ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದೆ, ಕೇವಲ ಹೊಳಲು ಗ್ರಾಮದ ಹೆಣ್ಣು ಮಗಳ ಆತ್ಮಹತ್ಯೆ ಪ್ರಕರಣವೊಂದೇ ಅಲ್ಲ, ಇಡೀ ರಾಜ್ಯದ ಗ್ರಾಮೀಣ ಭಾಗಕ್ಕೆ ಈ ಸಾಲ ನೀಡಿ ಬಲವಂತದ ವಸೂಲಾತಿ ಬಗ್ಗೆ ಮಾಹಿತಿ ಇದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಆರೋಪಿಸಿದರು.ತಾಲೂಕಿನ ಹೊಳಲು ಗ್ರಾಮದಲ್ಲಿ ಕಳೆದ ಸೆ.೧೭ರಂದು ಮೈಕ್ರೋ ಫೈನಾನ್ಸ್‌ನವರು ಸಾಲ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಣಿಕೆ ಹಗ್ಗದಿಂದ ನೇಣು ಬಿಗಿದುಕೊಳ್ಳುವ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು.
ಇತ್ತೀಚೆಗೆ ಹೆಣ್ಣುಮಕ್ಕಳು ಮೈಕ್ರೋಫೈನಾನ್ಸ್ ಸೇರಿದಂತೆ ಸಣ್ಣ ಸಣ್ಣ ಖಾಸಗಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದಾರೆ. ಆದರೆ, ಸರ್ಕಾರವು ಸಾಲ ನೀಡಿ ಮಹಿಳೆಯರ ಹಾಗೂ ಬಡ ಕುಟುಂಬದವರ ನೆರವಿಗೆ ಬರುತ್ತಿತ್ತು. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಸುಮಾರು ೨೦ ಖಾಸಗಿ ಫೈನಾನ್ಸ್‌ಗಳು ಇಡೀ ಗ್ರಾಮವನ್ನೇ ಆವರಿಸಿಕೊಂಡಿದೆ. ರಾಜ್ಯದಲ್ಲಿ ಸಾವಿರಾರು ಗ್ರಾಮಗಳನ್ನೇ ಆವರಿಸಿಕೊಂಡಿವೆ ಎಂದು ನುಡಿದರು.ಮೈಕ್ರೋಫೈನಾನ್ಸ್‌ನಿಂದ ಸಾಲ ಪಡೆದ ಕೆಂಪಮ್ಮ ಅವರು ಕೇವಲ ಜಾಮೀನು ನೀಡಿದ್ದಾರೆ. ಸಂಘದವರು ಈ ಹೆಣ್ಣುಮಗಳಿಗೆ ಹಣ ಕಟ್ಟುವಂತೆಯೂ ಪೀಡಿಸಿದ್ದಾರೆ. ಸಾಲ ಪಡೆದಾಕೆ ಗ್ರಾಮವನ್ನೇ ತೊರೆದಿದ್ದಾಳೆ. ಆದರೆ, ಈ ಹೆಣ್ಣುಮಗಳಿಗೆ ಸಾಲ ಕಟ್ಟುವಂತೆ ಒತ್ತಾಯ ಮಾಡಿ ನೀನು ಸತ್ತರೆ ಇನ್‌ಶೂರೆನ್ಸ್ ಹಣ ಬರುತ್ತದೆ ಎಂದು ಹೇಳಿದ್ದಾರೆಂಬ ಆರೋಪ ಕೇಳಿಬಂದಿದೆ ಎಂದು ವಿವರಿಸಿದರು.
ಮೈಕ್ರೋ ಫೈನಾನ್ಸ್ ಅವರು ಸಾಲ ನೀಡುವುದಲ್ಲದೇ ಅವರ ಹೆಸರಿನಲ್ಲಿ ಇನ್‌ಶೂರೆನ್ಸ್ ಕೂಡ ಮಾಡಿಸಿಕೊಂಡಿದ್ದಾರೆ. ಸಾಲ ಕಟ್ಟಲಾರದೆ ಎಷ್ಟೋ ಮಹಿಳೆಯರು ಮರ್ಯಾದೆಗೆ ಅಂಜಿ ಸಾವನ್ನಪ್ಪಿದ್ದಾರೆ, ಅದೇ ರೀತಿ ಮಳವಳ್ಳಿ ತಾಲೂಕಿನಲ್ಲಿಯೂ ನಡೆದಿದೆ. ಸಾಲಕ್ಕಾಗಿ ಅಮಾಯಕರನ್ನು ಬಲಿತೆಗೆದುಕೊಂಡಿದ್ದಾರೆ, ಸಾಲ ನೀಡುವಾಗ ಅವರ ಆರ್ಥಿಕ ಪರಿಸ್ಥಿತಿ ನೋಡಿ ಸಾಲ ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.ಕಂತಿನ ಹಣದ ರೂಪದಲ್ಲಿ ಸಾಲ ಪಡೆದ ಮೇಲೆ ವಾರಕ್ಕೊಮ್ಮೆ ಕಟ್ಟಬೇಕಂತೆ, ತಪ್ಪಿದರೆ ಬಡ್ಡಿಗೆ ಬಡ್ಡಿ ಹಾಕಿ ವಸೂಲಿ ಮಾಡುತ್ತಾರೆ. ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗೋ ಅಥವಾ ಅನಾರೋಗ್ಯಕ್ಕಿಡಾದವರಿಗೆ ಚಿಕಿತ್ಸೆ ಕೊಡಿಸಲು ಸಾಲ ಪಡೆದಿರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಫೈನಾನ್ಸ್ ಅವರು ಹಣ ವಸೂಲಿಗಾಗಿ ತೀರಾ ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಏನರ್ಥ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.
ಕನ್ನಡ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಜಿ.ಮಹಾಂತಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅಂಜನಾ ಶ್ರೀಕಾಂತ್, ಗ್ರಾಮಸ್ಥರಾದ ವೇಣುಗೋಪಾಲ್, ಜಯಪ್ರಕಾಶ್, ಪ್ರಸನ್ನ, ಗ್ರಾಪಂ ಸದಸ್ಯರಾದ ಪಲ್ಲವಿ, ಸಾಲ ಪಡೆದವರಾದ ರೇಖಾ, ನಂದಿನಿ, ಲತಾ, ದಿವ್ಯಾ, ರೇಣುಕಾ, ಲಕ್ಷ್ಮೀ, ಇದ್ದರು.