ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದು ರಾಜ್ಯದ ವಿವಿಧೆಡೆಗಳಲ್ಲಿ ನೆಲೆಸಿರುವ ವಲಸಿಗರ ಪ್ರಕರಣ ಬಹಳ ಆತಂಕಕಾರಿ ಬೆಳವಣಿಗೆ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರ ಹೊಣೆಯಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಸಂದರ್ಭ ಕುಶಾಲನಗರದಲ್ಲಿ ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್ ಅವರ ನಿವಾಸದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ದೇಶದ ಗಡಿಭಾಗಗಳಲ್ಲಿ ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಗಳ ವೈಫಲ್ಯ ಎದ್ದು ಕಾಣುತ್ತಿದೆ. ಕಳೆದ 11 ವರ್ಷಗಳ ಅವಧಿಯಲ್ಲಿ ಬಿಜೆಪಿ ಗಡಿ ಕಾಯುವಲ್ಲಿ ವೈಫಲ್ಯ ಕಾಣುತ್ತಿದೆ ಎಂದು ಆರೋಪಿಸಿದರು.ಜಿಲ್ಲೆ ಸೇರಿದಂತೆ ಹಲವಡೆ ಕಾರ್ಮಿಕರ ಸೋಗಿನಲ್ಲಿ ನೆಲೆ ಕಂಡಿರುವ ಬಾಂಗ್ಲಾ ಇತರ ದೇಶಗಳ ಪ್ರಜೆಗಳ ಸಮಸ್ಯೆಗೆ ಕೇಂದ್ರವೇ ಹೊಣೆ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದೊಂದಿಗೆ ಈ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಸಚಿವರು ತಿಳಿಸಿದರು.ಉತ್ತರ ರಾಜ್ಯಗಳ ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಕಡಿವಾಣ ಹಾಕುವ ಸಂಬಂಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ವಲಯದ ಕಾರ್ಮಿಕರಿಗೆ ಶುಭಾಶಯ ಕೋರಿದ ಸಚಿವರು, ಮೇ 1 ವಿಶ್ವದ ಎಲ್ಲೆಡೆ ಕಾರ್ಮಿಕರನ್ನು ಗೌರವಿಸುವ ದಿನವಾಗಿದೆ.ಶೇ. 90 ರಷ್ಟು ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸಲು ಅಂದಾಜು 1000 ಕೋಟಿ ಅನುದಾನದ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿ ಹಲವು ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಸಂತೋಷ್ ಲಾಡ್ ಅವರು ಮಾಹಿತಿ ನೀಡಿದರು.ಕಾರ್ಮಿಕರನ್ನು ದುಡಿಸುವ ಸಂದರ್ಭ ಮಾಲೀಕರು ಮಾನವೀಯತೆ ದೃಷ್ಟಿ ಹೊಂದಬೇಕು ಎಂದರು. ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಚಿವರು ಕೇಂದ್ರ ಸರ್ಕಾರದ ನಿರ್ಣಯಕ್ಕೆ ಪಕ್ಷಾತೀತವಾಗಿ ಜಾತ್ಯತೀತವಾಗಿ ಎಲ್ಲರೂ ಬೆಂಬಲಿಸಬೇಕಾಗಿದೆ ಎಂದರು.
ಇದರಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ನಿಲುವು ಒಂದೇ ಆಗಿದೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ವಿಷಯಗಳ ಬಗ್ಗೆ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದ ಸಂತೋಷ್ ಲಾಡ್ ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಸಮರ್ಪಕ ಪ್ರತಿಕ್ರಿಯೆ ನೀಡುವ ಮೂಲಕ ದೇಶದ ಎಲ್ಲ ಜನರಿಗೆ ಮಾಹಿತಿ ಒದಗಿಸುತ್ತದೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳು ಖಚಿತ ಸಂದೇಶಗಳು ಅಲ್ಲ ಎಂದು ಹೇಳಿದರು. ಪಾಕ್ ದಾಳಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಕೇಂದ್ರ ಸರ್ಕಾರ ಅಸಾಧ್ಯ ಎಂದು ಸಚಿವರು ಹೇಳಿದರು.