ಸಾಲ ವಸೂಲಾತಿ ವೇಳೆ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋಫೈನಾನ್ಸ್‌ ವಿರುದ್ಧದ ಸುಗ್ರೀವಾಜ್ಞೆ ಸದ್ಯಕ್ಕೆ ಮುಂದಕ್ಕೆ

| N/A | Published : Jan 31 2025, 01:32 AM IST / Updated: Jan 31 2025, 07:06 AM IST

ಸಾಲ ವಸೂಲಾತಿ ವೇಳೆ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋಫೈನಾನ್ಸ್‌ ವಿರುದ್ಧದ ಸುಗ್ರೀವಾಜ್ಞೆ ಸದ್ಯಕ್ಕೆ ಮುಂದಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬೇಸತ್ತು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಗ್ರಾಮದ ಬಸವೇಶ್ವರನಗರ ನಿವಾಸಿ ಸುಬ್ರಹ್ಮಣ್ಯ (37), ಬೆಳಗಾವಿ ಜಿಲ್ಲೆ ಬೈಲಹೊಂಗಲದ ರಫೀಕ್ ತಿಗಡಿ (38) ಎಂಬುವರು ಸಾವಿಗೆ ಶರಣಾಗಿದ್ದಾರೆ.  

 ಬೆಂಗಳೂರು :   ಸಾಲ ವಸೂಲಾತಿ ವೇಳೆ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲುದ್ದೇಶಿಸಿದ್ದ ಮಸೂದೆಯ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ಬಲಿಷ್ಠ ಕಾಯ್ದೆಯನ್ನು ಶೀಘ್ರ ಜಾರಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಇದಕ್ಕಾಗಿ ಕಾನೂನು ಮತ್ತು ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳ ತಂಡ ರಚಿಸಿದ್ದು, ಮಸೂದೆಯಲ್ಲಿ ಯಾವುದೇ ತಾಂತ್ರಿಕ ಹಾಗೂ ಕಾನೂನು ಲೋಪದೋಷ ಇಲ್ಲದಂತೆ ಬಲಿಷ್ಠ ಮಸೂದೆ ಸಿದ್ಧಪಡಿಸುವಂತೆ ನಿರ್ದೇಶನ ನೀಡಲಾಗಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿ ತಾಂತ್ರಿಕ ಸಮಸ್ಯೆಗಳು ಇಲ್ಲದಂತೆ ಸುಗ್ರೀವಾಜ್ಞೆ ಜಾರಿಗೊಳಿಸುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆ ವಹಿಸಿತು. ಈ ಹಿನ್ನೆಲೆಯಲ್ಲಿ ಸಂಪುಟ ಸಭೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸುದೀರ್ಘ ಸಭೆ ನಡೆಸಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರ ಹೊರಡಿಸುವ ಸುಗ್ರೀವಾಜ್ಞೆಯಲ್ಲಿ ಯಾವುದೇ ಕಾನೂನು ಹಾಗೂ ತಾಂತ್ರಿಕ ಲೋಪ ಇರಬಾರದು. ತನ್ಮೂಲಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಆಗದಂತೆ ಬಲಿಷ್ಠ ಕಾನೂನು ರೂಪಿಸಬೇಕು ಎಂದು ನಿರ್ದೇಶನ ನೀಡಿ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಮೂಲಕ ಗುರುವಾರವೇ ಸುಗ್ರೀವಾಜ್ಞೆ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಒನ್‌ ಟೈಂ ಪರಿಹಾರ ಚರ್ಚೆ:

ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಲಾಯಿತು. ಈ ವೇಳೆ ಸಂಕಷ್ಟದಲ್ಲಿರುವ ಸಾಲಗಾರರಿಗೆ ನೆರವಾಗಲು ಸರ್ಕಾರವೇ ಸೂಕ್ತ ವ್ಯವಸ್ಥೆ ಮೂಲಕ ಮಧ್ಯಪ್ರವೇಶ ಮಾಡಬೇಕು. ದುಬಾರಿ ಬಡ್ಡಿ ವಿಧಿಸಿರುವ, ಪರವಾನಗಿ ಇಲ್ಲದ ಖಾಸಗಿ ಬಡ್ಡಿ ವ್ಯಾಪಾರಿಗೆ ಸಂಕಷ್ಟದಲ್ಲಿರುವ ಸಾಲಗಾರನಿಂದ ಅಸಲು ಮಾತ್ರ ಮರು ಪಾವತಿ ಮಾಡಿಸಿ ಒಂದು ಬಾರಿಯ ಪರಿಹಾರವಾಗಿ ಸೆಟ್ಲ್‌ಮೆಂಟ್‌ಗೆ ಅವಕಾಶ ಕಲ್ಪಿಸಬೇಕು ಎಂಬ ಬಗ್ಗೆ ಚರ್ಚೆಯಾಗಿದೆ.

ಸಾಲಗಾರರ ರಕ್ಷಣೆಗೆ ಕಾನೂನು, ತಾಂತ್ರಿಕ ಸಮಸ್ಯೆ:

ಇನ್ನು ಅಧಿಕೃತವಾಗಿ ನೋಂದಾಯಿತ ಮೈಕ್ರೋ ಫೈನಾನ್ಸ್‌ ಕಂಪನಿಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡಲಾಗದ ಸ್ಥಿತಿಯಲ್ಲಿರುವವರಿಗೆ ಕೆಲ ವಿನಾಯಿತಿ ಕೊಡಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಉದಾ: 3 ಲಕ್ಷ ರು. ಸಾಲ ಪಡೆದ ವ್ಯಕ್ತಿ ಸಾಲ ಹಾಗೂ ಬಡ್ಡಿ ಸೇರಿ 7 ಲಕ್ಷ ರು. ಪಾವತಿ ಮಾಡಬೇಕಾಗಿದ್ದಾಗ ಅಸಲು ಮೊತ್ತವನ್ನು ಮಾತ್ರ ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಅಲ್ಪ ಪ್ರಮಾಣದ ಬಡ್ಡಿ ಮಾತ್ರ ಪಾವತಿಸಲು ತಿಳಿಸಿ ಇತ್ಯರ್ಥಗೊಳಿಸಲು ತೀರ್ಮಾನಿಸಲಾಗಿದೆ.

ಆದರೆ, ಇದಕ್ಕೆ ಸಂಪುಟ ಸದಸ್ಯರಲ್ಲೇ ಆಕ್ಷೇಪ ವ್ಯಕ್ತವಾಗಿದ್ದು, ಇದು ನಿಯಮ ಬಾಹಿರ ಕ್ರಮವಾಗುತ್ತದೆ. ಅಧಿಕೃತವಾಗಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು 69,000 ಕೋಟಿ ರು. ಸಾಲ ನೀಡಿವೆ. ಅಷ್ಟು ಸುಲಭವಾಗಿ ಅವುಗಳನ್ನು ಕಟ್ಟಿ ಹಾಕಲಾಗದು. ಇನ್ನು ಸರ್ಕಾರ ಖಾಸಗಿ ಲೇವಾದೇವಿದಾರರ ಬಡ್ಡಿ ಮನ್ನಾ ಮಾಡಲು ಅವಕಾಶವಿಲ್ಲ. ಹೀಗಾಗಿ ನಿಯಮ ಬಾಹಿರ ಬಡ್ಡಿ ಎಂಬುದನ್ನು ನಿರೂಪಿಸಿ ಬಳಿಕ ಮನ್ನಾ ಮಾಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೈಕ್ರೋ ಫೈನಾನ್ಸ್‌ ಕಂಪೆನಿಗಳು ನ್ಯಾಯಾಲಯದ ಮೊರೆ ಹೋಗುತ್ತವೆ. ಆಗ ಇಡೀ ಸುಗ್ರೀವಾಜ್ಞೆಗೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತದೆ ಎಂದು ಎಚ್ಚರಿಸಿದರು.

ದುಬಾರಿ ಬಡ್ಡಿ, ಚಕ್ರಬಡ್ಡಿ, ಮೀಟರ್‌ ಬಡ್ಡಿ ವಸೂಲಿಗೆ ಖಾಸಗಿ ವ್ಯಕ್ತಿಗಳು ಸಮಾಜ ಘಾತುಕ ಶಕ್ತಿಗಳನ್ನು ಹಿಂದೆ ಇಟ್ಟುಕೊಂಡಿರುತ್ತಾರೆ. ಇಂತಹವರಿಗೆ ಹೆದರಿ ಸಾಲಗಾರರು ಮನೆ ಮಾರಿಯಾದರೂ ಸಾಲ ಮರು ಪಾವತಿ ಮಾಡುತ್ತಾರೆಯೇ ಹೊರತು ಕಾನೂನು ಆಶ್ರಯ ಪಡೆಯುವುದಿಲ್ಲ. ಕಾನೂನು ಮಾಡಿದರೆ ಅದನ್ನು ಉಳ್ಳವರೇ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಇದನ್ನು ಪುನರ್‌ ಪರಿಶೀಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಯಾವ ಇಲಾಖೆಗೆ ಹೊಣೆ ನೀಡಬೇಕು?:

ಇನ್ನು ಈ ಪ್ರಕರಣಗಳನ್ನು ಒಂದೊಂದಾಗಿ ಪರಿಶೀಲಿಸಿ ಇತ್ಯರ್ಥಗೊಳಿಸಲು ಕಂದಾಯ ಇಲಾಖೆ ಅಥವಾ ಸಹಕಾರ ಇಲಾಖೆಗೆ ಜವಾಬ್ದಾರಿ ವಹಿಸಬೇಕು ಎಂಬ ಬಗ್ಗೆ ಚರ್ಚಿಸಲಾಯಿತು. ಆದರೆ ಎರಡೂ ಇಲಾಖೆಗಳು ಈ ಕುರಿತು ಆಸಕ್ತಿ ತೋರಿಲ್ಲ ಎಂದು ತಿಳಿದುಬಂದಿದೆ.

ಸಂಕಷ್ಟದಲ್ಲಿರುವ ಸಾಲಗಾರ ತಮಗೆ ರಕ್ಷಣೆ ಒದಗಿಸುವಂತೆ ಸೆಟ್ಲ್‌ಮೆಂಟ್‌ ಅಧಿಕಾರಿಯನ್ನು ಭೇಟಿ ಮಾಡಬೇಕು. ಇದಕ್ಕಾಗಿ ತಹಸೀಲ್ದಾರ್‌ ಅವರನ್ನು ಸೆಟ್ಲ್‌ಮೆಂಟ್ ಅಧಿಕಾರಿ, ಉಪ ವಿಭಾಗಾಧಿಕಾರಿಯನ್ನು ಮೇಲ್ಮನವಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಯನ್ನು ಒಂಬುಡ್ಸ್‌ಮೆನ್‌ ಆಗಿ ನೇಮಕ ಮಾಡಬೇಕು ಎಂದು ಪ್ರಸ್ತಾಪಿಸಲಾಯಿತು.

ಒಂದೊಮ್ಮೆ ಇನ್ನು ಸಹಕಾರ ಇಲಾಖೆಗೆ ಜವಾಬ್ದಾರಿ ನೀಡಿದರೆ ಉಪವಿಭಾಗದ ಸಹಕಾರ ಸಂಘದ ನಿಬಂಧಕರು, ಉಪ ನಿಬಂಧಕರು ಹಾಗೂ ಜಂಟಿ ನಿಬಂಧಕರನ್ನು ನೇಮಿಸಲು ಚರ್ಚಿಸಲಾಯಿತು. ಆದರೆ ಎರಡೂ ಇಲಾಖೆಗಳು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರದ ಹೊಣೆಯನ್ನು ಮುಖ್ಯಮಂತ್ರಿಗಳಿಗೆ ನೀಡಲು ಸಂಪುಟ ನಿರ್ಧರಿಸಲಾಯಿತು ಎಂದು ಕಾನೂನು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಸಿಎಂ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ:

ಬಳಿಕ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬಲಿಷ್ಠ ಕಾಯ್ದೆಯನ್ನು ಆದಷ್ಟು ಬೇಗ ಜಾರಿ ಮಾಡಲು ನಿರ್ಧಾರ ಮಾಡಲಾಯಿತು. ಈ ಕುರಿತು ಕಾನೂನು ಇಲಾಖೆ, ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಿ ಯಾವುದೇ ಲೋಪದೋಷ ಇಲ್ಲದಂತೆ ಮಸೂದೆ ಮಂಡಿಸಲು ಸೂಚಿಸಲಾಯಿತು.

--ಬೈಲಹೊಂಗಲ ಪಟ್ಟಣದ ಸಾಯಿ ಮಂದಿರ ಹತ್ತಿರದ ನಿವಾಸಿ ರಫೀಕ್‌ ಬಾಬುಸಾಬ ತಿಗಡಿ ಖಾಸಗಿ ವ್ಯಕ್ತಿಗಳ ಕಡೆ ₹6 ಲಕ್ಷಕ್ಕೂ ಅಧಿಕ ಸಾಲ ಪಡೆಕೊಂಡಿದ್ದರು. ಕಿರುಕುಳಕ್ಕೆ ಬೇಸತ್ತು ತನ್ನ ಬಲೆರೋ ವಾಹನಕ್ಕೆ ನೇಣು ಬೀಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಹುಬ್ಬಳ್ಳಿ ಕಮರಿಪೇಟೆ ನಿವಾಸಿ ಮೆಹಬೂಬ ಅಲಿ ಬಕಾಲ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

- ಸುಗ್ರೀವಾಜ್ಞೆ ಬಗ್ಗೆ ಸಂಪುಟ ಚರ್ಚೆ । ಬಲಿಷ್ಠ ಕಾಯ್ದೆ ಜಾರಿ ಹೊಣೆ ಸಿಎಂಗೆ ವಹಿಸಲು ನಿರ್ಧಾರ- ಬೆನ್ನಲ್ಲೇ ಸಿದ್ದು ಸಭೆ । ಕಠಿಣವಾದ ಶಾಸನ ಶಿಫಾರಸು ಮಾಡಲು ಅಧಿಕಾರಿಗಳ ತಂಡ ರಚನೆ- ಕಾನೂನು, ತಾಂತ್ರಿಕ ಲೋಪ ಇರದಂತೆ ಸರ್ಕಾರ ಎಚ್ಚರಿಕೆ । ಹೀಗಾಗಿ ಸುಗ್ರೀವಾಜ್ಞೆ ಸ್ವಲ್ಪ ತಡ

ನಿನ್ನೆ ಆಗಿದ್ದೇನು?- ಮೈಕ್ರೋಫೈನಾನ್ಸ್‌ ಹಾವಳಿ ತಡೆಯುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಬಗ್ಗೆ ಚರ್ಚೆ- ವಿಸ್ತೃತ ಚರ್ಚೆ. ತಾಂತ್ರಿಕ ಸಮಸ್ಯೆ ಇಲ್ಲದ ರೀತಿ ಸುಗ್ರೀವಾಜ್ಞೆ ರೂಪಿಸುವ ಹೊಣೆ ಸಚಿವರಿಂದ ಸಿಎಂ ಹೆಗಲಿಗೆ- ಸಂಜೆ ಗೃಹ ಕಚೇರಿಯಲ್ಲಿ ಮತ್ತೊಂದು ಸಭೆ ಕರೆದು ಹಿರಿಯ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಮಾತುಕತೆ- ಕಾನೂನು, ತಾಂತ್ರಿಕ ಲೋಪ ಇಲ್ಲದ, ಬಲಿಷ್ಠವಾದ ಕಾನೂನು ರಚನೆಗೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ- ಮೈಕ್ರೋಫೈನಾನ್ಸ್‌, ಲೇವಾದೇವಿದಾರರು ಕೋರ್ಟ್‌ನಲ್ಲಿ ತಡೆ ತರದ ರೀತಿ ಕಾನೂನು ರೂಪಿಸಲು ಚರ್ಚೆ-ಕಾನೂನು, ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಲು ಸಭೆಯಲ್ಲಿ ತೀರ್ಮಾನ

ಹೊಸ ಶಾಸನದಲ್ಲೇನಿದೆ?- ಬಲವಂತದ ವಸೂಲಿ ಶಿಕ್ಷಾರ್ಹ ಅಪರಾಧ. ಜಾಮೀನುರಹಿತ ಬಂಧನ, ಕಠಿಣ ಶಿಕ್ಷೆ, ದಂಡ- ನೋಂದಣಿ ಪರವಾನಗಿ ಇಲ್ಲದೆ ಲೇವಾದೇವಿ ವ್ಯವಹಾರ ನಡೆಸಿದರೆ 3 ವರ್ಷದವರೆಗೆ ಶಿಕ್ಷೆ- ಸಂಕಷ್ಟದಲ್ಲಿರುವ ಸಾಲಗಾರರ ಕಿರುಕುಳ ತಪ್ಪಿಸಿ ರಕ್ಷಣೆ ಒದಗಿಸಲು ಒಂಬುಡ್ಸ್‌ಮನ್‌ಗಳ ನೇಮಕ- ದೂರು ದಾಖಲಿಸುವ ತನಕ ಕಾಯದೆ ಪೊಲೀಸರು ಸ್ವಯಂಪ್ರೇರಿತ ಕೇಸ್‌ ದಾಖಲಿಸಲು ಅವಕಾಶ- ಮೈಕ್ರೋಫೈನಾನ್ಸ್‌ ಸಂಸ್ಥೆಗಳು ಸಾಲ ನೀಡುವಾಗ ಮುಂಗಡವಾಗಿ ಬಡ್ಡಿ ಸಂಗ್ರಹ ಮಾಡುವಂತಿಲ್ಲ - 6 ಗಂಟೆ ಬಳಿಕ ವಸೂಲಿಗೆ ಹೋಗುವಂತಿಲ್ಲ, ಬಲವಂತದ ವಸೂಲಿ, ಮನೆಗೆ ಬೀಗ ಹಾಕುವಂತಿಲ್ಲ - ಕಡಿಮೆ ಅವಧಿ ಸಾಲದಲ್ಲಿ ಅಸಲು ಹಣದ ದುಪ್ಪಟ್ಟಿಗಿಂತ ಹೆಚ್ಚು ಸಾಲ ವಸೂಲಿ ಮಾಡುವಂತಿಲ್ಲ

ಬೆಂಗಳೂರುಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬೇಸತ್ತು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಗ್ರಾಮದ ಬಸವೇಶ್ವರನಗರ ನಿವಾಸಿ ಸುಬ್ರಹ್ಮಣ್ಯ (37), ಬೆಳಗಾವಿ ಜಿಲ್ಲೆ ಬೈಲಹೊಂಗಲದ ರಫೀಕ್ ತಿಗಡಿ (38) ಎಂಬುವರು ಸಾವಿಗೆ ಶರಣಾಗಿದ್ದಾರೆ. ಹುಬ್ಬಳ್ಳಿ ಕಮರಿಪೇಟೆ ನಿವಾಸಿ ಮೆಹಬೂಬ ಅಲಿ ಬಕಾಲ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಟ್ಟದಪುರದ ಸುಬ್ರಹ್ಮಣ್ಯ ನಾಲ್ಕು ದಿನ ಹಿಂದೆ ವಿಷ ಸೇವಿಸಿದ್ದರು. ಮೈಸೂರು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಮೃತಪಟ್ಟಿದ್ದಾರೆ.