೋಗಿಗಳು, ಕಾರ್ಮಿಕರು ಮಾತ್ರವಲ್ಲದೇ ಕೈಗಾರಿಕೆಗಳಲ್ಲಿಯೂ ಸಾಕಷ್ಟು ನಿರೀಕ್ಷೆ ಮೂಡಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಮ್ಮಾಯಿರವರು ನಮ್ಮ ಮೆಟ್ರೋ ಯೋಜನೆ ರಾಮನಗರ ಮತ್ತು ಮಾಗಡಿವರೆಗೂ ವಿಸ್ತರಣೆ ಮಾಡುವ ಘೋಷಣೆ ಮಾಡಿದ್ದರು. ಈಗಿನ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು 2023ರ ನವೆಂಬರ್ ನಲ್ಲಿ ಬಿಡದಿವರೆಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದರಲ್ಲದೆ, ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ಹೇಳಿದ್ದರು. ಇತ್ತೀಚೆಗೆ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ರವರು ಹಾರೋಹಳ್ಳಿಗೂ ಮೆಟ್ರೊ ವಿಸ್ತರಣೆ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದ್ದರು. ಇಷ್ಟೇ ಅಲ್ಲದೆ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಮೆಟ್ರೋ ಮಾರ್ಗಕ್ಕಾಗಿ ಒತ್ತಡ ಹೇರುತ್ತಲೇ ಬಂದಿದ್ದರು.
ಅದರಂತೆ ಬಿಎಂಆರ್ ಸಿಎಲ್ ನಿಂದ ಮೆಟ್ರೋ ವಿಸ್ತರಣೆ ಸಂಬಂಧ ರಾಜ್ಯಸರ್ಕಾರಕ್ಕೆ 2 ಪ್ಯಾಕೇಜ್ ನಲ್ಲಿ ವರದಿ ಸಲ್ಲಿಕೆಯಾಗಲಿದೆ. ಮೊದಲ ಪ್ಯಾಕೇಜ್ ನಲ್ಲಿಯೇ ಮೂರು ಕಾರಿಡಾರ್ ಗಳ ಚಲ್ಲಘಟ್ಟ - ಬಿಡದಿ, ಸಿಲ್ಕ್ ಇನ್ ಸ್ಟಿಟ್ಯೂಟ್ - ಹಾರೋಹಳ್ಳಿ ಮತ್ತು ಬೊಮ್ಮಸಂದ್ರ - ಅತ್ತಿಬೆಲೆ ಮಾರ್ಗದ ವರದಿ ಇರಲಿದೆ.
ಈಗ ಚಲ್ಲಘಟ್ಟದಿಂದ ವೈಟ್ ಫೀಲ್ಡ್ ವರೆಗೆ ನೇರಳೆ ಮಾರ್ಗ ಕಾರ್ಯಾಚರಣೆ ಮಾಡುತ್ತಿದೆ. ಇದನ್ನು ಚಲ್ಲಘಟ್ಟದಿಂದ ಬಿಡದಿ ಕೈಗಾರಿಕಾ ಪ್ರದೇಶಕ್ಕೆ (15 ಕಿ.ಮೀ) ವಿಸ್ತರಿಸಲು. ಕನಕಪುರ ರಸ್ತೆಯಲ್ಲಿರುವ ರೇಷ್ಮೆ ಸಂಸ್ಥೆಯಿಂದ (ಸಿಲ್ಕ್ ಇನ್ ಸ್ಟಿಟ್ಯೂಟ್)ಮಾದಾವರದವರೆಗೂ ಇರುವ ರೈಲು ಸಂಚಾರವನ್ನು ಹಾರೋಹಳ್ಳಿವರೆಗೆ (24 ಕಿ.ಮೀ) ಕೊಂಡೊಯ್ಯಲು ಉದ್ದೇಶಿಸಲಾಗಿದೆ.
ಈ ವರದಿಯಲ್ಲಿ ಯೋಜನೆಗೆ ಆಗಬೇಕಾದ ಭೂ ಸ್ವಾಧೀನ, ವೆಚ್ಚ, ಟ್ರಾಫಿಕ್ , ನಿಲ್ದಾಣಗಳ ನಿರ್ಮಾಣ ಸೇರಿ ಹಲವು ಅಂಶಗಳು ಇರಲಿವೆ. ವರದಿ ಸಲ್ಲಿಕೆ ಬಳಿಕ ಹಣಕಾಸು ಒದಗಿಸುವುದು ಸೇರಿ ಇತರೆ ಅಂತಿಮ ತೀರ್ಮಾನಗಳನ್ನು ರಾಜ್ಯಸರ್ಕಾರ ಕೈಗೊಳ್ಳಲಿದೆ.
ಬೆಂಗಳೂರಿಗೆ ಪರ್ಯಾಯ ನಗರ ರಾಮನಗರ:
ರಾಮನಗರ ಜಿಲ್ಲೆಯಿಂದ ಪ್ರತಿನಿತ್ಯ ಸುಮಾರು 10-12 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ, ಉದ್ಯೋಗ ಹಾಗೂ ವ್ಯಾಪಾರ ವಹಿವಟಿಗಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅದರಲ್ಲೂ ಭಾರತೀಯ ರೈಲ್ವೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮಾತ್ರವಲ್ಲದೇ ಖಾಸಗಿ ವಾಹನಗಳಲ್ಲಿಯು ಉದ್ಯೋಗಿಗಳು ಪ್ರತಿನಿತ್ಯ ಸಂಚಾರಿಸುತ್ತಾರೆ. ಇದರ ನಡುವೆ ನಮ್ಮ ಮೆಟ್ರೋ ಸಹ ರಾಮನಗರಕ್ಕೆ ಕಾಲಿಟ್ಟರೆ ಜಿಲ್ಲೆಯ ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ.
ಬಿಡದಿ ಮತ್ತು ಹಾರೋಹಳ್ಳಿ ಪಟ್ಟಣಗಳು ಕೈಗಾರಿಕಾ ಪ್ರದೇಶಗಳ ಜೊತೆಗೆ ಶೈಕ್ಷಣಿಕ ಚಟುವಟಿಕೆ ಸೇರಿದಂತೆ ಅಭಿವೃದ್ಧಿ ಕಾರ್ಯಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯ ಪ್ರಮುಖ ಪಟ್ಟಣಗಳು.
ಬಿಡದಿಗೆ ಹೊಂದಿಕೊಂಡಂತೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275 ಹಾಗೂ ಹಾರೋಹಳ್ಳಿಗೆ ಹೊಂದಿಕೊಂಡಂತೆ ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ –948 ಹಾದು ಹೋಗಿದೆ. ಜೊತೆಗೆ ಬೆಂಗಳೂರು–ಕನಕಪುರ ಮೂಲಕವೇ ಹಾದು ಹೋಗಿದೆ. ಚಾಮರಾಜನಗರಕ್ಕೂ ನೇರ ಸಂಪರ್ಕ ಹೊಂದಿದೆ.
ಬೆಂಗಳೂರಿಗೆ ಹೊಂದಿಕೊಂಡಂತೆ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಮಾಗಡಿ, ಬಿಡದಿ ಮತ್ತು ಹಾರೋಹಳ್ಳಿಗೆ ಮೆಟ್ರೊ ಸೇವೆ ಆರಂಭಿಸಬೇಕು ಎಂಬ ಕೂಗು ಕೆಲ ವರ್ಷಗಳಲ್ಲಿ ಜೋರಾಗಿತ್ತು. ಆದರೀಗ ಮಾಗಡಿ ಹೊರತು ಪಡಿಸಿ ಬಿಡದಿ ಮತ್ತು ಹಾರೋಹಳ್ಳಿ ಪಟ್ಟಣಗಳನ್ನು ಮೆಟ್ರೊ ಆರಂಭಕ್ಕೆ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಎರಡೂ ಪಟ್ಟಣಗಳು ಸೇರಿ ರಾಮನಗರ ಜಿಲ್ಲೆಯಿಂದ ಬೆಂಗಳೂರಿಗೆ ನಿತ್ಯ ಸಾವಿರಾರು ಉದ್ಯೋಗಿಗಳು ಬೆಂಗಳೂರಿಗೆ ಹೋಗಿ ಬರುತ್ತಾರೆ. ಮೆಟ್ರೊ ಬಂದರೆ ಸಾವಿರಾರು ಜನರು ತ್ವರಿತವಾಗಿ ಪ್ರಯಾಣಿಸಲು ಅನುಕೂಲವಾಗಲಿದೆ.
ಅವಳಿ ನಗರಕ್ಕೂ ಪೂರಕ:
ರಾಮನಗರ ಹಾಗೂ ಚನ್ನಪಟ್ಟಣದ ನಡುವಿನ 12 ಕಿ.ಮೀ ಅಂತರವನ್ನು ಕೂಡಿಸಿ, ಅವಳಿ ನಗರವನ್ನಾಗಿ ಮಾಡಬೇಕು ಎಂಬ ಕೂಗಿಗೂ ನಮ್ಮ ಮೆಟ್ರೋ ಯೋಜನೆ ಸಾಕಷ್ಟು ಸಹಕಾರಿಯಾಗಲಿದೆ. ಚನ್ನಪಟ್ಟಣದಿಂದ ರೈಲ್ವೆ ಮೂಲಕ ನೇರವಾಗಿ ಬೆಂಗಳೂರಿಗೆ ಉದ್ಯೋಗಕ್ಕೆ ತೆರಳುವವರು, ರಾಮನಗರದ ಮೂಲಕ ನಮ್ಮ ಮೆಟ್ರೋದಲ್ಲಿ ಸಂಚರಿಸುವ ವ್ಯವಸ್ಥೆ ಶುರುವಾದರೆ, ರಾಮನಗರ ಕೇಂದ್ರಿಯ ಸ್ಥಾನವಾಗಲಿದೆ. ಇದರೊಂದಿಗೆ ಬಿಡದಿಯು ಬೆಂಗಳೂರಿಗೆ ಬಹುತೇಕ ಸೇರಿಕೊಳ್ಳಲಿದೆ. ಇದರ ಮೂಲಕ ಬಿಡದಿಯಿಂದ ರಾಮನಗರ ಮಾರ್ಗವಾಗಿ ಚನ್ನಪಟ್ಟಣದ ವರೆಗೂ ಒಂದೇ ನಗರವಾಗಿ ಅಭಿವೃದ್ಧಿಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ.
ಕೈಗಾರಿಕಾ ಚಟುವಟಿಕೆಗೂ ಅನುಕೂಲ
ರಾಜ್ಯ ರಾಜಧಾನಿಯಿಂದ ಸುಮಾರು 35 ಕಿ.ಮೀ ದೂರ ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನಿಂದ 115 ಕಿ.ಮೀ. ದೂರದಲ್ಲಿ ರಾಮನಗರ ತಾಲೂಕು ಬಿಡದಿ ಪಟ್ಟಣ ಇದೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಟೊಯೊಟಾ ಸೇರಿದಂತೆ ಜಾಗತಿಕ ಮಟ್ಟದ ಕೈಗಾರಿಕೆಗಳಿವೆ. ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ವ್ಯಾಪಾರ–ವಹಿವಾಟು ನಡೆಸುವ ಸಣ್ಣ, ಮಧ್ಯಮ, ದೊಡ್ಡ ಕೈಗಾರಿಕೆಗಳು ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಇಲ್ಲಿವೆ. ಪಟ್ಟಣದಲ್ಲಿರುವ ರೈಲು ನಿಲ್ದಾಣವು ಬೆಂಗಳೂರು–ಮೈಸೂರಿಗೆ ಸಂಪರ್ಕ ಸೇತುವೆಯಾಗಿದೆ. ಬೆಂಗಳೂರು–ಮೈಸೂರು ಹೆದ್ದಾರಿ–275 ನಿರ್ಮಾಣದಿಂದಾಗಿ ಬಿರುಸು ಪಡೆದಿರುವ ಇಲ್ಲಿನ ಕೈಗಾರಿಕಾ ಚಟುವಟಿಕೆ ಮೆಟ್ರೋ ಬಂದ ಬಳಿಕ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.
ಮೆಟ್ರೋ ವಿಸ್ತರಣೆ ಅಭಿವೃದ್ಧಿಗೆ ಪೂರಕ
ರಾಮನಗರ ಜಿಲ್ಲೆಯ ಹಾರೋಹಳ್ಳಿಯಿಂದ ಬೆಂಗಳೂರು ಸುಮಾರು 48 ಕಿ.ಮೀ ದೂರದಲ್ಲಿದೆ. ಜಿಲ್ಲೆಯ ಕನಕಪುರ ತಾಲೂಕಿನಿಂದ ವಿಭಜಿಸಿ ಹಾರೋಹಳ್ಳಿಯನ್ನು 2019ರಲ್ಲಿ ಜಿಲ್ಲೆಯ ಐದನೇ ತಾಲೂಕಾಗಿ ಘೋಷಣೆ ಮಾಡಲಾಯಿತು.
2023 ಫೆ.21ರಿಂದ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದಿರುವ ಪಟ್ಟಣಕ್ಕೆ ಹೊಂದಿಕೊಂಡಂತೆ 12 ವರ್ಷಗಳ ಹಿಂದೆಯೇ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿದೆ. ಐದು ಹಂತದಲ್ಲಿ ಅಭಿವೃದ್ಧಿಯಾಗಿರುವ ಈ ಪ್ರದೇಶದಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರಿಯ ಮಟ್ಟದಲ್ಲಿ ವ್ಯಾಪಾರ–ವಹಿವಾಟು ನಡೆಸುವ ಸಣ್ಣ, ಮಧ್ಯಮ, ದೊಡ್ಡ ಕೈಗಾರಿಕೆಗಳು ಸೇರಿದಂತೆ 1,500ಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಹೊರವಲಯದಲ್ಲಿ ಖಾಸಗಿ ವೈದ್ಯಕೀಯ ಕಾಲೇಜು, ಆಸ್ಪತ್ರೆ, ವಿಶ್ವವಿದ್ಯಾಲಯ ಕೂಡ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಗೆ ಮೆಟ್ರೋ ಮಾರ್ಗ ವಿಸ್ತರಣೆಯಾದರೆ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗಲಿದೆ.