ಮತ್ತಷ್ಟು ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರ ಕಿರುಕುಳಕ್ಕೆ ಬೇಸತ್ತು ನೂರಾರು ಜನ ಪರಾರಿ

| Published : Jan 16 2025, 12:48 AM IST / Updated: Jan 16 2025, 04:59 AM IST

ಮತ್ತಷ್ಟು ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರ ಕಿರುಕುಳಕ್ಕೆ ಬೇಸತ್ತು ನೂರಾರು ಜನ ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರ ಕಿರುಕುಳಕ್ಕೆ ಬೇಸತ್ತು ಚಾಮರಾಜನಗರ ಜಿಲ್ಲೆ ಕೆಲವು ಗ್ರಾಮಗಲ್ಲಿ ನೂರಾರು ಕುಟುಂಬ ಗ್ರಾಮ ತೊರೆದ ಬೆನ್ನಲ್ಲೇ ಅಂಥದೆ ಘಟನೆಗಳು ರಾಮನಗರ ಮತ್ತು ನಂಜನಗೂಡು ತಾಲೂಕಲ್ಲೂ ಜರುಗಿವೆ.

 ರಾಮನಗರ/ ನಂಜನಗೂಡು : ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರ ಕಿರುಕುಳಕ್ಕೆ ಬೇಸತ್ತು ಚಾಮರಾಜನಗರ ಜಿಲ್ಲೆ ಕೆಲವು ಗ್ರಾಮಗಲ್ಲಿ ನೂರಾರು ಕುಟುಂಬ ಗ್ರಾಮ ತೊರೆದ ಬೆನ್ನಲ್ಲೇ ಅಂಥದೆ ಘಟನೆಗಳು ರಾಮನಗರ ಮತ್ತು ನಂಜನಗೂಡು ತಾಲೂಕಲ್ಲೂ ಜರುಗಿವೆ.

ರಾಮನಗರ ತಾಲೂಕು ಕೂನಮುದ್ದನಹಳ್ಳಿ ಮತ್ತು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಊರು ಬಿಟ್ಟಿವೆ.

ಗೃಹ ಬಳಕೆ ಖರ್ಚು-ವೆಚ್ಚಗಳಿಗೆ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಹಲವರು ಸಾಲ ಪಡೆದಿದ್ದಾರೆ. ಸಾಲ ಕಟ್ಟದ್ದಕ್ಕೆ ವಸೂಲಿಗಾಗರು ಮನೆಗೇ ನುಗ್ಗಿ ಧಮಕಿ ಹಾಕಿದ್ದಾರೆ. ಹಾಗಾಗಿ ಜನರು ಊರು ತೊದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಾಮನಗರ ತಾಲೂಕಲ್ಲಿ..:ರಾಮನಗರ ತಾಲೂಕು ಕೂನಮುದ್ದನಹಳ್ಳಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಕುಟುಂಬ ಊರು ತೊರೆದಿವೆ. ಮಕ್ಕಳೂ ಹೋಗಿರುವ ಕಾರಣ ಶೈಕ್ಷಣಿಕ ಹಿನ್ನಡೆಯಾಗುತ್ತಿದೆ. ಕೆಲ ಮನೆಗಳಲ್ಲಿ ವಯೋವೃದ್ಧರು ಮಾತ್ರ ಉಳಿದಿದ್ದಾರೆ. ಊರಲ್ಲಿ ಮೌನ ಆವರಿಸಿದೆ. ಫೈನಾನ್ಸ್‌ನವರು ಕೆಲ ಮನೆಗಳಿಗೆ ನೋಟಿಸ್‌​ ಅಂಟಿಸಿದ್ದಾರೆ.

ಮೊದಲು ಒತ್ತಾಯಪೂರ್ವಕವಾಗಿ ಹಣ ನೀಡುತ್ತಾರೆ. ಕೂಲಿ ಸಿಗದ ಕಾರಣ ವಾಪಸಾತಿ ಸಾಧ್ಯವಾಗುತ್ತಿಲ್ಲ. ಫೈನಾನ್ಸವರು ಸಬೂಬು ಕೇಳದೆ ಮರು ಪಾವತಿಗೆ ಪಟ್ಟು ಹಿಡಿಯುತ್ತಿದ್ದಾರೆ. ಹೀಗಾಗಿ ಊರು ಖಾಲಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಂಜನಗೂಡು ತಾಲೂಕಲ್ಲಿ..:

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿ ಹಲವಾರು ಗ್ರಾಮಗಳಲ್ಲೂ ಕೂಡ ನೂರಾರು ಕುಟುಂಬಗಳು ಊರು ತೊರೆದಿವೆ. ಫೈನಾನ್ಸ್‌ನವರು ಕಿರುಕುಳ ಜತೆ ಕೆಲವು ಮನೆಗಳ ಬಾಗಿಲ ಮೇಲೆ ಮನೆ ಅಡಮಾನವಾಗಿದೆ ಎಂದು ಬರೆದಿದ್ದಾರೆ. ಕೆಲ ಪ್ರಕರಣಗಳಲ್ಲಿ ಮನೆಗಳಿಗೆ ಬೀಗ ಹಾಕಿ ಕುಟುಂಬ ಹೊರದಬ್ಬಿರುವ ಪ್ರಕರಣ ಸಹ ಸಂಭವಿಸಿವೆಯಂತೆ. ಗ್ರಾಮ ತೊರೆದವರು ಸಂಬಂಧಿಕರ ಮನೆ, ಬೇರೆ ಊರು ಸೇರಿದ್ದಾರೆನ್ನಲಾಗಿದೆ.

ರಾಂಪುರ ಗ್ರಾಮದ ಭೈರರಾಜು- ಪುಟ್ಟಮ್ಮ ದಂಪತಿ, ದುಂಡಮ್ಮ, ನಿಂಗಮಣಿ ಮತ್ತು ದೇವಣ್ಣ ದಂಪತಿ ಆರು ತಿಂಗಳ ಹಿಂದೆಯೇ ಮನೆ ಖಾಲಿ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶಿರಮಳ್ಳಿಯಲ್ಲಿ ಸಿದ್ಧಶೆಟ್ಟಿ ಪುಟ್ಟೀರಮ್ಮ ದಂಪತಿ, ಶಾಂತಮ್ಮ ಮತ್ತು ಶಶಿ, ಗೌರಮ್ಮ ಮತ್ತು ಸಿದ್ಧಶೆಟ್ಟಿ ದಂಪತಿ, ಭಾಗ್ಯ ಮತ್ತು ಪ್ರಭು, ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಚಾಪೆ ಮಹೇಶ ಸೇರಿ ಅನೇಕರು ಹಲವು ತಿಂಗಳಿಂದ ಎಲ್ಲಿದ್ದಾರೆಂಬುದೇ ಗೊತ್ತಿಲ್ಲ. ಕಗ್ಗಲೂರು ಗ್ರಾಮದಲ್ಲೂ ಸುಮಾರು ಏಳು ಕುಟುಂಬ ಊರು ತೊರಿದಿವೆ. ಗ್ರಾಮಸ್ಥರು ಮರಳಿ ಬರುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

ಮೈಕ್ರೋ ಫೈನಾನ್ಸ್‌ನವರು ಸಾಲಗಾರರಿಗೆ ಮಾನಸಿಕವಾಗಿ ತುಂಬಾ ಕಿರುಕುಳು ನೀಡುತ್ತಿದ್ದಾರೆ. ಊರುಬಿಟ್ಟು ಬೇರೆ ಊರಿಗೆ ಕೂಲಿ ಕೆಲಸಕ್ಕೆ ಹೋಗಿರುವವರು ಎಲ್ಲಿದ್ದಾರೆಂದು ಪತ್ತೆ ಹಚ್ಚಿ ಅಲ್ಲಿಗೂ ಹೋಗಿ ಕಿರುಕುಳ ಕೊಟ್ಟು, ಅವಮಾನಿಸುತ್ತಿದ್ದಾರೆ. ಹೀಗಾಗಿ ಮೈತ್ರಿ ಫೈನಾನ್ಸ್ ವ್ಯವಸ್ಥೆಯನ್ನು ನಿಯಂತ್ರಿಸಬೇಕು.

- ವೇದ, ಗ್ರಾಪಂ ಸದಸ್ಯರು, ರಾಮನಗರ ಜಿಲ್ಲೆ

ನಮಗೆ ಮೈಕ್ರೋ ಪೈನಾನ್ಸ್ ನವರು ತುಂಬಾ ಹಿಂಸೆ ಕೊಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಮನೆಗೆ ಬಂದು ಹಣ ಕಟ್ಟುವ ತನಕ ಮನೆ ಬಿಟ್ಟು ಹೋಗುವುದೇ ಇಲ್ಲ. ನಮಗೆ ಹಣ ಕಟ್ಟಲಾಗುತ್ತಿಲ್ಲ. ಪರಿಹಾರ ಕೊಡಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ.

- ಸಾಲ ಪಡೆದ ವ್ಯಕ್ತಿ, ರಾಮನಗರ ಜಿಲ್ಲೆ