ಹಾಲಿನ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೌದೆ ಒಲೆ ಉರಿಸಿ ಹಾಲು ಕಾಯಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿ, ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಾಲಿನ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೌದೆ ಒಲೆ ಉರಿಸಿ ಹಾಲು ಕಾಯಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿ, ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಶನಿವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ರೈತಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು, ಹಾಲಿನ ಪಾಕೆಟ್‌ ಪ್ರದರ್ಶಿಸಿದ್ದಲ್ಲದೆ ಹಸು ಹಿಡಿದುಕೊಂಡು ಕಿಡಿಕಾರಿದರು. ಸೌದೆ ಒಲೆ ಉರಿಸಿ ಹಾಲು ಕಾಯಿಸುವ ಮೂಲಕ ಹಾಲಿನ ದರ ಏರಿಕೆಯನ್ನು ವಿರೋಧಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾನಿರತರು ಹಾಲಿನ ದರ, ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಬರೆ ಭಾಗ್ಯ ಕೊಟ್ಟಿದೆ ಟೀಕಾಪ್ರಹಾರ ನಡೆಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ವಿಪರೀತ ಹೊರೆ ಆಗಿದ್ದು, ಹೆಚ್ಚಿಸಿದ ದರವನ್ನು ವಾಪಸ್ ಪಡೆಯಬೇಕು. ರೈತರಿಗೆ ಬರೆ ಹಾಕುವ ಸರ್ಕಾರದ ನೀತಿ ನಿರ್ಧಾರಗಳನ್ನು ಬದಲಿಸಬೇಕು ಎಂದು ಆಗ್ರಹಿಸಿದರು.

ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರು. ಕಿಸಾನ್ ಸಮ್ಮಾನ್ ಮೊತ್ತವನ್ನು ರೈತರ ಖಾತೆಗೆ ವರ್ಗಾಯಿಸಬೇಕು. ಕಳೆದ ಎಂಟು ತಿಂಗಳಿಂದ 957 ಕೋಟಿ ರು. ಹಾಲು ಉತ್ಪಾದಕರಿಗೆ ಕೊಡಬೇಕಾದ ಮೊತ್ತ ಬಾಕಿ ಉಳಿದಿದೆ. ಅದನ್ನು ಕೂಡಲೇ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು. ಬಿತ್ತನೆ ಬೀಜ, ಗೊಬ್ಬರದ ದರ ಗಗನಕ್ಕೆ ಹೆಚ್ಚಳವಾಗಿದ್ದು, ಹಿಂದಿನ ದರದಲ್ಲಿಯೇ ಸಿಗುವಂತೆ ಕ್ರಮ ಕೈಗೊಳ್ಳಬೇಕು. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವಾಗಿ 6 ಸಾವಿರದಿಂದ 18 ಸಾವಿರ ರು. ವರೆಗೆ ನೀಡಲಾಗುತ್ತಿತ್ತು. ಅದನ್ನು ಮತ್ತೆ ಪುನರಾರಂಭಿಸುವಂತೆ ಒತ್ತಾಯಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಮಾತನಾಡಿ, ಗ್ರಾಹಕರು ಒಂದು ಲೀಟರ್‌ಗೆ 50 ಮಿ.ಲೀ.ಹೆಚ್ಚು ಕೊಡಲು ಕೇಳಿದ್ದಾರಾ? ಸರ್ಕಾರವು ತನ್ನ ಹಾಲಿನ ದರ ಏರಿಕೆಯ ನಿರ್ಧಾರವನ್ನು ಸಮರ್ಥಿಸಲು ಮೊಂಡುವಾದವನ್ನು ಮುಂದಿಡುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಆಡಳಿತ ವೇಳೆ ಇದ್ದಾಗ ರೈತರಿಗೆ ಹಾಲಿಗೆ 2 ರು.ನಿಂದ 5 ರು.ಗೆ ಪ್ರೋತ್ಸಾಹಧನ ಕೊಡಲಾಗುತ್ತಿತ್ತು. ಕಾಂಗ್ರೆಸ್‌ ಸರ್ಕಾರ ಪ್ರೋತ್ಸಾಹಧನವನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.