ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸಗಳು ಸಾಲಗಾರರಿಂದ ಒತ್ತಾಪೂರ್ವಕವಾಗಿ ಸಾಲ ವಸೂಲಿಗೆ ಮುಂದಾಗಬಾರದು. ಆರ್.ಬಿ.ಐ ಮಾರ್ಗಸೂಚಿ 2022ರ ಅನುಸಾರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮೈಕ್ರೋ ಪೈನಾನ್ಸ್ ಸಭೆ ನಡೆಸಿದ ಅವರು, ಸಾಲಗಾರರ ಮನೆ ಬಾಗಿಲಲ್ಲಿ ಕುಳಿತುಕೊಳ್ಳುವುದು ಹಾಗೂ ಕೆಲಸ ಸ್ಥಳಗಳಿಗೆ ಹೋಗಿ ಸಾಲ ಮರುಪಾವತಿಗೆ ಪಟ್ಟುಹಿಡುವುದು, ಕಿರುಕುಳ ನೀಡುತ್ತಿರುವುದು ಕಂಡುಬರುತ್ತಿದೆ. ರಾಣಿಬೆನ್ನೂರಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮೈಕ್ರೋ ಫೈನಾನ್ಸಗಳು ಸಾಲಗಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಅವರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಅವರಿಗೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು ಎಂದು ಸೂಚಿಸಿದರು.ಮೈಕ್ರೋ ಫೈನಾನ್ಸಗಳು ಸಾಲ ನೀಡುವಾಗ ನಿಯಮಾನುಸಾರ ಮಾನದಂಡಗಳ ಪ್ರಕಾರ ಸಾಲ ನೀಡಬೇಕು. ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅರ್ಹ ವ್ಯಕ್ತಿಗಳಿಗೆ ಮಾತ್ರ ಸಾಲ ನೀಡಬೇಕು. ಯಾರದೋ ಹೆಸರಿನಲ್ಲಿ ಇನ್ನಾರಿಗೋ ಸಾಲ ನೀಡಬಾರದು. ಸಾರ್ವಜನಿಕರಿಗೆ ಸಾಲದ ಅವಶ್ಯಕತೆ ಇದ್ದರೆ ಮಾತ್ರ ಸಾಲ ವಿತರಣೆ ಮಾಡಿ. ನೀವಾಗೇ ಸಾಲ ಕೊಟ್ಟು ನಂತರ ಸಾಲ ಮರುಪಾವತಿಗೆ ಅವರಿಗೆ ಒತ್ತಡ ಹಾಕುವುದು ಸರಿಯಾದ ಕ್ರಮವಲ್ಲ ಎಂದು ಎಚ್ಚರಿಕೆ ನೀಡಿದರು. ಇದು ಮಧ್ಯಮ ಹಾಗೂ ಬಡ ವರ್ಗದ ಜನರ ಸಮಸ್ಯೆಯಾಗಿರುವುದಿಂದ ಅತ್ಯಂತ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. 2022ರ ಆರ್.ಬಿ.ಐ. ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾರ್ಗಸೂಚಿ ಅನ್ವಯ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಸಾಲ ವಸೂಲಾತಿಗೆ ಅವಕಾಶವಿದೆ. ಇದು ಬಿಟ್ಟು ಬೇರೆ ಸಮಯದಲ್ಲಿ ಹಾಗೂ ಅವರು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಅವರನ್ನು ಭೇಟಿಯಾಗಿ ಸಾಲ ವಸೂಲಿಗೆ ಮುಂದಾಗುವಂತಿಲ್ಲ. ಪದೇ ಪದೇ ಫೋನ್ ಕರೆ ಮಾಡಿ ಸಾಲಗಾರರ ಮನಸ್ಸಿಗೆ ಹಾಗೂ ಮರ್ಯಾದೆಗೆ ಕುಂದುಬರದಂತೆ ನೋಡಿಕೊಳ್ಳಬೇಕು.ಸಂಬಂಧಿಕರು, ಸ್ನೇಹಿತರಿಗೆ ಕಿರುಕುಳ ನೀಡುವುದು ಮತ್ತು ಸಾಲಗಾರರ ಹೆಸರನ್ನು ಪ್ರಕಟಿಸಬಾರದು, ಒತ್ತಾಯ ಪೂರ್ವಕವಾಗಿ ಸಾಲ ವಸೂಲಾತಿ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಮೈಕ್ರೋ ಫೈನಾನ್ಸಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿ, ಮೈಕ್ರೋ ಫೈನಾನ್ಸನವರು ಸಾಲ ವಸೂಲಾತಿಗೆ ಗ್ರಾಹಕರ ಮೇಲೆ ದೌರ್ಜನ್ಯ ನಡೆಸುವಂತಿಲ್ಲ, ಬೆದರಿಕೆ ಅಥವಾ ನಿಂದನೀಯ ಭಾಷೆ ಬಳಸಬಾರದು ಹಾಗೂ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಈಗಾಗಲೇ ರಾಣಿಬೆನ್ನೂರ ವ್ಯಾಪ್ತಿಯಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು. ಕಾನೂನು ಪ್ರಕಾರ ಸಾಲ ವಸೂಲಿಮಾಡಿ, ಸಾಲಗಾರರ ಮೇಲೆ ಮೈಕ್ರೋ ಫೈನಾನ್ಸನವರು ಅನಗತ್ಯ ದೌರ್ಜನ್ಯ ನಡೆಸುವುದು ಹಾಗೂ ವಸೂಲಾತಿಗೆ ಕಠಿಣ ವಿಧಾನಗಳಲ್ಲಿ ತೊಡಗಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಮಾತನಾಡಿ, ಜಿಲ್ಲೆಯಲ್ಲಿ 26 ಮೈಕ್ರೋ ಫೈನಾನ್ಸಗಳು ಕಾರ್ಯನಿರ್ವಹಿಸುತ್ತಿದ್ದು, ನವ ಚೇತನ ಫೈನಾನ್ಸನಡಿ ಎಲ್ಲ ಜಿಲ್ಲೆಯ ಮೈಕ್ರೋ ಫೈನಾನ್ಸಗಳು ಕಾರ್ಯನಿರ್ವಹುಸುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು. ನವಚೇತನ ಫೈನಾನ್ಸ್ ಕೊಟ್ಟೂರಗೌಡ್ರ ಮಾತನಾಡಿ, ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸಗಳು ಒತ್ತಾಯ ಪೂರ್ವಕವಾಗಿ ಸಾಲ ವಸೂಲಿ ಮಾಡದಂತೆ ಕ್ರಮವಹಿಸಲಾಗುವುದು ತಿಳಿಸಿದರು. ಜಿಲ್ಲೆಯ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.