ಸಾರಾಂಶ
ಬೆಂಗಳೂರು : ನಗರದ ರಸ್ತೆಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಮೈಕ್ರೋ ಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.
ರಸ್ತೆ ಗುಂಡಿ ಸಮಸ್ಯೆ ಕುರಿತು ಗುರುವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಆಯಾ ವಲಯ ವ್ಯಾಪ್ತಿಯಲ್ಲಿ ಸಮಗ್ರವಾಗಿ ಮೈಕ್ರೋ ಪ್ಲಾನ್ ರೂಪಿಸಿಕೊಂಡು ರಸ್ತೆ ಗುಂಡಿಗಳನ್ನು ಕಾಲಮಿತಿಯೊಳಗಾಗಿ ಮುಚ್ಚಬೇಕು. ಆರ್ಟಿರಿಯಲ್, ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ವಲಯ ವ್ಯಾಪ್ತಿಯ ಎಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್, ಇಕೋ ಫಿಕ್ಸ್ ಬಳಸಿಕೊಂಡು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ಸಂಚಾರಿ ಪೊಲೀಸ್ ವಿಭಾಗ ನಗರದಲ್ಲಿ 4,500 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 3,621 ರಸ್ತೆ ಗುಂಡಿಗಳನ್ನು ಪಾಲಿಕೆ ವ್ಯಾಪ್ತಿಗೆ ಬರಲಿದ್ದು, ಉಳಿದ 879 ರಸ್ತೆಗಳು ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಎಲ್ಲ ರಸ್ತೆಗುಂಡಿಗಳನ್ನು ಶೀಘ್ರ ಮುಚ್ಚಬೇಕು ಎಂದರು.
ಇತ್ತೀಚಿಗೆ ಅಭಿವೃದ್ಧಿ ಪಡಿಸಿ ಗುತ್ತಿಗೆದಾರರ ಮೇಲೆ ನಿರ್ವಹಣೆ ಹೊಣೆ ಇರುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದರೆ, ಆ ರಸ್ತೆಗಳ ಗುಂಡಿಗಳನ್ನು ಗುತ್ತಿಗೆದಾರನಿಂದಲೇ ಮುಚ್ಚಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಐಎಸ್ ಮ್ಯಾಪ್ ಮೂಲಕ ಗುರುತು:
ನಗರದಲ್ಲಿ ಸಂಚಾರಿ ಪೊಲೀಸ್ ವಿಭಾಗದಿಂದ ಗುಂಡಿಗಳನ್ನು ಜಿಐಎಸ್ ಮ್ಯಾಪ್ ಮೂಲಕ ಗುರುತಿಸಲಾಗಿದ್ದು, ಆ ಗುಂಡಿಗಳನ್ನು ಮುಚ್ಚಿದ ನಂತರ ಛಾಯಾಚಿತ್ರಗಳನ್ನು ಲಗತ್ತಿಸಲಾಗುವುದು ಎಂದು ಯೋಜನಾ ವಿಭಾಗದ ಮುಖ್ಯ ಎಂಜನಿಯರ್ ಮಾಹಿತಿ ನೀಡಿದರು.
ವಿವಿಧ ಇಲಾಖೆಗಳ ಪಟ್ಟಿ ಮಾಡಿ:
ನಗರದಲ್ಲಿ ಮೆಟ್ರೋ, ಕೆಪಿಟಿಸಿಎಲ್, ಬೆಸ್ಕಾಂ, ಜಲಮಂಡಳಿ, ರಾಷ್ಟ್ರೀಯ ಹೆದ್ದಾರಿ ನಿಗಮ ಸೇರಿದಂತೆ ಇನ್ನಿತರೆ ಇಲಾಖೆಗಳು ರಸ್ತೆಯಲ್ಲಿ ಕಾಮಗಾರಿ ನಡೆಸಿ ಮತ್ತೆ ದುರಸ್ತಿ ಕಾರ್ಯ ಕೈಗೊಳ್ಳದಂತಹವುಗಳನ್ನು ಪಟ್ಟಿ ಮಾಡಿ ನೀಡಬೇಕು. ಜತೆಗೆ ಸಂಬಂಧಪಟ್ಟ ಇಲಾಖೆಗಳ ಜತೆಗೆ ಚರ್ಚೆ ಮಾಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಮುಚ್ಚಿದ ಗುಂಡಿಗಳನ್ನು ಟಿವಿಸಿಸಿ ಹಾಗೂ ಗುಣನಿಯಂತ್ರಣ ವಿಭಾಗದಿಂದ ಪರಿಶೀಲಿಸಬೇಕು ಎಂದು ರಾವ್ ಸೂಚಿಸಿದರು.
ಯೋಜನಾ ವಿಭಾಗದ ವಿಶೇಷ ಆಯುಕ್ತ ಕರೀಗೌಡ, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಎಲ್ಲ ವಲಯ ಆಯುಕ್ತರಾದ ಸತೀಶ್, ಸುರೋಳ್ಕರ್ ವಿಕಾಸ್ ಕಿಶೋರ್, ಸ್ನೇಹಲ್, ರಮ್ಯಾ, ದಿಗ್ವಿಜಯ್ ಬೋಡ್ಕೆ, ರಮೇಶ್ ಮೊದಲಾದವರಿದ್ದರು.