ಹಾಲು-ಮೊಸರಿನ ದರವನ್ನು ಏಕಾಏಕಿ ಹೆಚ್ಚಿಸಿದ ರಾಜ್ಯದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಬ್ಲಾಕ್ ಟೀ ಕಾಯಿಸುವ ಮೂಲಕ ಬಿಜೆಪಿ ಮಹಿಳಾ ಮೋರ್ಚಾದಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು.
- ಬೆಲೆ ಏರಿಕೆಗೆ ಹಾಲೆರೆದ ಡಿಕೆಶಿ ಸರ್ಕಾರ ವಿರುದ್ಧ ಮಹಿಳಾ ಮೋರ್ಚಾ ಆಕ್ರೋಶ । ಎಸಿ ಮುಖೇನ ಸರ್ಕಾರಕ್ಕೆ ಮನವಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆಹಾಲು-ಮೊಸರಿನ ದರವನ್ನು ಏಕಾಏಕಿ ಹೆಚ್ಚಿಸಿದ ರಾಜ್ಯದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಬ್ಲಾಕ್ ಟೀ ಕಾಯಿಸುವ ಮೂಲಕ ಬಿಜೆಪಿ ಮಹಿಳಾ ಮೋರ್ಚಾದಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು.
ನಗರದ ಬಿಜೆಪಿ ಜಿಲ್ಲಾ ಕಚೇರಿ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಗಾಂಧಿ ವೃತ್ತ, ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಎಸಿ ಕಚೇರಿ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೇತನಾ ಶಿವಕುಮಾರ ಈ ವೇಳೆ ಮಾತನಾಡಿ, ಹಾಲು, ಮೊಸರು, ಪನ್ನೀರು ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ರಾಜ್ಯದ ಬಡವರು, ಕಡು ಬಡವರು, ಮಧ್ಯಮ ವರ್ಗದ ಜನರ ಗಾಯದ ಮೇಲೆ ಬರೆ ಹಾಕುವ ಕೆಲಸ ಮಾಡಿದೆ. ಹೈನುಗಾರಿಕೆಗೆ ಪ್ರೋತ್ಸಾಹಿಸು ಸರ್ಕಾರ ತನ್ನ ಬೊಕ್ಕಸದಿಂದ ಸಹಾಯಧನ ನೀಡಬೇಕಿತ್ತು. ಅದರ ಬದಲು, ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರವಿದ್ದಾಗ ರೈತರಿಗೆ ನೀಡುತ್ತಿದ್ದ ಕೃಷಿ ಸಮ್ಮಾನ್ ಹೆಚ್ಚುವರಿ ಅನುದಾನ ಹಾಗೂ ರೈತರ ಮಕ್ಕಳ ವಿದ್ಯಾನಿಧಿ ಅನುದಾನವನ್ನೇ ಈಗಿನ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ತಕ್ಷಣವೇ ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಿಸಿದ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಅಲ್ಲದೇ, ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮೋರ್ಚಾ ಉಪಾಧ್ಯಕ್ಷೆ ಎಚ್.ಸಿ.ಜಯಮ್ಮ ಮಾತನಾಡಿ, ಹೆಚ್ಚುತ್ತಿರುವ ಅಪೌಷ್ಟಿಕತೆಯ ಮಧ್ಯೆಯೂ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರ ಬದುಕಿನಲ್ಲೂ ಹಾಲು ಮತ್ತು ಹಾಲಿನ ಉತ್ಪನ್ನಗಳು ಆಸರೆಯಾಗಿವೆ. ಈಗ ಹಾಲಿನ ಬೆಲೆಯನ್ನು ಹೆಚ್ಚಿಸುವ ಮೂಲಕ ಬೆಲೆ ಏರಿಕೆಯ ಹಾಲಾಹಲವನ್ನೇ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸೃಷ್ಟಿ ಮಾಡಿದೆ. ಹಾಲಿನ ದರವನ್ನು ಮಿತಿ ಇಲ್ಲದೇ ಏರಿಸಿರುವುದು ಕೂಲಿ ಮಾಡುವ ಬಡವರು, ಸಾಮಾನ್ಯ ಜನರು ಹಾಲು ಖರೀದಿಸಲಾಗದೇ, ಬ್ಲ್ಯಾಕ್ ಟೀ ಸೇವಿಸುವ ಸ್ಥಿತಿಗೆ ನೂಕಿದೆ ಎಂದು ದೂರಿದರು.
ಒಬ್ಬ ಬಡ ವ್ಯಕ್ತಿ ದಿನಕ್ಕೆ ₹300 ದುಡಿದರೆ ಅದರಲ್ಲೆ ಅರ್ಧ ಲೀಟರ್ ಹಾಲಿಗೆ ₹50, ನಿತ್ಯದ ಉಪಯೋಗಿ ವಸ್ತುಗಳಿಗೆ ಹೆಚ್ಚು ಹಣ ನೀಡಿದರೆ ಆತ ಮತ್ತು ಆತನ ಕುಟುಂಬ ಜೀವನ ಮಾಡುವುದು ಹೇಗೆ? ಹೆಂಡತಿ, ಮಕ್ಕಳು, ಕುಟುಂಬದ ಹಿರಿಯರನ್ನು ಸಾಕುವುದು ಹೇಗೆ? ಮನೆ ಬಾಡಿಗೆ, ಇತರೆ ಖರ್ಚು, ವೆಚ್ಚಕ್ಕೆ ಏನು ಮಾಡಬೇಕು? ಹಾಲಿನ ದರವಷ್ಟೇ ಅಲ್ಲ, ಶೀಘ್ರವೇ ಬಸ್ಸು ಪ್ರಯಾಣ ದರ ಹೆಚ್ಚಿಸುವುದಕ್ಕೂ ಕಾಂಗ್ರೆಸ್ ಸರ್ಕಾರ ತುದಿಗಾಲ ಮೇಲೆ ನಿಂತಿದೆ. ಡಿ.ಕೆ. ಶಿವಕುಮಾರ ಸರ್ಕಾರವು ಎಲ್ಲದರ ಬೆಲೆ ಏರಿಕೆಗೆ ಹಾಲೆರೆಯುವ ಕೆಲಸ ಮಾಡಿದ್ದು, ಮುಂದೆ ಇನ್ನೂ ಏನೇನು ಹೆಚ್ಚಳವಾಗುತ್ತದೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಪಂಚ ಗ್ಯಾರಂಟಿ ಪಂಚ ಗ್ಯಾರಂಟಿ ಅಂತಾ ಕಾಂಗ್ರೆಸ್ ಸರ್ಕಾರ ಬಡ ಬಡಾಯಿಸುತ್ತದೆ. ಆದರೆ, ಗ್ಯಾರಂಟಿಯಡಿ ₹2 ಸಾವಿರಗಳನ್ನೇ ಮಹಿಳೆಯರಿಗೆ ಸರಿಯಾಗಿ ನೀಡುತ್ತಿಲ್ಲ. ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಮಾಸಾಶನಗಳು ಫಲಾನುಭವಿಗಳಿಗೆ ಸರಿಯಾಗಿ ಸಿಗುತ್ತಿಲ್ಲ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು, ಹಾಲಿನ ದರ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು. ಸದಾ ಬೊಬ್ಬೆ ಹೊಡೆಯುತ್ತಿದ್ದ ಕಾಂಗ್ರೆಸ್ ಪಕ್ಷದ ಯಾರೊಬ್ಬರೂ ಹಾಲಿನ ದರ ಹೆಚ್ಚಳದ ಬಗ್ಗೆ ಧ್ವನಿ ಯಾಕೆ ಎತ್ತುತ್ತಿಲ್ಲ ಎಂದು ಕುಟುಕಿದರು.
ಪಕ್ಷದ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಲಕ್ಷ್ಮಣ, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ, ದಕ್ಷಿಣ ಅಧ್ಯಕ್ಷ ಮಟ್ಟಿಕಲ್ಲು ಕರಿಬಸಪ್ಪ, ಉತ್ತರ ಅಧ್ಯಕ್ಷ ತಾರೇಶ ನಾಯ್ಕ, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ, ಕಲಾವತಿ, ಮಮತಾ, ಅಶ್ವಿನಿ ಕೃಷ್ಣ, ನೀತಾ ನಂದೀಶ, ಶಾರದಾ ರಾಯ್ಕರ್, ರೇಣುಕಮ್ಮ, ದಾಕ್ಷಾಯಣಮ್ಮ, ಆಲೂರು ನಿಂಗರಾಜ, ಶಿವನಗೌಡ ಟಿ.ಪಾಟೀಲ, ಟಿಂಕರ್ ಮಂಜಣ್ಣ, ಆರನೇಕಲ್ಲು ವಿಜಯಕುಮಾರ, ಶಂಕರಗೌಡ ಬಿರಾದಾರ್, ಸೋಗಿ ಗುರು, ಕಿಶೋರ ಕುಮಾರ, ಕೆಟಿಜೆ ನಗರ ಬಿ.ಆನಂದ, ಕೆಟಿಜೆ ನಗರ ಲೋಕೇಶ ಇತರರು ಪ್ರತಿಭಟನೆಯಲ್ಲಿದ್ದರು.- - -
-3ಕೆಡಿವಿಜಿ7: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಹಾಲಿನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಯಿತು.-3ಕೆಡಿವಿಜಿ8: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಹಾಲಿನ ಬೆಲೆ ಏರಿಕೆ ಖಂಡಿಸಿ ರಸ್ತೆಯಲ್ಲೇ ಬ್ಲ್ಯಾಕ್ ಟೀ ಮಾಡಿ, ಪ್ರತಿಭಸಲಾಯಿತು.