ಸಾರಾಂಶ
ಕೊರಟಗೆರೆ : ಮೈಕ್ರೋ ಫೈನಾನ್ಸ್ ಕಂಪನಿಯವರು ಆರ್‌ಬಿಐ ಗೈಡ್‌ಲೈನ್ ಉಲ್ಲಂಘನೆ ಮಾಡಿದರೆ ಜಿಲ್ಲಾಡಳಿತ ಸುಮ್ಮನಿರಲು ಸಾಧ್ಯವಿಲ್ಲ . ಫೈವ್‌ಸ್ಟಾರ್ ಕಂಪನಿ ಮತ್ತು ಗ್ರಾಮೀಣ ಕೂಟ ವ್ಯವಸ್ಥಾಪಕರ ಮೇಲೆ ಸುಮೋಟೊ ಪ್ರಕರಣ ದಾಖಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾಹಿತಿ ನೀಡಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಹನುಮಂತಪುರ ಮತ್ತು ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಗ್ರಾಮಸ್ಥರು ಮತ್ತು ಕುಟುಂಬಸ್ಥರಿಂದ ಮಾಹಿತಿ ಪಡೆದು ಮಾತನಾಡಿದರು.ಫೈವ್‌ಸ್ಟಾರ್ ಫೈನಾನ್ಸ್ ಕುರಂಕೋಟೆಯ ಮಾರುತಿಗೆ ೨ಲಕ್ಷ ೫೦ಸಾವಿರ ಸಾಲ ನೀಡಿ ಆತನಿಂದ ೪ಲಕ್ಷ ೫೦ಸಾವಿರ ಹಣ ವಸೂಲಿ ಮಾಡಿದೆ. ನಂತರವು ಕಿರುಕುಳ ನೀಡಿ ಮನೆಯ ಗೋಡೆಯ ಮೇಲೆ ಬರೆದ ಪರಿಣಾಮ ಅವರು ಊರು ಬಿಟ್ಟಿದ್ದಾರೆ. ಹನುಮಂತಪುರದ ಮಹಿಳೆ ಮಂಗಳಮ್ಮ ಸಾಲದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಎರಡು ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಫೈವ್‌ಸ್ಟಾರ್ ಕಂಪನಿಯ ವ್ಯವಸ್ಥಾಪಕ ನಟರಾಜು, ಮೇಲ್ವಿಚಾರಕ ಮಂಜುನಾಥ್ ಮತ್ತು ಗ್ರಾಮೀಣ ಕೂಟ ಬ್ಯಾಂಕಿನ ವ್ಯವಸ್ಥಾಪಕ ನರಸಿಂಹಮೂರ್ತಿ ಹಾಗೂ ಮೇಲ್ವಿಚಾರಕಿ ಶೈಲಜಾ ಮೇಲೆ ಸುಮೋಟೋ ಕೇಸ್ ಪ್ರಕರಣ ದಾಖಲಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದು ನಾಲ್ಕು ಜನರ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ತನ್ನ ವಿಶೇಷ ಚೇತನ ಮಕ್ಕಳ ಜೊತೆ ಮನೆಬಿಟ್ಟಿದ್ದ ಕುರಂಕೋಟೆಯ ಬಡಕಾರ್ಮಿಕ ಮಾರುತಿ ಮತ್ತು ವಿನುತಳನ್ನು ತುಮಕೂರು ಜಿಲ್ಲಾಧಿಕಾರಿ ಆದೇಶದಂತೆ ಬೆಂಗಳೂರಿನಿಂದ ಕರೆಯಿಸಿ ಹಳೆಯ ಮನೆಗೆ ಸುಣ್ಣ ಬಣ್ಣ ಹೊಡೆಸಿ ಕೊರಟಗೆರೆ ತಹಸೀಲ್ದಾರ್ ಮಂಜುನಾಥ, ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ನೇತೃತ್ವದ ತಂಡ ಮತ್ತೆ ಮನೆಗೆ ಸೇರಿಸಿದರು.
ಈ ಕುರಿತು ಮಾತನಾಡಿದ ಎಸ್ಪಿ ಅಶೋಕ್ ಕೆ.ವಿ. ಹನುಮಂತಪುರ ಮತ್ತು ಕುರಂಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಲ ಮಾಡಿದ್ದವರನ್ನು ಹುಡುಕಿ ಅವರ ಮನೆಗೆ ಬಣ್ಣ ಬಳಿಸಿ ಅವರನ್ನು ಮನೆ ಸೇರಿಸಲಾಗಿದೆ. ಅದೇ ರೀತಿ ಮಂಗಳಮ್ಮ ಅವರ ಹುಷಾರಾಗಿ ಬಂದ ನಂತರ ಅವರ ಸಮಸ್ಯೆಗೆ ಪರಿಹಾರ ನೀಡಲು ಇಲಾಖೆ ಸಿದ್ಧವಿದೆ. ಯಾರಾದರೂ ಹೆದರಿಸುವ ಪ್ರಯತ್ನ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.