ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ‘ಕುಡುಬಿ ಜಾನಪದ ಸಮಾವೇಶ’ ಏ.27ರಂದು ಬೆಳಗ್ಗೆ 10 ಗಂಟೆಗೆ ಮಿಜಾರಿನಲ್ಲಿರುವ ಮಿಜಾರು ಅಣ್ಣಪ್ಪ ಸಭಾಂಗಣದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಕೊಂಕಣಿ ಭಾಷಿಕ ಒಟ್ಟು 42 ಪಂಗಡಗಳಲ್ಲಿ ಕುಡುಬಿ ಸಮುದಾಯವೂ ಸೇರಿದೆ. ಈ ಸಮಾಜವನ್ನು ಒಗ್ಗೂಡಿಸಿ ಅವರ ಕಲೆ, ಆಚಾರ-ವಿಚಾರ, ಸಂಸ್ಕೃತಿ, ಪರಂಪರೆ ಬಿಂಬಿಸುವಂತಹ ಜಾನಪದ ಸಮಾವೇಶ ಇದಾಗಿದೆ ಎಂದರು.
ಅಂದು ಬೆಳಗ್ಗೆ 10 ಗಂಟೆಗೆ ಮಂಗಳೂರು- ಮೂಡುಬಿದಿರೆ ಮುಖ್ಯ ರಸ್ತೆಯ ಮಿಜಾರು ದೂಮಚಡವು ಜಂಕ್ಷನ್‌ನಿಂದ ಮಿಜಾರು ಅಣ್ಣಪ್ಪ ಸಭಾಂಗಣವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಮೆರವಣಿಗೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಉದ್ಘಾಟಿಸುತ್ತಾರೆ. ನಂತರ ನಡೆಯಲಿರುವ ಸಮಾವೇಶವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಉದ್ಘಾಟಿಸುತ್ತಾರೆ. ಮೂಡುಬಿದಿರೆಯ ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲೀಕ ಶ್ರೀಪತಿ ಭಟ್, ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು ಮತ್ತಿತರರು ಹಾಜರಿರುತ್ತಾರೆ ಎಂದು ಸ್ಟ್ಯಾನಿ ಆಲ್ವಾರಿಸ್ ತಿಳಿಸಿದರು.ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಐವನ್ ಡಿಸೋಜ, ಮಂಜುನಾಥ ಭಂಡಾರಿ ಮತ್ತಿತರರು ಭಾಗವಹಿಸಲಿದ್ದಾರೆ. ಎರಡೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ವಹಿಸಲಿದ್ದಾರೆ ಎಂದರು.
ಕಲಾ ಪ್ರದರ್ಶನ:ಕೋಲಾಟ ಮತ್ತು ಗುಮಟೆ ಬಾರಿಸುವ 22 ಕುಡುಬಿ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ, 8 ಕಲಾ ತಂಡಗಳಿಂದ ಜಾನಪದ ರೂಪಕ ನೃತ್ಯ ಪ್ರದರ್ಶನವಿದೆ. ಸಭಾಂಗಣದ ಹೊರಾಂಗಣದಲ್ಲಿ ಕುಡುಬಿ ಸಮಾಜದ ಕಲೆ, ಸಂಸ್ಕೃತಿ ಆಚಾರ ವಿಚಾರಗಳನ್ನು ಬಿಂಬಿಸುವ ಸಾಂಪ್ರದಾಯಿಕ ಮಳಿಗೆಗಳು, ಕೊಂಕಣಿ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳು ಇರಲಿವೆ ಎಂದು ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಕುಡುಬಿ ಸಮಾಜಸೇವಾ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು, ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರಾದ ನವೀನ್ ಲೋಬೊ, ಸಮರ್ಥ ಭಟ್, ರೊನಾಲ್ಡ್ ಕ್ರಾಸ್ತಾ ಇದ್ದರು.