ಸಾರಾಂಶ
ಚಿತ್ರದುರ್ಗ: ನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಹಾಸುಹೊಕ್ಕಾಗಿದ್ದು ನವಜಾತ ಶಿಶುಗಳ ಯಕೃತ್ತಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಂಶಗಳು ಕಂಡುಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ಪ್ರಧಾನ ನ್ಯಾಯಾಧೀಶೆ ಕೆ.ಬಿ.ಗೀತಾ ಕಳವಳ ವ್ಯಕ್ತ ಪಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ಸರ್ಕಾರಿ ಕಲಾ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಸೋಮವಾರ ಆಯೋಜಿಸಲಾದ ಭೂಮಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮೋಜು ಮಸ್ತಿಮಾಡಿ ಬಿಸಾಡುವ ಪ್ಲಾಸ್ಟಿಕ್‌ಗಳು ಜಲಮೂಲಗಳಿಗೆ ಸೇರಿ ಜಲಜರಗಳಿಗೆ ಕಂಟಕವಾಗಿ ಪರಿಣಮಿಸುತ್ತಿವೆ ಎಂದರು.ಪ್ಲಾಸ್ಟಿಕ್ ಬಳಕೆ ಹೆಚ್ಛಳದಿಂದಾಗಿ ಅಪಾರವಾದ ಪರಿಸರ ನಾಶದ ಜೊತೆಗೆ ಮನುಷ್ಯರ ಆರೋಗ್ಯದ ಮೇಲೂ ಮಾರಕ ಪರಿಣಾಮಗಳು ಉಂಟಾಗುತ್ತಿವೆ. ಸಮುದ್ರ ಸಾಗರಗಳಲ್ಲಿ ಅಪರೂಪದ ಜೀವರಾಶಿಗಳು ಅಳವಿನ ಅಂಚಿಗೆ ತಲುಪಿವೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಭೂಮಿ ರಕ್ಷಣೆಗೆ ಪಣತೊಡಬೇಕು. ಈ ಬಾರಿಯ ಭೂಮಿ ದಿನಾಚರಣೆಯ ಧ್ಯೇಯವಾಕ್ಯ ಪ್ಲಾನೆಟ್ ರ್ವಸಸ್ ಪ್ಲಾಸ್ಟಿಕ್ ಎಂಬುದಾಗಿದೆ. 2040ರ ವೇಳೆಗೆ ಜಾಗತಿಕವಾಗಿ ಶೇ.60ರಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಕ್ರಮೇಣವಾಗಿ ಸಂಪೂರ್ಣ ಪ್ಲಾಸ್ಟಿಕ್ ಪ್ರಪಂಚದಿಂದಲೇ ನಿರ್ಮೂಲನೆ ಮಾಡಬೇಕಿದೆ ಎಂದರು.
ಭೂಮಿಯನ್ನು ತಾಯಿ ಎಂದು ಭಾವಿಸುವ ಸಂಸ್ಕೃತಿ ನಮ್ಮಲ್ಲಿದೆ. ಭೂಮಿ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಭೂಮಿ ನಮಗೆ ಆಶ್ರಯ, ಆಹಾರ, ಫಲಪುಷ್ಪ, ಆರೋಗ್ಯಕ್ಕಾಗಿ ಸಂಜೀವಿನಿಗಳನ್ನು ನೀಡಿದೆ. ನಮ್ಮ ದುರಾಸೆಯ ಪರಿಣಾಮವಾಗಿ ಇಂದು ಭೂಮಿಯನ್ನು ಹಾಳು ಮಾಡುತ್ತಿದ್ದೇವೆ. 1970 ರಲ್ಲಿ ಮೊದಲ ಬಾರಿಗೆ ಅಂದಿನ ಅಮೇರಿಕಾದ ಸೆನಟರ್ ಗೆಲಾರ್ಡ್ ನೆಲ್ಸನ್ ಹಾಗೂ ಹಾರ್ವಡ್ ವಿವಿ ವಿದ್ಯಾರ್ಥಿ ಡೆನಿಸ್ ಹೆಯಿಸ್ ಕೈಗಾರಿಕರಣದಿಂದ ಉಂಟಾಗುತ್ತಿರುವ ಪರಿಸರ ನಾಶದ ಬಗ್ಗೆ ಅರಿವು ಮೂಡಿಸಲು ಏಪ್ರಿಲ್ 22 ರಂದು ಭೂಮಿ ದಿನಾಚರಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ಈವರೆಗೂ ಪ್ರತಿ ವರ್ಷ ಏಪ್ರಿಲ್ 22 ರಂದು ವಿಭಿನ್ನ ಧ್ಯೇಯ ವಾಕ್ಯಗಳೊಂದಿಗೆ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಪ್ರಧಾನ ನ್ಯಾಯಾಧೀಶೆ ಕೆ.ಬಿ.ಗೀತಾ ತಿಳಿಸಿದರು.ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯ ಪರಿಸರಕ್ಕೆ ಮಾತ್ರವಲ್ಲ. ನಮ್ಮ ಮತ್ತು ಭವಿಷ್ಯದ ಪೀಳಿಗೆಯ ಆರೋಗ್ಯಕ್ಕೂ ಅಪಾಯವನ್ನುಂಟುಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಸಹ ಪರಿಸರ ಸಂರಕ್ಷಣೆಯ ಅರಿವು ಹಾಗೂ ಪ್ರಜ್ಞೆ ಹೊಂದಿರುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಚಿತ್ರದುರ್ಗ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಮಾತನಾಡಿ, ಪ್ಲಾಸ್ಟಿಕ್ ಜೀವನದ ಅವಿಭಾಜ್ಯ ಅಂಗವಾಗಿದೆ. ಅತೀ ಹೆಚ್ಚಿನ ಪ್ಲಾಸ್ಟಿಕ್ ಬಳಕೆಯಿಂದ ದೇಹದ ರಕ್ತದಲ್ಲಿಯೂ ಮೈಕ್ರೋ ಪ್ಲಾಸ್ಟಿಕ್ ಸೇರಿಕೊಂಡಿದೆ. ಹಾಗಾಗಿ ನಮ್ಮ ಮನೆಯಿಂದಲೇ ಪರಿಸರ ಸಂರಕ್ಷಣೆಯ ಕಾಳಜಿ ಪ್ರಾರಂಭಬೇಕಿದೆ ಎಂದರು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಪರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಜೆಎಂಎಫ್‌ಸಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಚೈತ್ರಾ, ಉಜ್ವಲ ವೀರಣ್ಣ ಸಿದ್ದಣ್ಣವರ್, ನೇಮಚಂದ್ರ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅನಿತಾ ಕುಮಾರಿ, ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸಹನ.ಆರ್ ಹಾಗೂ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಗೀತಾ ಕುಂಬಾರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಅರಣ್ಯ ಉಪಸಂರಕ್ಷಣಾಧಿಕಾರಿ ಚಂದ್ರಣ್ಣ, ವಲಯ ಅರಣ್ಯಾಧಿಕಾರಿ ಹೆಚ್.ಉಷಾರಾಣಿ, ಆಡುಮಲ್ಲೇಶ್ವರ ಕಿರು ಮೃಗಾಲಯ ವಲಯ ಅರಣ್ಯಾಧಿಕಾರಿ ಎನ್.ವಾಸುದೇವ, ಸಹಾಯಕ ಪ್ರಾಧ್ಯಾಪಕ ಡಾ.ವಿ.ಪ್ರಸಾದ್ ಸೇರಿದಂತೆ ಇದ್ದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))