ರೈತರಿಗಾಗಿ ಹಾಲಿನ ದರ ಏರಿಕೆ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Mar 29 2025, 12:31 AM IST

ರೈತರಿಗಾಗಿ ಹಾಲಿನ ದರ ಏರಿಕೆ: ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಒಂದು‌ ಲೀಟರ್‌ ನೀರಿಗೆ ಇರುವ ಬೆಲೆ ಹಾಲಿಗೆ ಇಲ್ಲ. ನಮಗೂ ಹಾಲಿನ ದರ ಹೆಚ್ಚಿಸಿ ಎಂದು ರೈತರು ಆಗ್ರಹ ಮಾಡುತ್ತಿದ್ದರು. ರೈತರಿಗೆ 4 ರು. ಕೊಡುವುದು ತಪ್ಪಾ?. ರೈತರಿಗೆ ಹಣ ಕೊಡುವುದನ್ನು ಖಂಡಿಸಿ ಬಿಜೆಪಿ, ಜೆಡಿಎಸ್‌ ಪ್ರತಿಭಟನೆ ಮಾಡುತ್ತಾರೆ. ರೈತರಿಗೆ ಕೊಡೋ ಹಣದಲ್ಲೂ ರಾಜಕೀಯ ಬೆರೆಸಿದರೆ ಏನು ಹೇಳೋಣ.

ಕನ್ನಡಪ್ರಭ ವಾರ್ತೆ ಮದ್ದೂರು

ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಸಲುವಾಗಿ ಹಾಲಿನ ದರವನ್ನು 4 ರು. ಹೆಚ್ಚಿಸಲಾಗಿದೆ. ಆ ಹಣ ಸಂಪೂರ್ಣವಾಗಿ ರೈತರಿಗೆ ಸೇರಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಶು ಆಹಾರ, ಸಾಕಾಣಿಕೆ ವೆಚ್ಚ ಎಲ್ಲಾ ಅಧಿಕವಾಗಿದೆ. ಕೇರಳದಲ್ಲಿ ಪ್ರತಿ ಲೀಟರ್‌ ಹಾಲಿನ ಬೆಲೆ 57 ರು., ಆಂಧ್ರದಲ್ಲಿ 62 ರು, ಮಹಾರಾಷ್ಟ್ರ, ತೆಲಂಗಾಣದಲ್ಲೂ ಬೆಲೆ ಹೆಚ್ಚಿದೆ. ಆದರೆ, ಕರ್ನಾಟಕದಲ್ಲಿ ಪ್ರತಿ ಲೀಟರ್‌ಗೆ 42 ರು. ಇದೆ. ಇದು ರೈತರಿಗೆ ಉತ್ತಮ ಬೆಲೆ ನೀಡಲು ಸಾಲುವುದಿಲ್ಲ. ಅದಕ್ಕಾಗಿ ದರ ಹೆಚ್ಚಳ ಮಾಡಿರುವುದಾಗಿ ಹೇಳಿದರು.

ಪ್ರಸ್ತುತ ಒಂದು‌ ಲೀಟರ್‌ ನೀರಿಗೆ ಇರುವ ಬೆಲೆ ಹಾಲಿಗೆ ಇಲ್ಲ. ನಮಗೂ ಹಾಲಿನ ದರ ಹೆಚ್ಚಿಸಿ ಎಂದು ರೈತರು ಆಗ್ರಹ ಮಾಡುತ್ತಿದ್ದರು. ರೈತರಿಗೆ 4 ರು. ಕೊಡುವುದು ತಪ್ಪಾ?. ರೈತರಿಗೆ ಹಣ ಕೊಡುವುದನ್ನು ಖಂಡಿಸಿ ಬಿಜೆಪಿ, ಜೆಡಿಎಸ್‌ ಪ್ರತಿಭಟನೆ ಮಾಡುತ್ತಾರೆ. ರೈತರಿಗೆ ಕೊಡೋ ಹಣದಲ್ಲೂ ರಾಜಕೀಯ ಬೆರೆಸಿದರೆ ಏನು ಹೇಳೋಣ ಎಂದು ಪ್ರಶ್ನಿಸಿದರು.

ದರ ಏರಿಕೆಯಿಂದ ಬಂದ ಹಣದಲ್ಲಿ ಒಂದು ರುಪಾಯಿಯನ್ನು ಕೆಎಂಎಫ್ ಇಟ್ಟುಕೊಳ್ಳುವ ಹಾಗಿಲ್ಲ. 46 ರು. ಹಣವನ್ನು ನೇರವಾಗಿ ರೈತರಿಗೆ ಕೊಡಬೇಕೆಂದು ತೀರ್ಮಾನಿಸಲಾಗಿದೆ. ಹಾಲು ತೆಗೆದುಕೊಂಡ ಮೇಲೆ ಮೊಸರು‌ ಇತರೆ ಉತ್ಪನ್ನಗಳ ಬೆಲೆಗಳೂ ಹೆಚ್ಚಾಗಲಿವೆ. ಹೀಗಾಗಿ ಮೊಸರಿನ ಬೆಲೆಯೂ ಹೆಚ್ಚಾಗಿದೆ. ಏಪ್ರಿಲ್‌ 1 ರಿಂದಲೇ ರೈತರಿಗೆ 4 ರುಪಾಯಿ ಸಿಗುತ್ತೆ ಎಂದರು.

ರೈತರ ಪ್ರೋತ್ಸಾಹ ದನ 600 ರು. ಬಾಕಿ ಇತ್ತು. ಈಗಾಗಲೇ 100 ರು. ಬಿಡುಗಡೆ ಆಗಿದೆ. ಇನ್ನು 4 ದಿನಗಳ‌ ಒಳಗೆ ಉಳಿದ ಹಣ ನೀಡಲಾಗುವುದು ಎಂದರು.

ವಿದ್ಯುತ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾವು ಉಚಿತ ವಿದ್ಯುತ್ ನೀಡುತ್ತಿದ್ದೇವೆ. ವಿದ್ಯುತ್ ಡಿಮ್ಯಾಂಡ್ ಹೆಚ್ಚಾದಂತೆ ದರವೂ ಹೆಚ್ಚಾಗಬೇಕಲ್ಲವೇ. ಒಂದೇ ಬಾರಿ ಎಲ್ಲವನ್ನೂ ಮಾಡಲಾಗುವುದಿಲ್ಲ. ವಿದ್ಯುತ್ ನಿಯಂತ್ರಣ ಮಾಡಲು ಒಂದು ಬೋರ್ಡ್ ಇದೆ. ಆ ಬೋರ್ಡ್ ಹೆಚ್ಚು ಮಾಡೋದು, ಸರ್ಕಾರ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ಶೇ.3ರ ಒಳಗಡೆಯೇ ಸಾಲ ಪಡೆದಿದ್ದೇವೆ. ಶೇ.25ರೊಳಗೇ 25 ಜಿಎಸ್‌ಟಿ ಇದೆ. ಕೇಂದ್ರ ಸರ್ಕಾರದವರು ಅದನ್ನು ಮೀರಿ ಸಾಲ ಮಾಡಿದ್ದಾರೆ. ನಮ್ಮ ಸಿಎಂ ಎಲ್ಲಾ ಕೇಂದ್ರ ಸರ್ಕಾರದ ಮಿತಿಯಲ್ಲಿಯೇ ಸಾಲ ಮಾಡಿರುವುದಾಗಿ ಹೇಳಿದರು.

ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಛತ್ರಿ ಬುದ್ಧಿ ನನಗಿಲ್ಲ ಎಂಬ ಎಚ್‌ಡಿಕೆ ಹೇಳಿಕೆಗೆ, ಅವರಿಗೆ ಛತ್ರಿ ಬುದ್ಧಿ ಇಲ್ಲ ಅಂದ್ರೆ ಅವರ ಅಣ್ಣನಿಗೆ ಇದ್ಯಾ? ಎಂದು ಪ್ರಶ್ನಿಸಿದರು.

ಮಂಡ್ಯ ಕೃಷಿ ವಿವಿಗೆ ಹಾಸನ ಕೃಷಿ ಕಾಲೇಜುಗಳನ್ನು ಸೇರಿಸದಂತೆ ರಾಜ್ಯಪಾಲರಿಗೆ ರೇವಣ್ಣ ಲೆಟರ್ ಕೊಟ್ಟಿದ್ದಾರೆ. ಕುಮಾರಸ್ವಾಮಿ, ರೇವಣ್ಣ ಇಬ್ಬರೂ ದೇವೇಗೌಡರ ಮಕ್ಕಳು. ಮಂಡ್ಯದಲ್ಲಿ 8 ಜನ ಗೆದ್ದಾಗ ಸಿಎಂ ಆಗಿದ್ದು ಕುಮಾರಸ್ವಾಮಿ. ಮಂಡ್ಯದಿಂದ ಗೆದ್ದು ಕೇಂದ್ರ ಸಚಿವ ಆಗಿರೋದು ಕುಮಾರಸ್ವಾಮಿ. ಇವತ್ತು ಅವರ ಅಣ್ಣನಿಗೆ ಅವರು ಹೇಳೋಕೆ ಆಗುತ್ತಿಲ್ಲ ಎಂದರೆ ಏನು ಹೇಳೋಣ ಎಂದು ಪ್ರಶ್ನಿಸಿದರು.