ಮಿಲಾಗ್ರಿಸ್ ಕಾಲೇಜು ವಾರ್ಷಿಕೋತ್ಸವ ಸಮಾರಂಭ

| Published : Jun 18 2024, 12:53 AM IST

ಸಾರಾಂಶ

ಮಿಲಾಗ್ರಿಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಟ್ರೈಸೆಂಟಿನರಿ ಸಭಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಕಲ್ಯಾಣಪುರ

ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಟ್ರೈಸೆಂಟಿನರಿ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ಮುಕ್ಕಾದ ಶ್ರೀನಿವಾಸ್ ಯೂನಿವರ್ಸಿಟಿಯ ಎಂಜಿನಿಯರಿಂಗ್ ಮತ್ತು ಟೆಕ್ನೋಲಜಿ ಕಾಲೇಜಿನ ಡೀನ್ ಡಾ. ಥಾಮಸ್ ಪಿಂಟೋ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆಗಳು ವೈಯಕ್ತಿಕ ಶಿಸ್ತು ಹಾಗೂ ಕಲಿಕೆಗೆ ಪೂರಕವಾದ ಶೈಕ್ಷಣಿಕ ಬುದ್ಧಿವಂತಿಕೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಕರೆ ನೀಡಿದರು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ವಂ. ಫಾ.ವಲೇರಿಯನ್ ಮೆಂಡೋನ್ಸಾ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ೨೦೨೩-೨೪ನೆ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಧನೆಗಳನ್ನು ಪ್ರಸ್ತುತ ಪಡಿಸಿದರು.

ಕಳೆದ ಮೇನಲ್ಲಿ ಕಾಲೇಜಿನಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಅನ್ನಮ್ಮ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ, ಕಿರುತೆರೆ ಕಲಾವಿದ ಅಕ್ಷತ್ ಅವರನ್ನು ಸನ್ಮಾನಿಸಲಾಯಿತು. ಉಪ ಪ್ರಾಂಶುಪಾಲರಾದ ಪ್ರೊ. ಸೋಫಿಯಾ ಡಯಾಸ್ ಅವರು ಅಭಿನಂದನಾ ಭಾಷಣ ಮಾಡಿದರು.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಗಣನೀಯ ಸಾಧನೆಗಳನ್ನು ಮಾಡಿರುವ ಶೆನ್‌ರಾಯ್ ಡಯಾಸ್, ವಿಶಾಲ್, ಗೌತಮ್ ಮತ್ತು ಅನನ್ಯಾ ಭಟ್ ಅವರಿಗೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಿಲಾಗ್ರಿಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಸವಿತಾ ಕುಮಾರಿ, ವ್ಯವಸ್ಥಾಪನ ಸಮಿತಿಯ ಸದಸ್ಯ ಮೆಲ್ವಿನ್ ಸಿಕ್ವೇರಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಮೇಸ್ತ, ವಿದ್ಯಾರ್ಥಿ ಸಂಘದ ನಿರ್ದೇಶಕ ಕಾರ್ತಿಕ್ ನಾಯಕ್ ಮತ್ತು ಡಾ. ಹರಿಣಾಕ್ಷಿ ಎಂ.ಡಿ., ಕಾರ್ಯದರ್ಶಿ ಅನನ್ಯಾ ಭಟ್ ಉಪಸ್ಥಿತರಿದ್ದರು.

ಐಕ್ಯೂಎಸಿ ನಿರ್ದೇಶಕ ಡಾ. ಜಯರಾಮ ಶೆಟ್ಟಿಗಾರ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೆನ್‌ರಾಯ್ ಡಯಾಸ್ ವಂದಿಸಿದರು. ವಿಭಾ ಮತ್ತು ಜಾಕ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.