ಜಿಲ್ಲೆಯಲ್ಲಿ ಹಾಲಿನ ಪ್ರೋತ್ಸಾಹಧನ 67 ಕೋಟಿ ರು. ಬಾಕಿ: ಮನ್ ಮುಲ್ ನಿರ್ದೇಶಕ

| Published : Jun 16 2024, 01:46 AM IST

ಜಿಲ್ಲೆಯಲ್ಲಿ ಹಾಲಿನ ಪ್ರೋತ್ಸಾಹಧನ 67 ಕೋಟಿ ರು. ಬಾಕಿ: ಮನ್ ಮುಲ್ ನಿರ್ದೇಶಕ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಸಂಬಂಧಿಸಿದ ಅಧಿಕಾರಿಗಳು, ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಒಂದು ತಿಂಗಳಲ್ಲಿ ಪ್ರೋತ್ಸಾಹ ಧನ ನೀಡದಿದ್ದಲ್ಲಿ ಹಾಲು ಉತ್ಪಾದಕರೊಂದಿಗೆ ಜೆಡಿಎಸ್-ಬಿಜೆಪಿ ಕಾರ್‍ಯಕರ್ತರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಏಳು ತಿಂಗಳಿಂದ ಜಿಲ್ಲೆಯ ಹಾಲು ಉತ್ಪಾದಕರಿಗೆ ನೀಡಬೇಕಾದ 67 ಕೋಟಿ ರು. ಪ್ರೋತ್ಸಾಹಧನವನ್ನು ರಾಜ್ಯಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಮನ್‌ಮುಲ್ ಉಪಾಧ್ಯಕ್ಷ ವಿ.ಎಸ್.ರಘುನಂದನ್ ಹೇಳಿದರು.

ರಾಜ್ಯದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗುಣಮಟ್ಟದ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ 5 ರು. ಪ್ರೋತ್ಸಾಹ ಧನ ಯೋಜನೆ ಜಾರಿಗೆ ತಂದಿದ್ದು, ಆದರೆ, ಕಾಂಗ್ರೆಸ್ ಸರ್ಕಾರ ಬಂದ ನಂತರ 2023ರ ಅಕ್ಟೋಬರ್ ತಿಂಗಳಿನಿಂದ 2024ರ - ಫೆಬ್ರವರಿವರೆಗೆ ಪ್ರೋತ್ಸಾಹ ಧನವನ್ನು ನೀಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯದಲ್ಲಿ ಒಟ್ಟಾರೆ 800 ಕೋಟಿ ರು. ಪ್ರೋತ್ಸಾಹಧನವನ್ನು ಉತ್ಪಾದಕರಿಗೆ ನೀಡಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡದೇ ದೊಡ್ಡ ಪೆಟ್ಟು ನೀಡಿದೆ ಎಂದು ದೂರಿದರು.

ಈಗಾಗಲೇ ಸಂಬಂಧಿಸಿದ ಅಧಿಕಾರಿಗಳು, ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಒಂದು ತಿಂಗಳಲ್ಲಿ ಪ್ರೋತ್ಸಾಹ ಧನ ನೀಡದಿದ್ದಲ್ಲಿ ಹಾಲು ಉತ್ಪಾದಕರೊಂದಿಗೆ ಜೆಡಿಎಸ್-ಬಿಜೆಪಿ ಕಾರ್‍ಯಕರ್ತರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಂಡ್ಯ ಹಾಲು ಒಕ್ಕೂಟದಲ್ಲಿ 1.10 ಲಕ್ಷ ಉತ್ಪಾದಕರಿದ್ದು, ಈ ಪೈಕಿ ಗುಣಮಟ್ಟದ ಹಾಲು ಪೂರೈಕೆ ಮಾಡುವ 89 ಸಾವಿರ ಮಂದಿಗೆ ಈವರೆಗೂ ಪ್ರೋತ್ಸಾಹ ಧನ ನೀಡಿಲ್ಲ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಪ್ರೋತ್ಸಾಹ ಧನ ಉತ್ಪಾದಕರ ಖಾತೆಗೆ ಹಾಕಿದ್ದೇವೆ ಎನ್ನುತ್ತಾರೆ. ಆದರೆ ಕೆಲವರಿಗೆ ಮಾತ್ರ ಹಣ ಬಂದಿದ್ದು, ಉಳಿದ ಬಹುತೇಕ ಉತ್ಪಾದಕರಿಗೆ ಹಣ ಬಂದಿಲ್ಲ ಎಂದು ದೂರಿದರು.

11 ಲಕ್ಷ ಲೀ. ಹಾಲು ಸಂಗ್ರಹ:

ಮನ್‌ಮುಲ್‌ನಲ್ಲಿ ಸದ್ಯ 11 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 5.5 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಪೌಡರ್ ಸೇರಿದಂತೆ ಉತ್ಪನ್ನಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟ ಅಥವಾ ಮಹಾಮಂಡಳಕ್ಕೆ ಅವಕಾಶ ಮಾಡಿಕೊಟ್ಟರೆ ಹೆಚ್ಚುವರಿ ದರವನ್ನು ಉತ್ಪಾದಕರಿಗೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಮಂಡ್ಯ ಹಾಲು ಒಕ್ಕೂಟದ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದು, ಅದಕ್ಕೆ ಸ್ಪಂಧಿಸಿರುವ ಕೇಂದ್ರ ಸರ್ಕಾರ ದೆಹಲಿಯಲ್ಲಿ ಮಾರಾಟ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದೆ. ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ದೆಹಲಿಯಲ್ಲಿ ಮಾರುಕಟ್ಟೆ ಒದಗಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರಿಗಳು ಸರ್ಕಾರ ಕೈಗೊಂಬೆಗಳು:

ಸಹಕಾರ ಸಂಘಗಳಲ್ಲಿ ಅಧಿಕಾರಿಗಳು ಸರ್ಕಾರ ಮತ್ತು ಸಚಿವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇಂತಹ ಧೋರಣೆ ಅನುಸರಿಸಿದಲ್ಲಿ ಎರಡೂ ಪಕ್ಷಗಳ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕಿ ರೂಪ ಅವರನ್ನು ಸಹಕಾರ ಇಲಾಖೆ ಸಹಾಯಕ ನಿಬಂಧಕರು ಏಕಾಏಕಿ ವಜಾ ಮಾಡಿ ಅವರ ಸ್ಥಾನಕ್ಕೆ ಉಸ್ತುವಾರಿ ಸಚಿವರ ಅಣತಿಯಂತೆ ಮಾರಸಿಂಗನಹಳ್ಳಿ ಹರೀಶ್ ಎಂಬುವರನ್ನು ನಿರ್ದೇಶಕರನ್ನಾಗಿ ಸರ್ಕಾರ ನಾಮಕರಣ ಮಾಡಿತ್ತು. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡಿದ -ಫಲವಾಗಿ ಎಆರ್ ಆದೇಶಕ್ಕೆ ತಡೆ ನೀಡಿ ಎಚ್ಚರಿಕೆ ನೀಡಿದ್ದು, ಇದೀಗ ಮತ್ತೆ ಬೇರೊಂದು ಕಾರಣ ನೀಡಿ ರೂಪಾ ಅವರನ್ನು ವಜಾ ಮಾಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಣಿಸಿರುವ ಹೈಕೋರ್ಟ್ ಸುಪ್ರೀಂಕೋರ್ಟ್‌ನ ಆದೇಶಾನುಸಾರ ರೂಪಾ ಅವರ ವಜಾ ಆದೇಶವನ್ನು ರದ್ದುಗೊಳಿಸಿ ಎಆರ್ ಅವರಿಗೆ ಎಚ್ಚರಿಕೆ ನೀಡಿದೆ ಎಂದು ವಿವರಿಸಿದರು.

ಇಂತಹದ್ದೇ ಘಟನೆಗಳು ಜಿಲ್ಲೆಯ ಸಹಕಾರ ಸಂಘಗಳಲ್ಲಿ ಹಾಲಿ ಸರ್ಕಾರದ ಕೈಗೊಂಬೆಯಾಗಿರುವ ಅಧಿಕಾರಿಗಳು ಮುಂದುವರಿಸಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಸಹಕಾರ ಸಂಘಗಳ ನಿಬಂಧನೆಗೊಳಪಟ್ಟು ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದರೊಂದಿಗೆ ಸಹಕಾರಿ ತತ್ವದಡಿ ಸ್ಥಾಪಿತವಾಗಿರುವ ಸಂಘಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಸುದ್ಧಿಗೋಷ್ಠಿಯಲ್ಲಿ ಮನ್‌ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರ, ರೂಪಾ, ಮಾಜಿ ನಿರ್ದೇಶಕ ನೆಲ್ಲೀಗೆರೆ ಬಾಲು, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ತಾಲೂಕು ಜಾ.ದಳ ಅಧ್ಯಕ್ಷ ಬೂದನೂರು ಸ್ವಾಮಿ, ಬಿಜೆಪಿ ನಗರಾಧ್ಯಕ್ಷ ವಸಂತ್‌ಕುಮಾರ್ ಇದ್ದರು.