ಅಕ್ಷರವಷ್ಟೇ ಅಲ್ಲ, ಆದರ್ಶ ಬೋಧಿಸಿದ ಎಂಎಚ್‌ಪಿಎಸ್ ಶಾಲೆ

| Published : Jul 23 2025, 12:30 AM IST

ಸಾರಾಂಶ

ಇಂತಹ ಕಾರ್ಯಕ್ರಮಗಳಿಂದ ಮತ್ತೆ ಶಿಕ್ಷಕನಾಗಬೇಕೆಂಬ ಹಂಬಲ ಹೆಚ್ಚಾಗಿದೆ. ಶಿಕ್ಷಣ ವೃತ್ತಿ ಎಷ್ಟು ಪವಿತ್ರ ಎಂದು ಇದರಿಂದ ಮತ್ತೆ ಸಾಬೀತಾಗಿದೆ. ಇದು ಬಾಂಧವ್ಯ- ಭಾವನೆ ಹೆಚ್ಚಿಸುತ್ತದೆ. ಅಲ್ಲದೇ ಇದು ನಾಲ್ಕು ಗೋಡೆಗಳ ನಡುವಿನ ಕಾರ್ಯಕ್ರಮವಲ್ಲ, ಇದು ಹೃಯದಗಳ ಸಂಭ್ರಮ.

ಕೊಪ್ಪಳ:

ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಂದೇ ಪ್ರಸಿದ್ಧಿಯಾಗಿರುವ ಎಂಎಚ್‌ಪಿಎಸ್ ಶಾಲೆಯ ವಿದ್ಯಾರ್ಥಿಗಳು ಇರದೆ ಕೊಪ್ಪಳದಲ್ಲಿ ರಾಷ್ಟ್ರೀಯ ಹಬ್ಬಗಳು ಪೂರ್ಣವಾಗುತ್ತಿರಲಿಲ್ಲ ಎಂದು ಶಿಕ್ಷಣ ತಜ್ಞ ಟಿ.ವಿ. ಮಾಗಳದ ಹೇಳಿದರು.

ಶಾಲೆಯಲ್ಲಿ ೧೯೯೪-೯೫ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿಯೇ ಮಾದರಿ ಇದೆ. ಇದು ಅಕ್ಷರಕ್ಕಷ್ಟೇ ಅಲ್ಲ, ಆದರ್ಶ ಬೋಧಿಸುವ ಮೂಲಕ ಬರೀ ಕಲಿಸುವುದಷ್ಟೇ ಶಿಕ್ಷಣ ಅಲ್ಲ ಎಂಬುದನ್ನು ಶಿಕ್ಷಕರು ಮಾಡಿದ್ದಾರೆ. ಅದರಂತೆ ಹಚ್ಚಿದ ಹಣತೆಯಿಂದ ಕಿರಣಗಳೇ ಬರಬೇಕೇ ಹೊರತು ಬೇರೆ ಅಲ್ಲ. ಹೀಗಾಗಿ ಆಗಿನ ಶಾಲೆಗಳು ಅರಿವಿನ ಮಹಾಮನೆಗಳಾಗಿದ್ದವು. ಅಲ್ಲದೇ ರಾಷ್ಟ್ರೀಯ ಹಬ್ಬಗಳಂದು ಈ ಶಾಲೆಯ ವಿದ್ಯಾರ್ಥಿಗಳ ಕಾರ್ಯಕ್ರಮ ಇರದೇ ಇದ್ದರೆ ಅದು ಸಂಪೂರ್ಣವಾಗಿರುತ್ತಿಲ್ಲ ಎಂದರು.

ಇಂತಹ ಕಾರ್ಯಕ್ರಮಗಳಿಂದ ಮತ್ತೆ ಶಿಕ್ಷಕನಾಗಬೇಕೆಂಬ ಹಂಬಲ ಹೆಚ್ಚಾಗಿದೆ. ಶಿಕ್ಷಣ ವೃತ್ತಿ ಎಷ್ಟು ಪವಿತ್ರ ಎಂದು ಇದರಿಂದ ಮತ್ತೆ ಸಾಬೀತಾಗಿದೆ. ಇದು ಬಾಂಧವ್ಯ- ಭಾವನೆ ಹೆಚ್ಚಿಸುತ್ತದೆ. ಅಲ್ಲದೇ ಇದು ನಾಲ್ಕು ಗೋಡೆಗಳ ನಡುವಿನ ಕಾರ್ಯಕ್ರಮವಲ್ಲ, ಇದು ಹೃಯದಗಳ ಸಂಭ್ರಮ. ಒಟ್ಟಾರೆ ಕೂಡುವಿಕೆಯಿಂದ ಧನಾತ್ಮಕ ಭಾವನೆ ಹೆಚ್ಚಾಗುತ್ತದೆ. ಬದುಕಿನಲ್ಲಿ ಏನೂ ಇಲ್ಲ ಎಂಬುದಕ್ಕಿಂತ ಬದುಕಿನಲ್ಲಿ ಇನ್ನೂ ಇದೆ ಎಂದು ಈ ಕಾರ್ಯಕ್ರಮ ಸಾಕ್ಷೀಕರಿಸುತ್ತದೆ ಎಂದು ಹೇಳಿದರು.

ಶಿಕ್ಷಕ ಅಜ್ಜಪ್ಪ ಏಳುಬಾವಿ, ನಿವೃತ್ತ ಮುಖ್ಯಶಿಕ್ಷಕ ಸುಭಾಶ್ಚಂದ್ರ ಸಂಗಟಿ ಮಾತನಾಡಿ, ಅಂದು ಈ ಶಾಲೆ ಅತ್ಯಂತ ಹೆಚ್ಚು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಹೊಂದಿದ ಶಾಲೆಯಾಗಿತ್ತು. ಇಲ್ಲಿನ ವಿದ್ಯಾರ್ಥಿಗಳ ಕವಾಯತು, ಲೇಝೀಮ್, ಡಂಬೆಲ್ಸ್, ಸಾಂಸ್ಕೃತಿಕ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದವು ಎಂದರು.

ಶಿಕ್ಷಕರಾದ ಅಕ್ಕಮಹಾದೇವಿ ಕಲಹಾಳ, ಎಚ್. ಪ್ರಾಣೇಶ ಮಾತನಾಡಿದರು. ಶಿಕ್ಷಕರಾದ ವಿರೂಪಾಕ್ಷಪ್ಪ ಮೇಟಿ, ಸುಭಾಶ್ಚಂದ್ರ ಸಂಗಟಿ, ಅಕ್ಕಮಹಾದೇವಿ ಕಲಹಾಳ, ಶೈಲಜಾ ಜೋಷಿ, ಪರಿಮಳಾ ಕುಲಕರ್ಣಿ, ಗುಂಡಮ್ಮ ಪಾಟೀಲ, ನಾಗಮ್ಮ ಯಲಬುರ್ಗಾ, ಅಸ್ಮತ್ ಬೇಗಂ, ಸುಮನ, ದ್ರಾಕ್ಷಾಯಣಿ ಗದಗ, ದೇವಮ್ಮ ನರೇಗಲ್ಲ, ಮಹಾಂತೇಶ ಹಿರೇಮಠ, ರೇಣಕಾ ತಳವಾರ ಅವರನ್ನು ಸನ್ಮಾನಿಸಲಾಯಿತು.