ಸಾರಾಂಶ
ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುತಮಗೆ ವರದಾನವಾಗಿ ಬಂದ ವಿಶಿಷ್ಟ ಧ್ವನಿಯನ್ನೇ ಬಳಸಿಕೊಂಡು, ಆ ವಿಶಿಷ್ಟ ಧ್ವನಿಯ ಮೂಲಕವೇ ಕನ್ನಡ ಭಾಷೆಯ ಬಗ್ಗೆ ಎಲ್ಲೆಡೆ ಪ್ರಚಾರ ನಡೆಸುತ್ತಿರುವವರು ಮೈಕ್ ಪ್ರಕಾಶ್. ‘ಕನ್ನಡ ಬಳಸಿ, ಬೆಳೆಸಿ, ಮೊಬೈಲ್ ಬಿಡಿ, ಕನ್ನಡ ಪುಸ್ತಕಗಳನ್ನು ಓದಿ’ ಎಂಬುದು ಅವರ ಭಾಷಾ ಸಂದೇಶದ ಘೋಷವಾಕ್ಯ. ಮೈಕ್ ಮೂಲಕ ಪ್ರಚಾರ ನಡೆಸುತ್ತಿರುವ ಪ್ರಕಾಶ್, ಮೈಕ್ ಪ್ರಕಾಶ್ ಎಂದೇ ಖ್ಯಾತರಾಗಿದ್ದಾರೆ.
ಮೈಸೂರಿನ ಡಾ.ರಾಜ್‌ಕುಮಾರ್ ರಸ್ತೆಯ ಶಿಕ್ಷಕರ ಬಡಾವಣೆಯ ನಿವಾಸಿ ಮೈಕ್ ಪ್ರಕಾಶ್. ಶಕ್ತಿನಗರದ ಡಾ.ರಾಜಕುಮಾರ್ ರಸ್ತೆಯ ಮೈದಾನ, ಉದ್ಯಾನದಲ್ಲಿ ಸಾರ್ವಜನಿಕರ ಸಹಕಾರದಿಂದ ರಾಷ್ಟ್ರೀಯ ಹಬ್ಬಗಳಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಾರೆ. ಈ ವೇಳೆ, ಕನ್ನಡ ಭಾಷೆ, ಕನ್ನಡ ಸಾಹಿತ್ಯದ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವ ಕೆಲಸ ಮಾಡುತ್ತಾರೆ. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಮೈಸೂರು ದಸರಾ ಮೆರವಣಿಗೆಯಂತಹ ಸಂದರ್ಭದಲ್ಲಿ ಕನ್ನಡ ಭಾಷೆ, ಕನ್ನಡ ಸಾಹಿತ್ಯದ ಬಗ್ಗೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ.ಅಲ್ಲಿ ಮಕ್ಕಳಿಗೆ, ಹಿರಿಯರಿಗೆ ‘ಕನ್ನಡ ಬಳಸಿ, ಕನ್ನಡ ಬೆಳೆಸಿ, ಕನ್ನಡ ಉಳಿಸಿ’ ಎಂಬ ಅರಿವಿನ ಪ್ರಚಾರ ಕಾರ್ಯ ಕೈಗೊಳ್ಳುತ್ತಾರೆ. ಅಲ್ಲದೇ, ವಿದ್ಯಾರ್ಥಿಗಳಿಗೆ ‘ಮೊಬೈಲ್ ಬಿಡಿ, ಕನ್ನಡ ಪುಸ್ತಕ ಹಾಗೂ ಕನ್ನಡ ಪತ್ರಿಕೆಗಳನ್ನು ಕೊಂಡು ಓದಿ’ ಎಂದು ಪ್ರಚಾರ ಮಾಡುತ್ತಾರೆ. ಈ ವೇಳೆ, ತಮಗೆ ಸಂಭಾವನೆಯಾಗಿ ಬರುವ ಹಣದಿಂದ ಕನ್ನಡ ಪುಸ್ತಕಗಳನ್ನು ಖರೀದಿಸಿ, ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಉಚಿತವಾಗಿ ಹಂಚುತ್ತಾರೆ.
ಕನ್ನಡ ಭಾಷೆಯ ಬಗೆಗಿನ ಅಭಿಮಾನದ ಅವರ ಪಯಣ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಆರಂಭವಾಯಿತು. ಪ್ರಕಾಶ್ ಅವರ ತಂದೆ ಸರ್ಕಾರಿ ನೌಕರಿಯಲ್ಲಿದ್ದರು. ಆಗ ಪ್ರಕಾಶ್ ಶಾಲೆಯಲ್ಲಿ ಓದುವಾಗ ಮೈಕ್‌ನಲ್ಲಿ ಮಾತನಾಡುವ ಹವ್ಯಾಸ ಬೆಳೆಸಿಕೊಂಡರು. ಶಾಲೆಯಲ್ಲಿ ಡಾ.ರಾಜಕುಮಾರ್ ಅವರ ‘ಬಬ್ರುವಾಹನ’ ಚಿತ್ರದ ದ್ವಿಪಾತ್ರಾಭಿನಯದ ಡೈಲಾಗ್‌ಗಳನ್ನು ಹೇಳಿಕೊಂಡು ಅಭಿನಯಿಸುತ್ತಿದ್ದರು. ಇವರ ವಾಕ್ಚಾತುರ್ಯವನ್ನು ನೋಡಿ 1980ರಲ್ಲಿ ಹಲವಾರು ರಾಜಕಾರಣಿಗಳು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಇವರನ್ನು ಕರೆದರು. ಬಳಿಕ, ಶಿಕ್ಷಣವನ್ನು ಮೊಟಕುಗೊಳಿಸಿ, ತಮಗೆ ಬಳುವಳಿಯಾಗಿ ಬಂದ ಮಾತನ್ನೇ ವೃತ್ತಿಯನ್ನಾಗಿ ಬೆಳೆಸಿಕೊಂಡು ಪ್ರಚಾರಕರ್ತರಾದರು. ನಂತರ, ತಂದೆಗೆ ವರ್ಗವಾದಾಗ ಸಾಗರ ಬಿಟ್ಟು ಬೆಂಗಳೂರಿಗೆ ಬಂದರು. ಅಲ್ಲಿ ಕೂಡ ಹಲವಾರು ಕಂಪನಿಗಳ ಪರ ಪ್ರಚಾರ ಕಾರ್ಯ ನಡೆಸಿ, ಬದುಕಿನ ಗಳಿಕೆ ಕಂಡು ಕೊಂಡರು. ಈ ವೇಳೆಯೂ ಸಾಧ್ಯವಾದಾಗಲೆಲ್ಲಾ ಕನ್ನಡ ಭಾಷೆಯ ಬಳಕೆ ಬಗ್ಗೆ ಅಲ್ಲಿನ ಜನರಲ್ಲಿ ಅಭಿಮಾನ ಮೂಡಿಸುವ ಕಾರ್ಯ ಕೈಗೊಂಡರು.ನಂತರ ಪ್ರಕಾಶ್, ಬೆಂಗಳೂರಿನಿಂದ ಮೈಸೂರಿಗೆ ಬಂದರು. ಆಗ ಲೋಕಸಭಾ ಚುನಾವಣೆ ನಡೆಯುತ್ತಿತ್ತು. ಮೈಸೂರು ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಪರ್ಧಾ ಕಣದಲ್ಲಿದ್ದರು. ಹಿರಿಯ ರಾಜಕಾರಣಿಯೊಬ್ಬರ ಮೂಲಕ ಅವರ ಪರಿಚಯವಾಗಿ ಅವರ ಪರ ಪ್ರಚಾರ ಮಾಡುತ್ತಾ ಅವರ ವಿಶ್ವಾಸಕ್ಕೆ ಪಾತ್ರರಾದರು. ಅವರು ಏನು ಉಡುಗೊರೆ ಬೇಕು ಎಂದು ಕೇಳಿದಾಗ, ‘ಸೌಂಡ್ ಸಿಸ್ಟಮ್’ ಎಂದರು. ಒಡೆಯರ್ ‘ಸೌಂಡ್ ಸಿಸ್ಟಮ್’ ಕೊಡಿಸಿದರು. ನಂತರ, ಅದರಿಂದಲೇ ಪ್ರಕಾಶ್, ತಮ್ಮ ಜೀವನ ಸಾಗಿಸತೊಡಗಿದರು.
ಚುನಾವಣಾ ಪ್ರಚಾರ, ಕಂಪನಿಗಳು, ಶೋರೂಂಗಳ ಪರ ಪ್ರಚಾರ ನಡೆಸುವಾಗಲೆಲ್ಲಾ ಸಾಧ್ಯವಾದಷ್ಟು ಕನ್ನಡ ಭಾಷೆ ಬಗ್ಗೆ ಪ್ರಚಾರ ನಡೆಸುವ ಕಾಯಕ ನಡೆಸುತ್ತಾರೆ. ನಗರ ಪೊಲೀಸ್ ಆಯುಕ್ತರಾಗಿದ್ದ ಸುನಿಲ್ ಅಗರವಾಲ್, ಡಾ.ಎಂ.ಎ.ಸಲೀಂ, ದಯಾನಂದ್, ಕೆ.ಎಲ್. ಸುಧೀರ್ ಅವರು ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮಗಳ ಪ್ರಚಾರಕ್ಕೆ, ಕನ್ನಡ ಭಾಷಾ ಪ್ರಚಾರಕ್ಕೆ ಇವರನ್ನು ಬಳಸಿಕೊಂಡಿದ್ದಾರೆ.ನಗರ, ರಾಜ್ಯದ ಇತರೆಡೆ ನಡೆಸುವ ತಮ್ಮ ಪ್ರಚಾರದ ವೇಳೆ, ಮಕ್ಕಳಿಗೆ ಪಟಾಕಿ, ಅದ್ದೂರಿ ಆಟಿಕೆಗಳನ್ನು ಕೊಡಿಸುವ ಬದಲು ಕನ್ನಡ ಪುಸ್ತಕ ಕೊಡಿಸಿ ಎಂದು ಪಾಲಕರಿಗೆ ಮನವಿ ಮಾಡಿಕೊಳ್ಳುತ್ತಾರೆ.
ತಮ್ಮ ಉಸಿರು ಇರುವವರೆಗೆ ಸಮಾಜಕ್ಕಾಗಿ, ಕನ್ನಡ ಭಾಷೆಯ ಬೆಳವಣಿಗೆಗಾಗಿ ಶ್ರಮಿಸುತ್ತೇನೆ, ಈ ನಿಟ್ಟಿನಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎನ್ನುತ್ತಾರೆ ಮೈಕ್ ಪ್ರಕಾಶ್. ‘ಪಟಾಕಿ ಸಿಡಿಸಿ, ಪರಿಸರ ಹಾಳು ಮಾಡಬೇಡಿ, ಪಟಾಕಿ ಸುಡುವ ಬದಲು ಬಡ ವಿದ್ಯಾರ್ಥಿಗಳಿಗೆ ಬಟ್ಟೆ, ಪುಸ್ತಕ ಕೊಡಿಸಿ, ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾತ ತಪ್ಪಿಸಿ, ಅಪರಾಧ ತಡೆಯಲು ಪೊಲೀಸರ ಜೊತೆ ಕೈಜೋಡಿಸಿ, ಕಂಡ ಕಂಡಲ್ಲಿ ಕಸ ಎಸೆಯಬೇಡಿ ಸ್ವಚ್ಛತೆ ಕಾಪಾಡಿ’ ಎಂಬ ಸಂದೇಶಗಳಿರುವ ಭಿತ್ತಿಚಿತ್ರಗಳನ್ನು ನಗರದ ವೃತ್ತಗಳಲ್ಲಿ ಹಾಕಿಸಿದ್ದು, ಅದರ ಕೆಳಭಾಗದಲ್ಲಿ ಉತ್ತಮ ಸಮಾಜಕ್ಕಾಗಿ, ಕನ್ನಡ ಭಾಷೆಯ ಬೆಳವಣಿಗೆಗಾಗಿ ಎಂಬ ಸಂದೇಶ ಇರುತ್ತದೆ. ಇದರ ಕೆಳಗೆ ತಮ್ಮ ಪ್ರೀತಿಯ ಮೈಕ್ ಪ್ರಕಾಶ್ ಎಂಬ ಬರಹವೂ ಇರುತ್ತದೆ.;Resize=(128,128))
;Resize=(128,128))
;Resize=(128,128))
;Resize=(128,128))