ಸಾರಾಂಶ
ಪಾವಗಡ ರಾಮಕೃಷ್ಣ ಆಶ್ರಮ ಸ್ವಾಮಿ ಜಪಾನಂದ ತೀರ್ಮಾನ । ಎಂಪ್ರೆಸ್ ಬಾಲಕಿಯರ ಪ.ಪೂ. ಕಾಲೇಜಿನ ಹೆಣ್ಣುಮಕ್ಕಳಿಗೂ ವಿತರಣೆ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ವಿತರಿಸುವ ಮೂಲಕ ಮಹತ್ವದ ಸೇವಾ ಕಾರ್ಯ ಮಾಡುತ್ತಿರುವ ಪಾವಗಡದ ಸ್ವಾಮಿ ಜಪಾನಂದ ನೇತೃತ್ವದ ಅನ್ನಪೂರ್ಣೇಶ್ವರಿ ಆಹಾರ ಸಮಿತಿಯವರು ಎಂಪ್ರೆಸ್ ಬಾಲಕಿಯರ ಪ.ಪೂ ಕಾಲೇಜಿನ ಅರ್ಹ ವಿದ್ಯಾರ್ಥಿನಿಯರಿಗೂ ಊಟ ನೀಡಲು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಅನ್ನಪೂರ್ಣೇಶ್ವರ ಆಹಾರ ಸಮಿತಿ ಮುಖ್ಯಸ್ಥ ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಅವರು ಈ ಸಂಬಂಧ ಕಾಲೇಜಿನಲ್ಲಿ ಆಹಾರ ಸಮಿತಿ ಸದಸ್ಯರು, ದಾನಿಗಳು, ಯೋಜನೆ ಪ್ರವರ್ತಕರು ಪ್ರಾಂಶುಪಾಲರು, ಅಧ್ಯಾಪಕರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.ಈ ವೇಳೆ ಮಾತನಾಡಿದ ಶ್ರೀಗಳು, ದೇಶದಲ್ಲೆ ಪ್ರಥಮವೆಂಬಂತೆ ತುಮಕೂರು ವಿಶ್ವವಿದ್ಯಾಲಯದಲ್ಲಿ ವರ್ಷದ ಹಿಂದೆ ಆರಂಭಿಸಿದ ಯೋಜನೆಯು ಅನ್ನಪೂರ್ಣೇಶ್ವರಿ ಆಹಾರ ಸಮಿತಿಯ ಹಿರಿಯರಾದ ಎಸ್. ನಾಗಣ್ಣ, ನಟರಾಜಶೆಟ್ಟಿ, ರಮೇಶ್‌ಬಾಬು, ಕುಲಪತಿಗಳಾದ ಪ್ರೊ.ವೆಂಕಟೇಶ್ವರಲು ಮತ್ತಿತರ ಸದಸ್ಯರ ಮಾರ್ಗದರ್ಶನದಲ್ಲಿ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವರ್ಗದವರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.
ಜಿಲ್ಲೆ, ಹೊರಜಿಲ್ಲೆಯಿಂದ ಮುಂಜಾನೆಯೇ ಎದ್ದು, ಹಸಿದ ಹೊಟ್ಟೆಯಲ್ಲಿ ಕಾಲೇಜಿಗೆ ಬರುವ ಗ್ರಾಮೀಣ ಭಾಗದ 1200 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಯೋಜನೆ ಪ್ರಯೋಜನ ಪಡೆಯುತ್ತಿದ್ದು, ಒಂದು ಅಗಳನ್ನು ಹೊರ ಚೆಲ್ಲದೆ ಅನ್ನದ ಮಹತ್ವವನ್ನು ಅರಿತಿದ್ದಾರೆ. ಯೋಜನೆಯ ಯಶಸ್ಸು ಕಂಡು ಸರ್ಕಾರಿ ಜೂನಿಯರ್ ಕಾಲೇಜಿಗೂ ವಿಸ್ತರಿಸಬೇಕೆಂಬ ಕೋರಿಕೆ ಹಿನ್ನೆಲೆಯಲ್ಲಿ ಪರೀಕ್ಷಾ ಪೂರ್ವದಲ್ಲಿ 3 ತಿಂಗಳು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಎಂದು ತಿಳಿಸಿದರು.ಪ್ರಸಕ್ತ ಎಂಪ್ರೆಸ್ ಕಾಲೇಜಿನ ಹೆಣ್ಣುಮಕ್ಕಳಿಗೂ ಯೋಜನೆ ವಿಸ್ತರಿಸಬೇಕು ಎಂದು ಕಲ್ಪಾಮೃತ ತಂಡದ ಟಿ.ಎನ್.ಮಧುಕರ್, ಉಮೇಶ್, ಕೆ.ಎಸ್. ಸಿದ್ಧಲಿಂಗಪ್ಪ, ಡಾ.ಬಿ.ಎನ್.ಪ್ರಶಾಂತ್, ಅಂಬಿಕಾ ಹುಲಿನಾಯ್ಕರ್, ರಕ್ಷಿತ್ ಮತ್ತಿತರ ಸಹೃದಯರು ಮುಂದೆ ಬಂದಿದ್ದು, ಅನ್ನಪೂರ್ಣೇಶ್ವರಿ ಆಹಾರ ಸಮಿತಿ ಸದ್ಯಕ್ಕೆ ಕಾಲೇಜಿನ 500 ಮಕ್ಕಳಿಗೆ ಒದಗಿಸಲು ಶಕ್ತವಾಗಿದೆ. ಯೋಜನೆ ಆರಂಭಿಸುವುದು ಮುಖ್ಯವಲ್ಲ. ಅದನ್ನು ನಿರಂತರ ಮುಂದುವರಿಸಿಕೊಂಡು ಹೋಗಲು ಪ್ರಾಂಶುಪಾಲರು, ಸಿಬ್ಬಂದಿ ಸಹಕಾರ ವ್ಯವಸ್ಥಿತ ನಿರ್ವಹಣೆಯ ಬದ್ಧತೆಯ ಭರವಸೆ ಬೇಕು ಎಂದು ನುಡಿದರು.
ಜು.10ರಿಂದ ಸರ್ಕಾರಿ ಜೂನಿಯರ್ ಕಾಲೇಜಲ್ಲಿ ಮಧ್ಯಾಹ್ನದ ಊಟ ಪುನರಾರಂಭಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊಟ್ಟಂತೆ ಈ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಜೂನಿಯರ್ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಪುನರಾರಂಭಿಸಬೇಕೆಂಬ ಕಾಲೇಜಿನ ಪ್ರಾಂಶುಪಾಲ ರಾಜ್‌ಕುಮಾರ್, ಅಧ್ಯಾಪಕ ವೃಂದದವರ ಕೋರಿಕೆಗೆ ಸ್ವಾಮಿ ಜಪಾನಂದ, ಸಮಿತಿ ಸದಸ್ಯರಾದ ಎಸ್.ನಾಗಣ್ಣ, ನಟರಾಜಶೆಟ್ಟಿ ಇತರರು ಸಹಮತ ವ್ಯಕ್ತಪಡಿಸಿ ಜು.10ರಿಂದ ಕಾಲೇಜಿನಲ್ಲಿ ಅರ್ಹ 500 ವಿದ್ಯಾರ್ಥಿಗಳಿಗೆ ಊಟ ವಿತರಣೆ ಆರಂಭಿಸಲು ದಿನಾಂಕ ನಿಗದಿಪಡಿಸಿದರು. ತತ್ವ ಫೌಂಡೇಷನ್‌ನ ಉಮೇಶ್ ಕಾರ್ಯಕ್ರಮದ ರೂಪುರೇಷೆ ವಿವರಿಸಿದರು.
ಅನ್ನಪೂರ್ಣೇಶ್ವರಿ ಆಹಾರ ಸಮಿತಿ ಸದಸ್ಯ ಎಸ್.ನಾಗಣ್ಣ ಮಾತನಾಡಿ, ಪಾವಗಡದ ಸ್ವಾಮಿ ಜಪಾನಂದಜೀ ಅವರ ನೇತೃತ್ವದಲ್ಲಿ ವಿತರಿಸುತ್ತಿರುವ ಮಧ್ಯಾಹ್ನದ ಊಟದ ಯೋಜನೆ ಪೌಷ್ಟಿಕಾಂಶ ಕೊರತೆ ಎದುರಿಸುತ್ತಿದ್ದ ಮಕ್ಕಳ ಆರೋಗ್ಯ ವೃದ್ಧಿಗೆ ಪೂರಕವಾಗಿದ್ದು, ಬಹಳಷ್ಟು ಕಡೆ ಬೇಡಿಕೆ ಬರುತ್ತಿದೆ ಎಂದರು.ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ಸ್ವಾಮಿ ಜಪಾನಂದ ನೇತೃತ್ವದಲ್ಲಿ ಮಧ್ಯಾಹ್ನದ ಊಟ ಸಂಬಂಧ ಪೂರ್ವಭಾವಿ ಸಭೆ ನಡೆಯಿತು. ಅನ್ನಪೂರ್ಣೇಶ್ವರಿ ಆಹಾರ ಸಮಿತಿ ಪ್ರಮುಖರು, ಕಲ್ಪಾಮೃತ ತಂಡದವರು, ಕಸಾಪ ಅಧ್ಯಕ್ಷರು, ಕಾಲೇಜು ಪ್ರಾಂಶುಪಾಲರು ಹಾಜರಿದ್ದರು.