ಕನ್ನಡಪ್ರಭ ವಾರ್ತೆ ಮೈಸೂರು

ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಬೈಕ್ ರ್ಯಾಲಿ ಮೂಲಕ ಮಾಜಿ ಸೈನಿಕರು ಕಾರ್ಗಿಲ್ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಮೈಸೂರು ಜಿಲ್ಲಾ ಮಾಜಿ ಸೈನಿಕರ ಸಂಘಗಳ ಒಕ್ಕೂಟವು ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ನಗರದ ಮೆಟ್ರೋಪೊಲ್ ವೃತ್ತದಿಂದ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಪ್ರತಿಮೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಶಾಸಕರಾದ ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಚಾಲನೆ ನೀಡಿದರು.

ಈ ವೇಳೆ ನೂರಾರು ಮಾಜಿ ಸೈನಿಕರು ಬೈಕ್ ಗಳಿಗೆ ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ಅಮರ್ ರಹೇ ಅಮರ್ ರಹೇ ಎಂಬ ಘೋಷಣೆಯೊಂದಿಗೆ ರ್ಯಾಲಿಯಲ್ಲಿ ಸಾಗಿದರು.

ಮೆಟ್ರೋಪೋಲ್ ವೃತ್ತದಿಂದ ಆರಂಭವಾದ ರ್ಯಾಲಿಯು ದಾಸಪ್ಪ ವೃತ್ತ, ರೈಲು ನಿಲ್ದಾಣದ ವೃತ್ತ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಕುವೆಂಪುನಗರದ ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪ ಆವರಣದಲ್ಲಿ ಅಂತ್ಯವಾಯಿತು.


ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆ ಸೇರಲು ಕರೆ

ನಂತರ ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ದೇಶ ಕಾಯುವುದು ಪವಿತ್ರವಾದ ಕೆಲಸ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾರತೀಯ ಸೇನೆ ಸೇರಬೇಕು ಎಂದು ಕರೆ ನೀಡಿದರು.

ದೇಶವನ್ನು ಕಾಯುತ್ತಿರುವ ಸೈನಿಕರಿಗೆ ಏನಾದರೂ ಕೊಡುಗೆಯನ್ನು ಕೊಡಿಸಬೇಕು ಎಂಬ ಆಶಯದೊಂದಿಗೆ ನಾನು ಕೆಲಸ ಮಾಡುತ್ತಿರುವೆ. ಇದರಿಂದ ಯುವಕರಿಗೆ ಪ್ರೇರಣೆ ಉಂಟಾಗಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರಬೇಕು. ಮಾಜಿ ಸೈನಿಕರ ಪರ ಸದಾ ಕೆಲಸ ಮಾಡಲು ಬಯಸುತ್ತೇನೆ ಎಂದರು.

ಇದೇ ವೇಳೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ದಿವಾಕರ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ರೋಟರಿ ಸಹಾಯಕ ಗರ್ವನರ್ ಬಿ. ಚಂದ್ರ, ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘ ಪಿ.ಕೆ. ಬಿದ್ದಪ್ಪ, ಮೈಸೂರು ಎಕ್ಸ್- ಸರ್ವಿಸ್‌ ಮೆನ್ ಮೂಮೆಂಟ್ ಅಧ್ಯಕ್ಷ ಪ್ರಿನ್ಸ್ ಅಂಥೋಣಿ, ಕೊಡಗು ಗೌಡ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೊಂಬಾರನ ಸುಬ್ಬಯ್ಯ, ಮಂಜುನಾಥ್ ಮೊದಲಾದವರು ಇದ್ದರು.