ಕಲಬೆರಕೆ ಹಾಲಿನಪುಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಕ್ಕೂಟದ ಎಫ್‌ಜಿಎಸ್ ಶಾಖೆಯ ಮುಖ್ಯಸ್ಥ ಪ್ರದೀಪ್‌ಕುಮಾರ್ ಜಾಧವ್ ಅವರನ್ನು ವಿಚಾರಣೆಗಾಗಿ ಮೂರು ದಿನ ಪೊಲೀಸ್ ವಶಕ್ಕೆ ಪಡೆಯುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು

ಕಲಬೆರಕೆ ಹಾಲಿನಪುಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಕ್ಕೂಟದ ಎಫ್‌ಜಿಎಸ್ ಶಾಖೆಯ ಮುಖ್ಯಸ್ಥ ಪ್ರದೀಪ್‌ಕುಮಾರ್ ಜಾಧವ್ ಅವರನ್ನು ವಿಚಾರಣೆಗಾಗಿ ಮೂರು ದಿನ ಪೊಲೀಸ್ ವಶಕ್ಕೆ ಪಡೆಯುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಹಲವು ದಿನಗಳ ಹಿಂದೆ ಮನವಿ ಮಾಡಿದ್ದರೂ ಹಲವು ಕಾರಣಗಳಿಂದಾಗಿ ನ್ಯಾಯಾಲಯ ಅನುಮತಿ ನಿರಾಕರಣೆ ಮಾಡಿತ್ತು. ಇದೀಗ ಮೂರು ದಿನಗಳ ಅವಧಿಗೆ ಅನುಮತಿಸಿ ಷರತ್ತಿನ ಮೇರೆಗೆ ಜಾಧವ್ ಅವರನ್ನು ಪೊಲೀಸರ ವಶಕ್ಕೆ ನೀಡಿದೆ.

ಜಾಧವ್ ಮತ್ತು ನಿರ್ದೇಶಕ ಡಾಲು ರವಿ ನಡುವಿನ ಮೊಬೈಲ್ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದು ಜಾಧವ್ ಅವರನ್ನು ಪೊಲೀಸರು ವಿಚಾರಣೆಗೆ ಪಡೆಯಲು ಕಾರಣವೆಂದು ಹೇಳಲಾಗುತ್ತಿದೆ. ಇದೀಗ ಅಧಿಕಾರಿ ಜಾಧವ್ ಮತ್ತು ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಅವರನ್ನು ಮುಖಾಮುಖಿ ಕೂರಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ನಾಲ್ಕು ದಿನಗಳ ಹಿಂದೆಯೇ ಒಕ್ಕೂಟದ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರೂ ಇದುವರೆಗೂ ವಿಚಾರಣೆ ಪೂರ್ಣಗೊಂಡಿರಲಿಲ್ಲ. ಇದೀಗ ಜಾಧವ್ ಅವರನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿರುವುದರಿಂದ ಶಿವಕುಮಾರ್ ವಿಚಾರಣೆಗೆ ಹೆಚ್ಚಿನ ಮಹತ್ವ ಬಂದಂತಾಗಿದೆ.

ಪೊಲೀಸರು ನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಶಿವಕುಮಾರ್ ಅವರನ್ನು ಠಾಣೆಯಲ್ಲಿ ಕೂರಿಸಿಕೊಂಡು ಬಳಿಕ ಎಎಸ್‌ಐ ಭದ್ರತೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಇರಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಅವರನ್ನು ಬಂಧನಕ್ಕೊಳಪಡಿಸುವ ಧೈರ್ಯ ಮಾಡದ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ವಿಚಾರಣೆ ಹೆಸರಿನಲ್ಲಿ ದಿನಗಳನ್ನು ದೂಡುತ್ತಿದ್ದರು.

ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಬಂಧನಕ್ಕೊಳಗಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದೆಂಬ ಕಾರಣಕ್ಕೆ ಪ್ರಭಾವಿಗಳು ಶಿವಕುಮಾರ್ ಬಂಧನವನ್ನು ತಡೆಯುತ್ತಲೇ ಬಂದಿದ್ದರು. ಇದರ ನಡುವೆ ಯು.ಸಿ.ಶಿವಕುಮಾರ್ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದ್ದು, ಅದನ್ನೂ ನ್ಯಾಯಾಲಯ ಪುರಸ್ಕರಿಸದಿರುವುದರಿಂದ ಶಿವಕುಮಾರ್ ಕಾನೂನು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಜನ್ಮದಿನದಂದೂ ಬಿಡುವು ನೀಡದೆ ‘ಡ್ರಿಲ್’!

ಹಾಲಿನ ಪುಡಿ ಕಲಬೆರಕೆ ಪ್ರಕರಣದ ಪ್ರಮುಖ ಆರೋಪ ಎದುರಿಸುತ್ತಿರುವ ಮನ್‌ಮುಲ್‌ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ ಅವರಿಗೆ ಪೊಲೀಸರು ಶನಿವಾರವೂ ಬಿಡುವಿಲ್ಲದೆ ವಿಚಾರಣೆಯ ಡ್ರಿಲ್ ನಡೆಸಿದ್ದಾರೆ.

ವಿಶೇಷವೆಂದರೆ, ಶನಿವಾರ ಶಿವಕುಮಾರ್ ಅವರ ಜನ್ಮದಿನವಾಗಿತ್ತು. ಆದಾಗ್ಯೂ, ಕಳೆದ ನಾಲ್ಕು ದಿನದಿಂದ ನಿರಂತರ ವಿಚಾರಣೆ ಎದುರಿಸುತ್ತಿರುವ ಅವರಿಗೆ ಹುಟ್ಟುಹಬ್ಬದ ದಿನವೂ ಯಾವುದೇ ರಿಯಾಯಿತಿ ಸಿಗಲಿಲ್ಲ.ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಮನ್ಮಲ್ ಅಧಿಕಾರಿ ಪ್ರದೀಪ್ ಜಾಧವ್ ನೀಡಿದ ಹೇಳಿಕೆಗಳ ಆಧಾರದ ಮೇಲೆ, ಮದ್ದೂರು ಪೊಲೀಸರು ಜಾಧವ್ ಹಾಗೂ ಶಿವಪ್ಪ ಇಬ್ಬರನ್ನೂ ಮುಖಾಮುಖಿ ಕೂರಿಸಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ.

ಠಾಣೆಗೆ ಪ್ರಭಾವಿ ವಕೀಲರ ಭೇಟಿ:ಶನಿವಾರ ಸಂಜೆ ವೇಳೆಗೆ ಜಿಲ್ಲೆಯ ಪ್ರಭಾವಿ ವಕೀಲರೊಬ್ಬರ ನೇತೃತ್ವದ ತಂಡ ಮದ್ದೂರು ಪೊಲೀಸ್ ಠಾಣೆಗೆ ಭೇಟಿ ನೀಡಿದೆ. ಇಂದು ಶಿವಪ್ಪ ಅವರ ಹುಟ್ಟುಹಬ್ಬದ ಕಾರಣ ವಿಚಾರಣೆಯನ್ನು ನಾಳೆಗೆ ಕಾಯ್ದಿರಿಸಿ, ಅವರನ್ನು ಮನೆಗೆ ಕಳುಹಿಸಿಕೊಡಬೇಕು ಎಂದು ವಕೀಲರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ವಿಚಾರಣೆಯ ತೀವ್ರತೆ ಕಾಯ್ದುಕೊಂಡಿರುವ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ.