ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸುವ ಮೂಲಕ ರಾಜ್ಯದ ಜನತೆಗೆ ಉಡುಗೊರೆ ನೀಡಿದೆ. ಕೆಲವೇ ದಿನಗಳಲ್ಲಿ ಬಸ್ಸು ಪ್ರಯಾಣ ದರವನ್ನೂ ಹೆಚ್ಚಿಸುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

- ಗ್ರಾಹಕರಿಗೆ ಹೊರೆ ಹೇರುವ ಬದಲು ರಾಜ್ಯ ಸರ್ಕಾರವೇ ನೀಡಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಲಹೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸುವ ಮೂಲಕ ರಾಜ್ಯದ ಜನತೆಗೆ ಉಡುಗೊರೆ ನೀಡಿದೆ. ಕೆಲವೇ ದಿನಗಳಲ್ಲಿ ಬಸ್ಸು ಪ್ರಯಾಣ ದರವನ್ನೂ ಹೆಚ್ಚಿಸುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಹೀಗೆ ಬೆಲೆ ಏರಿಸುವ ತೀರ್ಮಾನ ಮಾಡುತ್ತಿರಲಿಲ್ಲ. ಬರಗಾಲದ ಪರಿಸ್ಥಿತಿಯಲ್ಲಿ ಬರೆ ಎಳೆಯು ಸ್ಥಿತಿ ಏಕೆ ಬಂದಿತು? ರೈತರಿಗೆ ಪ್ರೋತ್ಸಾಹಧನ ನೀಡುವುದನ್ನು ಸ್ವಾಗತಿಸುತ್ತೇವೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ₹2 ಸಹಾಯಧನ ನೀಡಿದ್ದರು. ಆದರೆ, ಈ ಭಾರವನ್ನು ಗ್ರಾಹಕರ ಮೇಲೆ ಹಾಕುವ ಕೆಲಸವನ್ನು ಮಾಡಿರಲಿಲ್ಲ. ಆದರೆ, ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಜನರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ದೂರಿದರು.

ರೈತರಿಗೆ ಲೀ. ಹಾಲಿಗೆ 7 ರು. ನೀಡುವ ವಿಚಾರವನ್ನು ಸ್ವಾಗತಿಸುತ್ತೇವೆ. ಆದರೆ, ಇದರ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹೇರುವುದು ಸರಿಯಲ್ಲ. 3 ವರ್ಷಗಳಿಂದ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳ ಮಾಡಿದರು. ಮದ್ಯದ ದರ ಹೆಚ್ಚಿಸಿದರು. ಆಸ್ಪತ್ರೆಯಲ್ಲೂ ಎಲ್ಲದರ ವೆಚ್ಚ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ವಾಹನಗಳ ಪಾರ್ಕಿಂಗ್‌ಗೂ ದರ ನಿಗದಿಪಡಿಸಿದ್ದಾರೆ. ಗಾಳಿ ಬಿಟ್ಟು ಉಳಿದೆಲ್ಲಾ ವಸ್ತುಗಳ ಮೇಲೆ ಬೆಲೆ ಏರಿಸಲಾಗಿದೆ. ಮದುವೆ ಆಗದವರು ಮಕ್ಕಳನ್ನು ಮಾಡಿಕೊಳ್ಳಲು ಯೋಚಿಸುವಷ್ಟು ದುಬಾರಿಯಾಗಿದೆ. ಜನಸಾಮಾನ್ಯರ ಮೇಲೆ ಬರೆ ಎಳೆಯುವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲು ನಿಲ್ಲಿಸಲಿ. ರೈತರಿಗೆ ನೀಡುವ ಪ್ರೋತ್ಸಾಹಧನವನ್ನು ಜನರ ಮೇಲೆ ಬರೆ ಎಳೆಯುವ ಬದಲಿಗೆ, ಸರ್ಕಾರವೇ ಭರಿಸಲಿ ಎಂದು ಸಲಹೆ ನೀಡಿದರು.

ನೂತನ ಎಂಎಲ್‌ಸಿ ಕೆ.ಎಂ.ಸುರೇಶ ಸೋಮೇಶ್ವರ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ನಿಕಟ ಪೂರ್ವ ಅಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಲಕ್ಷ್ಮಣ, ಅಣಜಿ ಅಣ್ಣೇಶ, ಪಿ.ಸಿ.ಶ್ರೀನಿವಾಸ ಭಟ್, ಹರೀಶ ಶಾಮನೂರು, ಆರ್.ಎಲ್.ಶಿವಪ್ರಕಾಶ, ಹಿರಿಯ ವಕೀಲ ಮಂಜಪ್ಪ ಕಾಕನೂರು, ಅನಿಲಕುಮಾರ ನಾಯ್ಕ, ಅಣಬೇರು ಶಿವಮೂರ್ತಿ ಇತರರು ಇದ್ದರು.

- - -

(ಬಾಕ್ಸ್‌-1)

* ಅರಾಜಕತೆ ಸೃಷ್ಟಿಗೆ ರಾಗಾ, ಕಾಂಗ್ರೆಸ್ ಯತ್ನ

- ಬಿಜೆಪಿಯಿಂದ ರಾಜ್ಯವ್ಯಾಪಿ ಅಭಿಯಾನ: ಬಿವೈವಿ

ದಾವಣಗೆರೆ: ದೇಶಾದ್ಯಂತ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನವನ್ನು ಮಾಡುತ್ತಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ ದ್ವಿವೇದಿ ಪಾದಾಯಾತ್ರೆಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಜ್ಯದ ಯುವಜನರನ್ನು ಎಚ್ಚರಗೊಳಿಸುವ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹೆಚ್ಚಳದಿಂದ ರಾಹುಲ್ ಗಾಂಧಿಗೆ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡುವ ಷಡ್ಯಂತ್ರ ಕಾಂಗ್ರೆಸ್ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷವು ಸಿಜೆಪಿ, ಕಮ್ಯುನಿಷ್ಟ್ ಪಕ್ಷಗಳ ಸಹಕಾರವನ್ನು ಪಡೆದು, ಇಡೀ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ದುಷ್ಕೃತ್ಯಕ್ಕೆ ಮುಂದಾಗಿದೆ. ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನವನ್ನು ನಾವು ರಾಜ್ಯದಲ್ಲಿ ಕೈಗೊಳ್ಳುತ್ತಿದ್ದೇವೆ. ಪಾದಯಾತ್ರೆ, ಪ್ರಬುದ್ಧರು, ಪ್ರಜ್ಞಾವಂತರು, ವಿದ್ಯಾರ್ಥಿ, ಯುವಜನರೊಂದಿಗೆ ಸಂವಾದ ಮಾಡುತ್ತೇವೆ. ಎನ್‌ಡಿಎ ಸರ್ಕಾರದ ಸಾಧನೆಯನ್ನು ಜನರ ಮುಂದಿಡುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.

- - -

(ಬಾಕ್ಸ್‌-2)

* ಈ ನನ್‌ ಮಕ್ಕಳಿಗೆ ಮಾನ ಮರ್ಯಾದೆ ಇದೆಯಾ?: ವಿಜಯೇಂದ್ರ ವಾಗ್ದಾಳಿ

- ಮೀಸಲಾತಿ ಹೆಚ್ಚಳ ಕಾಯ್ದೆ ರದ್ದತಿಗೆ ಮೋದಿ ಟೀಂ ಕಾರಣವೆಂಬ ಉಗ್ರಪ್ಪ ಹೇಳಿಕೆಗೆ ಕಿಡಿ

ದಾವಣಗೆರೆ: ಮೀಸಲಾತಿ ಹೆಚ್ಚಳ ಕಾಯ್ದೆ ರದ್ದುಪಡಿಸಿದ ನ್ಯಾಯಾಲಯದ ಕ್ರಮಕ್ಕೆ ನರೇಂದ್ರ ಮೋದಿ ಮತ್ತು ಟೀಂ ಕಾರಣವೆಂದು ಯಾರು ಹೇಳಿದ್ದು? ಇವರಿಗೆ ಮಾನ ಮರ್ಯಾದೆ ಇದೆಯಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್‌ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಿರುದ್ಧ ಹರಿಹಾಯ್ದರು.

ಒಟ್ಟಾರೆ ಮೀಸಲಾತಿ ಶೇ.56ಕ್ಕೆ ಹೆಚ್ಚಿಸುವ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಟೀಂ ಕಾರಣ ಎನ್ನುವುದು ಎಷ್ಟು ಸರಿ. ನ್ಯಾಯಾಲಯದಲ್ಲಿ ಸೂಕ್ತ ವಾದ ಮಂಡನೆ ಮಾಡಬೇಕಾಗಿತ್ತು. ಕಪಟ ನಾಟಕ ಮಾಡಿ, ಗೊಂದಲ ಸೃಷ್ಟಿಸಿದವರೇ ಕಾಂಗ್ರೆಸ್ಸಿನವರು. ಕೇವಲ ಕಪಟ ನಾಟಕ ಮಾಡಿ, ಈಗ ನರೇಂದ್ರ ಮೋದಿ ಬಗ್ಗೆ ಹೇಳುವುದಕ್ಕೆ ಹೊರಟಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಸದ್ಬಳಕೆ ಮಾಡಕೊಳ್ಳದೇ, ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡನೆ ಮಾಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಬ್ಬಿನ ವಿಚಾರದಲ್ಲಿ ವಿಶೇಷ ವಿಮಾನದೊಂದಿಗೆ ಬೆಳಗಾವಿಗೆ ಹಾರಿಹೋಗಿದ್ದರು. ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ ₹15 ಸಾವಿರ ಕೋಟಿ ಬರುತ್ತದೆ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಮೊದಲು ಬಗೆಹರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರನ್ನು ಭೇಟಿ ಮಾಡಲು ಸ್ಪೀಡಾಗಿ ಮುಖ್ಯಮಂತ್ರಿ ಹೋಗಿದ್ದರು. ಸಿಎಂ ಹೋದ ವೇಗ ನೋಡಿ ಅಲ್ಲಿಯೇ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಪಡಿಸುತ್ತಾರೆ ಅಂದುಕೊಂಡಿದ್ದೆವು. ಆದರೆ, ಯಾವುದೇ ಸಮಸ್ಯೆಯನ್ನೂ ಸಿಎಂ ಬಗೆಹರಿಸಲಿಲ್ಲ. ಎಲ್ಲದಕ್ಕೂ ಗ್ಯಾರಂಟಿ ನೆಪ ಹೇಳಿಕೊಂಡು ಸುತ್ತಾಡುತ್ತಿದ್ದಾರೆ. ನಾವು ಶ್ವೇತಪತ್ರ ಹೊರಡಿಸುವಂತೆ ಆಗ್ರಹ ಮಾಡಿದ್ದೆವು. ಆದರೆ, ಬೆಳಗಾವಿಯಲ್ಲಿ ಸಿಎಂ ಖಾಲಿ ಜೇಬನ್ನು ತೋರಿಸಿದರು. ಇದಕ್ಕಿಂತ ಶ್ವೇತಪತ್ರ ಯಾವುದು ಬೇಕು? ರಾಜ್ಯದ ಖಜಾನೆ ಖಾಲಿ ಆಗಿರುವ ಬಗ್ಗೆ ಸಿಎಂ ಆಡಿರುವ ಮಾತುಗಳು ಮುನ್ಸೂಚನೆಯಾಗಿವೆ ಎಂದು ವ್ಯಂಗ್ಯವಾಡಿದ ವಿಜಯೇಂದ್ರ, ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ ಎಂದು ಹೇಳಿದರು.

- - -

(ಕೋಟ್‌)

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಡ್ರಾಮಾ ಬಾಜಿ ಮಾಡಿಕೊಂಡು ಸುತ್ತಾಡುತ್ತಿದ್ದಾರೆ. ಐಟಿ- ಬಿಟಿಯಲ್ಲಿ ಕನ್ನಡಿಗರಿಗೆ ಹುದ್ದೆಗಳನ್ನು ಕೊಡಬೇಕೆಂಬ ಮಾತನ್ನು ಸ್ವಾಗತಿಸುತ್ತೇನೆ. ಆದರೆ, ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ತುಂಬಲು ಯಾಕೆ ಆಗಿಲ್ಲ?

- ಬಿ.ವೈ.ವಿಜಯೇಂದ್ರ, ರಾಜ್ಯಾಧ್ಯಕ್ಷ, ಬಿಜೆಪಿ.

- - -

-31ಕೆಡಿವಿಜಿ2: ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.