ನೇರಳೆ ಮಾರ್ಗದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಕೀಟಲೆಗೆ ತುರ್ತು ಬಟನ್‌ ಒತ್ತಿ ಮೆಟ್ರೋ ನಿಲ್ಲಿಸಿದವಗೆ ದಂಡ!

| Published : Sep 13 2024, 01:32 AM IST / Updated: Sep 13 2024, 11:08 AM IST

ನೇರಳೆ ಮಾರ್ಗದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಕೀಟಲೆಗೆ ತುರ್ತು ಬಟನ್‌ ಒತ್ತಿ ಮೆಟ್ರೋ ನಿಲ್ಲಿಸಿದವಗೆ ದಂಡ!
Share this Article
  • FB
  • TW
  • Linkdin
  • Email

ಸಾರಾಂಶ

ನೇರಳೆ ಮಾರ್ಗದಲ್ಲಿ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಕೀಟಲೆಗಾಗಿ ತುರ್ತು ಟ್ರಿಪ್ ಸಿಸ್ಟಂ (ಇಟಿಎಸ್) ಬಟನ್ ಒತ್ತಿ ಹತ್ತು ನಿಮಿಷ ಮೆಟ್ರೋ ಸಂಚಾರ ನಿಲ್ಲಿಸಿದ ಯುವಕನಿಗೆ ಬಿಎಂಆರ್‌ಸಿಎಲ್ ₹5000 ದಂಡ ವಿಧಿಸಿದೆ.

 ಬೆಂಗಳೂರು :  ನೇರಳೆ ಮಾರ್ಗದಲ್ಲಿ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಕೀಟಲೆಗಾಗಿ ತುರ್ತು ಟ್ರಿಪ್ ಸಿಸ್ಟಂ (ಇಟಿಎಸ್) ಬಟನ್ ಒತ್ತಿ ಹತ್ತು ನಿಮಿಷ ಮೆಟ್ರೋ ಸಂಚಾರ ನಿಲ್ಲಿಸಿದ ಯುವಕನಿಗೆ ಬಿಎಂಆರ್‌ಸಿಎಲ್ ₹5000 ದಂಡ ವಿಧಿಸಿದೆ.

ವಿವೇಕನಗರ ನಿವಾಸಿ ಹೇಮಂತ್ ಎಂಬಾತ ಈ ಕಿಡಿಗೇಡಿ ಕೆಲಸ ಮಾಡಿದ್ದಾನೆ. ಈ ಬಟನ್‌ ಒತ್ತಿದ್ದರಿಂದ ಟ್ರಿನಿಟಿ ನಿಲ್ದಾಣ ಕಡೆಯಿಂದ ಬರುತ್ತಿದ್ದ ರೈಲು ಎಂ.ಜಿ. ರೋಡ್‌ ನಿಲ್ದಾಣದಲ್ಲಿ 10 ನಿಮಿಷ ನಿಂತಿತು. ಸಹಜವಾಗಿ ಉಳಿದ ಮೆಟ್ರೋ ರೈಲುಗಳ ಸಂಚಾರವೂ ವ್ಯತ್ಯಯವಾಯಿತು. ತಕ್ಷಣಕ್ಕೆ ಯಾರು ಬಟನ್‌ ಒತ್ತಿದ್ದರು ಎಂಬುದು ತಿಳಿದಿರಲಿಲ್ಲ.

ಈ ಸಂಬಂಧ ಸಿಸಿಟಿವಿ ಕ್ಯಾಮೆರಾ ಮೂಲಕ ಪರಿಶೀಲಿಸಿದ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇಟಿಎಸ್‌ ಒತ್ತಿದವರನ್ನು ಗುರುತಿಸಿದ್ದಾರೆ. ಮೆಟ್ರೋ ರೈಲು ಪುನಃ ಶುರುವಾದಾಗ ಇಟಿಎಸ್ ಒತ್ತಿದ್ದ ವ್ಯಕ್ತಿ ರೈಲು ಹತ್ತಿ ಕಬ್ಬನ್ ಪಾರ್ಕ್‌ ನಿಲ್ದಾಣದಲ್ಲಿ ಇಳಿದಿದ್ದ. ಆತನನ್ನು ಹಿಂಬಾಲಿಸಿದ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಿಸಿದಾಗ ಯುವಕ ತಪ್ಪು ಒಪ್ಪಿಕೊಂಡಿದ್ದ.

ಯುವಕ ತಪ್ಪೊಪ್ಪಿಕೊಂಡಿದ್ದ. ಆದರೆ, ದಂಡ ಕಟ್ಟಲು ₹5000 ಆತನ ಬಳಿ ಇರಲಿಲ್ಲ. ಪಾಲಕರನ್ನು ಕರೆಸಿ ದಂಡ ಪಾವತಿಸಿ ಯುವಕನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಮೆಟ್ರೋ ಹಳಿಗೆ ಆಕಸ್ಮಿಕವಾಗಿ ಬಿದ್ದಾಗ ಅಥವಾ ಜಿಗಿದಲ್ಲಿ ನಿಲ್ದಾಣದಲ್ಲಿರುವ ಇಟಿಎಸ್‌ ಬಟನ್‌ ಬಳಸಲಾಗುತ್ತದೆ. ಇದನ್ನು ಒತ್ತಿದರೆ ಹಳಿಯ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡು ರೈಲು ನಿಲ್ಲುತ್ತದೆ.