ಸಾರಾಂಶ
ನೀರು ಮತ್ತು ಊಟದಿಂದ ಹೆಚ್ಚಿನ ಕಾಯಿಲೆ ಬರುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಕಲುಷಿತ ನೀರು ಬಿಟ್ಟು ಶುದ್ಧ ನೀರು ಒದಗಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಲಕ್ಷ್ಮೇಶ್ವರ: ಪೋಷಣ ಶಕ್ತಿ ಅಭಿಯಾನದ ಪ್ರಮುಖ ರೂವಾರಿಗಳು ಬಿಸಿಯೂಟ ತಯಾರಕರು ಹಾಗೂ ಅಡುಗೆ ಸಹಾಯಕರು. ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿಗೆ ಕಾರಣೀಕರ್ತರು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಪಿ.ಎಸ್.ಬಿ.ಡಿ. ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಅಡುಗೆ ಸಹಾಯಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಸೇವಿಸಿ ಚೆನ್ನಾಗಿ ಓದುತ್ತಿರುವುದು ಸಂತೋಷದ ಸಂಗತಿಯಾಗಿದೆ. ರುಚಿಕಟ್ಟಾದ ಅಡುಗೆ ತಯಾರಿಸಿ ಬಿಸಿಯೂಟ ಬಡಿಸುವ ಕೈಗಳು ನೆಮ್ಮದಿಯಾಗಿರಲಿ. ಗುಣಮಟ್ಟದ ತರಕಾರಿ ಸಿಗುತ್ತಿಲ್ಲ ಎಂಬ ಅಡುಗೆ ತಯಾರಕರು ಕೊರಗು ನಿವಾರಿಸಲು ಪ್ರಯತ್ನಿಸಲಾಗುವುದು. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವು ಚಿಂತನೆ ನಡೆಸಿದ್ದೇವೆ. ನೀರು ಮತ್ತು ಊಟದಿಂದ ಹೆಚ್ಚಿನ ಕಾಯಿಲೆ ಬರುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಕಲುಷಿತ ನೀರು ಬಿಟ್ಟು ಶುದ್ಧ ನೀರು ಒದಗಿಸುವ ಕಾರ್ಯ ಮಾಡಬೇಕು. ಅಡುಗೆ ಸಹಾಯಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಬಿಪಿ ಮತ್ತು ಸಕ್ಕರೆ ಕಾಯಿಲೆ ಇದ್ದ ಅಡುಗೆ ಸಹಾಯಕರು ಮಾತ್ರೆಗಳನ್ನು ತಪ್ಪದೆ ಸೇವನೆ ಮಾಡಬೇಕು. ಅಡುಗೆ ಸಹಾಯಕರ ಕುಂದು-ಕೊರತೆ ನಿವಾರಿಸುವ ಕಾರ್ಯ ಸರ್ಕಾರ ಮಾಡಲಿದೆ ಎಂದು ಹೇಳಿದರು.ಈ ವೇಳೆ ಯಳವತ್ತಿ ಗ್ರಾಮದ ಅನುದಾನಿತ ಪ್ರೌಢಶಾಲೆಯಲ್ಲಿ ಶೌಚಾಲಯ ಇಲ್ಲದೆ ಇರುವುದರಿಂದ ಬಾಲಕಿಯರು ಹಾಗೂ ಅಡುಗೆ ಸಹಾಯಕರು ಮನೆಗೆ ಹೋಗಬೇಕಾದ ಅನಿವಾರ್ಯತೆ ಇದೆ ಹಾಗೂ ಅಡುಗೆ ಸಹಾಯಕರ ಸಂಬಳ ಹೆಚ್ಚಿಸಬೇಕಾಗಿದೆ ಎಂದು ಅಡುಗೆ ಸಹಾಯಕರು ಆಗ್ರಹಿಸಿದರು.
ಬಿಇಒ ಎಚ್.ಎಂ. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಡುಗೆ ಸಹಾಯಕರು ಹಸನ್ಮುಖಿಯಾಗಿ ಅಡುಗೆ ತಯಾರಿಸಿ ಊಟ ನೀಡುವ ನಿಮ್ಮ ಕಾರ್ಯ ಶ್ಲಾಘನೀಯ. ಅಡುಗೆ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಕಾರ್ಯ ನಿಮ್ಮಿಂದ ಸಾಧ್ಯವಾಗುತ್ತಿದೆ. ಆದ್ದರಿಂದ ಬಿಸಿಯೂಟ ತಯಾರಕರು ರುಚಿಕಟ್ಟಾದ ಅಡುಗೆ ತಯಾರಿಸಿ ಊಟಕ್ಕೆ ಬಡಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಬಿ.ಎಸಾ. ಹರ್ಲಾಪುರ, ಅಕ್ಷರ ದಾಸೋಹ ಅಧಿಕಾರಿ ರಾಮನಗೌಡರ, ಬಿಆರ್‌ಪಿ ಬಸವರಾಜ ಯರಗುಪ್ಪಿ, ಚಂದ್ರು ನೇಕಾರ ಇದ್ದರು. ಮುಖ್ಯೋಪಾಧ್ಯಾಯ ಎಸ್.ಕೆ. ಮಕನ್ದಾರ ಉಪನ್ಯಾಸ ನೀಡಿದರು.
ಸಿಆರ್‌ಪಿ ಚಂದ್ರು ವಡಕಣ್ಣವರ ಇದ್ದರು. ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ ಸ್ವಾಗತಿಸಿದರು.